* ಭಾರತ-ಆಸ್ಟ್ರೇಲಿಯಾ ಎರಡನೇ ಟಿ20 ಪಂದ್ಯಕ್ಕೆ ಕ್ಷಣಗಣನೆ* ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿರುವ ರೋಹಿತ್ ಶರ್ಮಾ ಪಡೆ* ಟೀಂ ಇಂಡಿಯಾ ಆತ್ಮವಿಶ್ವಾಸ ಹೆಚ್ಚಿಸಿದ ಬುಮ್ರಾ ವಾಪಾಸಾತಿ
ನಾಗ್ಪುರ(ಸೆ.23): ವಿಶ್ವ ಚಾಂಪಿಯನ್ ಆಸ್ಪ್ರೇಲಿಯಾ ವಿರುದ್ಧ 2ನೇ ಟಿ20 ಪಂದ್ಯ ಶುಕ್ರವಾರ ನಡೆಯಲಿದ್ದು, ಭಾರತ ಸರಣಿ ಸೋಲನ್ನು ತಪ್ಪಿಸಿಕೊಳ್ಳಲು ಎದುರು ನೋಡುತ್ತಿದೆ. ಐಸಿಸಿ ಟಿ20 ವಿಶ್ವಕಪ್‌ಗೆ ಕೇವಲ ಒಂದು ತಿಂಗಳು ಬಾಕಿ ಇದ್ದರೂ ಭಾರತಕ್ಕೆ ಹಲವು ಸಮಸ್ಯೆಗಳು ಕಾಡುತ್ತಿದೆ. ಕಳಪೆ ಬೌಲಿಂಗ್ ಈ ಪೈಕಿ ಪ್ರಮುಖವಾದದ್ದು.
ಮುಂಚೂಣಿ ವೇಗಿ ಜಸ್‌ಪ್ರೀತ್ ಬುಮ್ರಾ ಈ ಪಂದ್ಯದಲ್ಲಿ ತಂಡಕ್ಕೆ ವಾಪಸಾಗಲಿದ್ದು, ಸಮಸ್ಯೆಗೆ ಪರಿಹಾರ ಹುಡುಕಿಕೊಡುವ ನಿರೀಕ್ಷೆ ಮೂಡಿಸಿದ್ದಾರೆ. ಇಂಗ್ಲೆಂಡ್ ಪ್ರವಾಸದ ಬಳಿಕ ಗಾಯದ ಸಮಸ್ಯೆಯಿಂದಾಗಿ ಬೂಮ್ರಾ ತಂಡದಿಂದ ಹೊರಗಿದ್ದರು. ಏಷ್ಯಾಕಪ್‌ಗೂ ಅವರು ಲಭ್ಯವಿರಲಿಲ್ಲ. ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಬುಮ್ರಾರನ್ನು ಕಣಕ್ಕಿಳಿಸದೆ ಇದ್ದಿದ್ದು ಅವರ ಫಿಟ್ನೆಸ್ ಬಗ್ಗೆ ಅನುಮಾನ ಮೂಡಿಸಿತ್ತು. ಆದರೆ ನಾಯಕ ರೋಹಿತ್, ಬುಮ್ರಾ 2ನೇ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಖಚಿತಪಡಿಸಿದ್ದರು.
ಹಾರ್ದಿಕ್ ಪಾಂಡ್ಯ ಸೇರಿ ಐವರು ಬೌಲರ್‌ಗಳ ತಂತ್ರ ಭಾರತದ ಕೈಹಿಡಿಯುತ್ತಿಲ್ಲ. ಇತ್ತೀಚೆಗೆ ಬೌಲಿಂಗ್ ಪಡೆ ಮುನ್ನಡೆಸಿದ್ದ ಭುವನೇಶ್ವರ್ ಕುಮಾರ್‌ರನ್ನು ಎದುರಾಳಿಗಳು ಚೆಂಡಾಡುತ್ತಿದ್ದಾರೆ. ಪಾಕಿಸ್ತಾನ, ಶ್ರೀಲಂಕಾ ಹಾಗೂ ಆಸ್ಪ್ರೇಲಿಯಾ ವಿರುದ್ಧ ಎಂದರೆ ಕಳೆದ 3 ಪಂದ್ಯಗಳಲ್ಲಿ ಅವರು ಎಸೆದ 19ನೇ ಓವರಲ್ಲಿ ಒಟ್ಟು 49 ರನ್ ಚಚ್ಚಿಸಿಕೊಂಡಿದ್ದಾರೆ. ಇದೀಗ ಬುಮ್ರಾ ಆಗಮನದಿಂದ ಬೌಲಿಂಗ್ ಸಂಯೋಜನೆಯಲ್ಲಿ ಕೆಲ ಬದಲಾವಣೆ ನಿರೀಕ್ಷೆ ಮಾಡಬಹುದಾಗಿದೆ. ಸ್ಪಿನ್ ಟ್ರಂಪ್‌ಕಾರ್ಡ್ ಯಜುವೇಂದ್ರ ಚಹಲ್ ಲಯ ಕಳೆದುಕೊಂಡಿದ್ದಾರೆ. ಹರ್ಷಲ್ ಇನ್ನೂ ಸಂಪೂರ್ಣ ಫಿಟ್ ಆದಂತೆ ಕಾಣುತ್ತಿಲ್ಲ. ಹೀಗಾಗಿ ಬುಮ್ರಾ ಮೇಲೆ ದೊಡ್ಡ ಜವಾಬ್ದಾರಿ ಇದೆ.
ಭುವಿ ಗುಡ್ ಫಿನಿಶರ್: ವೇಗಿ ಭುವನೇಶ್ವರ್ ಬೆಂಬಲಕ್ಕೆ ನಿಂತ ಮ್ಯಾಥ್ಯೂ ಹೇಡನ್
ಬ್ಯಾಟಿಂಗ್‌ನಲ್ಲಿ ಭಾರತ ಆಕ್ರಮಣಕಾರಿ ಆಟವನ್ನು ಮುಂದುವರಿಸಬೇಕಿದೆ. ಅಗ್ರ ಮೂವರು ಬ್ಯಾಟರ್‌ಗಳು ಉತ್ತಮ ಸ್ಟ್ರೈಕ್‌ರೇಟ್‌ನೊಂದಿಗೆ ರನ್ ಕಲೆಹಾಕಬೇಕಿದ್ದು, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ ಅಥವಾ ದಿನೇಶ್ ಕಾರ್ತಿಕ್‌ಗೆ ಒತ್ತಡವಿಲ್ಲದೆ ಆಡಲು ಅವಕಾಶ ಕಲ್ಪಿಸಬೇಕಿದೆ.
ಮತ್ತೊಂದೆಡೆ ಆಸ್ಪ್ರೇಲಿಯಾ ತನ್ನ ತಾರಾ ಆಟಗಾರರಾದ ಡೇವಿಡ್ ವಾರ್ನರ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಮಾರ್ಷ್ ಹಾಗೂ ಮಾರ್ಕಸ್ ಸ್ಟೋಯ್ನಿಸ್ ಇಲ್ಲದಿದ್ದರೂ ಮೊದಲ ಪಂದ್ಯದಲ್ಲಿ ಅಬ್ಬರಿಸಿತ್ತು. ತಂಡ ಅದೇ ಪ್ರದರ್ಶನ ಮುಂದುವರಿಸಿ ಸರಣಿ ಗೆಲ್ಲಲು ಕಾತರಿಸುತ್ತಿದೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ(ನಾಯಕ), ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್/ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ರವಿಚಂದ್ರನ್ ಚಹಲ್.
ಆಸ್ಪ್ರೇಲಿಯಾ: ಆರೋನ್ ಫಿಂಚ್(ನಾಯಕ), ಕ್ಯಾಮರೋನ್ ಗ್ರೀನ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ನೇಥನ್ ಎಲ್ಲೀಸ್, ಜೋಶ್ ಹೇಜಲ್‌ವುಡ್, ಆಡಂ ಜಂಪಾ.
ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪಿಚ್ ರಿಪೋರ್ಚ್
ನಾಗ್ಪುರದ ವಿಸಿಎ ಕ್ರಿಕೆಟ್ ಮೈದಾನದ ಪಿಚ್ ನಿಧಾನಗತಿಯದ್ದಾಗಿರುವ ನಿರೀಕ್ಷೆ ಇದೆ. ಹೀಗಾಗಿ ಬೌಲರ್‌ಗಳ ಪಾತ್ರ ಬಹಳ ಮುಖ್ಯವೆನಿಸಲಿದೆ. ಸಂಜೆ ಬಳಿಕ ಇಬ್ಬನಿ ಬೀಳುವ ಸಾಧ್ಯತೆ ಹೆಚ್ಚಿದ್ದು ತಂಡಗಳು ಮೊದಲು ಫೀಲ್ಡ್ ಮಾಡಲು ನಿರ್ಧರಿಸಿದೆ ಅಚ್ಚರಿಯಿಲ್ಲ.
