ನ.23ರಿಂದ ಭಾರತ-ಆಸ್ಟ್ರೇಲಿಯಾ ಟಿ20 ಸರಣಿ, ಸೂರ್ಯಕುಮಾರ್‌ಗೆ ನಾಯಕತ್ವ ಸಾಧ್ಯತೆ!
ಐಸಿಸಿ ವಿಶ್ವಕಪ್ ಸೋಲಿನ ನೋವಿನಿಂದ ಯಾರೂ ಹೊರಬಂದಿಲ್ಲ. ಇದೀಗ ವಿಶ್ವಕಪ್ ಟೂರ್ನಿ ಮುಗಿದ ಮೂರೇ ದಿನಕ್ಕೆ ಭಾರತ-ಆಸ್ಟ್ರೇಲಿಯಾ ಟಿ20 ಸರಣಿ ಆರಂಭಗೊಳ್ಳುತ್ತಿದೆ. ಕೊಹ್ಲಿ, ರೋಹಿತ್ ಸೇರಿ ಹಿರಿಯರಿಗೆ ವಿಶ್ರಾಂತಿ ನೀಡಿ, ಸೂರ್ಯಕುಮಾರ್ ಯಾದವ್‌ಗೆ ನಾಯಕತ್ವ ನೀಡುವ ಸಾಧ್ಯತೆ ಇದೆ.
ಮುಂಬೈ(ನ.20) ಐಸಿಸಿ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ. ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿರುವ ಟೀಂ ಇಂಡಿಯಾ ಇದೀಗ ಮತ್ತೆ ಆಸ್ಟ್ರೇಲಿಯಾ ವಿರುದ್ಧದ ಹೋರಾಟಕ್ಕೆ ಸಜ್ಜಾಗಿದೆ. ನವೆಂಬರ್ 23ರಿಂದ 5 ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳುತ್ತಿದೆ. ಭಾರತ ಆತಿಥ್ಯವಹಿಸಿರುವ ಈ ಟೂರ್ನಿ ವಿಶಾಖಪಟ್ಟಣದಿಂದ ಆರಂಭಗೊಳ್ಳುತ್ತಿದೆ. ಬಿಸಿಸಿಐ ಶೀಘ್ರದಲ್ಲೇ ಟಿ20 ತಂಡ ಪ್ರಕಟಿಸಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹರಿಯರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ದಟ್ಟವಾಗಿದೆ. ಇತ್ತ ರೋಹಿತ್ ಅನುಪಸ್ಥಿತಿಯಲ್ಲಿ ಟಿ20 ನಾಯಕತ್ವ ವಹಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಇಂಜುರಿಗೆ ತುತ್ತಾಗಿ ಹೊರಗುಳಿದಿದ್ದಾರೆ. ಹೀಗಾಗಿ ಸೂರ್ಯಕುಮಾರ್ ಯಾದವ‌್‌ಗೆ ಟಿ20 ನಾಯಕತ್ವ ನೀಡುವ ಸಾಧ್ಯತೆ ಇದೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಕ್ರಿಕೆಟಿಗರಿಗೆ ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿಗೆ ವಿಶ್ರಾಂತಿ ನೀಡಿ, ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿ ವೇಳೆ ಹಿಂತಿರುಗುವ ಸಾಧ್ಯತೆ ಇದೆ. ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿದೆ. ಬುಮ್ರಾ ಬದಲು ಕರ್ನಾಟಕ ವೇಗಿ ಪ್ರಸಿದ್ಧ್ ಕೃಷ್ಣ ತಂಡ ಸೇರಿಕೊಳ್ಳಲಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಪ್ರಸಿದ್ಧ್ ಕೃಷ್ಣ ಟಿ20 ಮಾದರಿಗೆ ಪಾದರ್ಪಣೆ ಮಾಡಿದ್ದರು.
ವಿಶ್ವಕಪ್ 2023ರ ವಿಶ್ವ ತಂಡ ಪ್ರಕಟಿಸಿದ ಐಸಿಸಿ; ರೋಹಿತ್‌ಗೆ ನಾಯಕತ್ವ, 6 ಭಾರತೀಯರಿಗೆ ಸ್ಥಾನ!
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಭಾರತ ತಂಡದ ಬಹುತೇಕರು ಅವಕಾಶ ಪಡೆಯುವ ಸಾಧ್ಯತೆ ಇದೆ. ಇಶಾನ್ ಕಿಶನ್ ಸೇರಿದಂತೆ ಯುವ ಕ್ರಿಕೆಟಿಗರಿಗೆ ಬಿಸಿಸಿಐ ಅವಕಾಶ ನೀಡುವ ಸಾಧ್ಯತೆ ಇದೆ.
ನವೆಂಬರ್ 23 ರಿಂದ ಡಿಸೆಂಬರ್ 03ರ ವರೆಗೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿ ನಡೆಯಲಿದೆ. ವಿಶಾಖಪಟ್ಟಣದಲ್ಲಿ ಮೊದಲ ಟಿ20 ಪಂದ್ಯ ಆಯೋಜಿಸಲಾಗಿದೆ. ಎಲ್ಲಾ ಪಂದ್ಯಗಳು ಸಂಜೆ 7 ಗಂಟೆಗೆ ಆರಂಭಗೊಳ್ಳಲಿದೆ. ಎರಡನೇ ಟಿ20 ಪಂದ್ಯ ತಿರುವಂತಪುರದಲ್ಲಿ ನವೆಂಬರ್ 26ಕ್ಕೆ ಆಯೋಜನೆಗೊಂಡಿದೆ. ನವೆಂಬರ್ 28ರಂದು ಗುವ್ಹಾಟಿಯಲ್ಲಿ 3ನೇ ಟಿ20 ಪಂದ್ಯ ನಡೆಯಲಿದೆ. ಇನ್ನು ಡಿಸೆಂಬರ್ 1 ರಂದು ನಾಗ್ಪುರದಲ್ಲಿ 4ನೇ ಹಾಗೂ ಡಿಸೆಂಬರ್ 3 ರಂದು ಹೈದರಾಬಾದ್‌ನಲ್ಲಿ 5ನೇ ಹಾಗೂ ಅಂತಿಮ ಟಿ20 ಪಂದ್ಯ ನಡೆಯಲಿದೆ.
ಫೈನಲ್ ಸೋಲಿನ ನೋವಿನಿಂದ ಹೊರಬರಲು ರಜೆ ಕೇಳಿದ ವಿದ್ಯಾರ್ಥಿ, ಇ-ಮೇಲ್ ವೈರಲ್!
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಬಳಿಕ ಟೀಂ ಇಂಡಿಯಾ ಸಂಪೂರ್ಣ ತಂಡದ ಜೊತೆ ಸೌತ್ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಸೌತ್ ಆಫ್ರಿಕಾ ವಿರುದ್ದ ಭಾರತ 3 ಟಿ20, 3 ಏಕದಿನ ಪಂದ್ಯ ಹಾಗೂ 2 ಟೆಸ್ಟ್ ಪಂದ್ಯದ ಸರಣಿ ಆಡಲಿದೆ.