* ಕೋವಿಡ್ ನಿಯಮ ಪಾಲಿಸದೇ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ರೋಹಿತ್, ವಿರಾಟ್* ಯಾವ ಆಟಗಾರನೂ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಇಲ್ಲದೆ ಓಡಾಡ ಬೇಡಿ ಎಂದು ಬಿಸಿಸಿಐ ಸಲಹೆ* ಇನ್ನು ಕೋವಿಡ್ ರೂಲ್ಸ್‌ ಪಾಲಿಸಲು ಹೋಗಿ ಅಭಿಮಾನಿಗಳ ಟೀಕೆಗೆ ಗುರಿಯಾದ ಯುವ ಕ್ರಿಕೆಟಿಗ

ಲಂಡನ್(ಜೂ.28): 2007ರ ನಂತರ ಅಂದರೆ ಬರೋಬ್ಬರಿ 15 ವರ್ಷಗಳ ನಂತರ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಟೀಂ ಇಂಡಿಯಾ ಆಂಗ್ಲರ ನಾಡಿಗೆ ಬಂದಿಳಿದಿದೆ. ರಾಹುಲ್ ದ್ರಾವಿಡ್ ಕ್ಯಾಪ್ಟನ್ಸಿಯಲ್ಲಿ ಗೆದ್ದ ನಂತರ ಕ್ರಿಕೆಟ್ ಜನಕರ ನಾಡಲ್ಲಿ ಭಾರತ ಕ್ರಿಕೆಟ್‌ ತಂಡ ಟೆಸ್ಟ್ ಸರಣಿ ಗೆದ್ದಿಲ್ಲ. ಈಗ ರಾಹುಲ್ ದ್ರಾವಿಡ್ (Rahul Dravid) ಕೋಚ್ ಆಗಿದ್ದು, ಅವರ ಮಾರ್ಗದರ್ಶನದಲ್ಲಿ ಗೆಲ್ಲಲು ಎದುರು ನೋಡ್ತಿದೆ. 2-1ರಿಂದ ಸರಣಿಯಲ್ಲಿ ಮುನ್ನಡೆಯಲ್ಲಿದ್ದು, 5ನೇ ಟೆಸ್ಟ್ ಡ್ರಾ ಮಾಡಿಕೊಂಡರೂ ಸರಣಿ ನಮ್ಮದಾಗಲಿದೆ. ಆದ್ರೆ ಸರಣಿ ಗೆಲ್ಲೋ ಕನಸಿಗೆ ಆಟಗಾರರೇ ಕೊಳ್ಳಿ ಇಡುತ್ತಿದ್ದಾರೆ.

ಹೌದು, ಸದ್ಯದ ಪರಿಸ್ಥಿತಿ ನೋಡಿದರೆ ಆಟಗಾರರಿಗೆ ಇಂಗ್ಲೆಂಡ್​ನಲ್ಲಿ ಟೆಸ್ಟ್​ ಸರಣಿ ಗೆಲ್ಲೋ ಹಂಬಲವಿಲ್ಲ ಅನಿಸ್ತಿದೆ. ಕೋವಿಡ್​-19 (COVID 19) ಇನ್ನೂ ಜೀವಂತವಾಗಿ ಇರೋದ್ರಿಂದ ಯಾವ ಆಟಗಾರನೂ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಇಲ್ಲದೆ ಓಡಾಡ ಬೇಡಿ ಎಂದು ಬಿಸಿಸಿಐ ಸಲಹೆ ನೀಡಿತ್ತು. ಅದರಂತೆ ಕೆಲ ಆಟಗಾರರು ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದರೆ, ಇನ್ನು ಕೆಲವರು ಬಿಸಿಸಿಐ ಮಾತಿಗೆ ಬೆಲೆನೇ ಕೊಡ್ತಿಲ್ಲ. ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಮಾಸ್ಕ್ ಹಾಕಿಕೊಳ್ಳದೆ ಇಂಗ್ಲೆಂಡ್​ನಲ್ಲಿ ಬೀದಿ ಬೀದಿ ಸುತ್ತುತ್ತಿದ್ದಾರೆ.

ಬಿಸಿಸಿಐ ಸಲಹೆ ತಿರಸ್ಕರಿಸಿದ ರೋಹಿತ್ ವಿರುದ್ಧ ಕೆಂಡಮಂಡಲ: 

ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಮಾಸ್ಕ್ ಇಲ್ಲದೆ ಶಾಪಿಂಗ್ ಮಾಡಲು ಹೋಗಿದ್ದರು. ರವೀಂದ್ರ ಜಡೇಜಾ ಹಾಗೂ ರಿಷಭ್ ಪಂತ್ ಮಾಸ್ಕ್ ಇಲ್ಲದೆ ಓಡಾಡಿದ್ದಾರೆ. ರೋಹಿತ್​ ಶರ್ಮಾ - ವಿರಾಟ್ ಕೊಹ್ಲಿ ಫ್ಯಾನ್ಸ್ ಜೊತೆ ಫೋಟೋ ಬೇರೆ ತೆಗೆಸಿಕೊಂಡಿದ್ದಾರೆ. ಹಾಗಾಗಿಯೇ ರೋಹಿತ್​ಗೆ ಕೋವಿಡ್​​ ಲಕ್ಷಣಗಳು ಕಾಣಿಸಿಕೊಂಡಿರೋದು. ಇದರಿಂದ ಕುಪಿತಗೊಂಡಿರುವ ಬಿಸಿಸಿಐ, ರೋಹಿತ್ ವಿರುದ್ಧ ಕೆಂಡಮಂಡಲವಾಗಿದೆ. ಎಷ್ಟೇ ಹೇಳಿದ್ರು ಮಾತು ಕೇಳ್ತಿಲ್ಲ ಅಂತ ವಾರ್ನ್​ ಸಹ ಮಾಡಿದೆ. ಸೀನಿಯರ್​ಗಳೇ ಹೀಗೆ ಮಾಡಿದ್ರೆ ಜೂನಿಯರ್ಸ್ ನಿಮ್ಮನ್ನ ಫಾಲೋ ಮಾಡದೆ ಬಿಡ್ತಾರಾ ಅಂತಲೂ ಹೇಳಿದೆ. ಒಟ್ನಲ್ಲಿ ರೋಹಿತ್ ವಿರುದ್ಧ ಬಿಸಿಸಿಐ ಗರಂ ಆಗಿದೆ.

ರೂಲ್ಸ್​ ಫಾಲೋ ಮಾಡಿ ಫ್ಯಾನ್ಸ್​ನಿಂದ ಬೈಯ್ಯಿಸಿಕೊಂಡ ಬೌಲರ್: 

ನೆಟ್ ಬೌಲರ್ ಆಗಿ ಇಂಗ್ಲೆಂಡ್​ಗೆ ಹೋಗಿರೋ ಕಮಲೇಶ್ ನಾಗರಕೋಟಿ, ಬಿಸಿಸಿಐ (BCCI) ರೂಲ್ಸ್ ಫಾಲೋ ಮಾಡಲು ಹೋಗಿ ಫ್ಯಾನ್ಸ್ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಅವರ ನೆರವಿಗೆ ಕಿಂಗ್ ಕೊಹ್ಲಿ ಬಂದಿದ್ದಾರೆ. ಪ್ರಾಕ್ಟೀಸ್ ಮ್ಯಾಚ್ ವೇಳೆ ಫ್ಯಾನ್ಸ್, ಕಮಲೇಶ್​​ಗೆ ಸೆಲ್ಫಿ ಕೇಳಿದ್ದಾರೆ. ಆದರೆ ಮಾಸ್ಕ್ ಹಾಕದ ನಾಗರಕೋಟಿ, ಸೆಲ್ಫಿ ನಿರಾಕರಿಸಿದ್ದಾರೆ. ಇದರಿಂದ ಕುಪಿತಗೊಂಡು ಫ್ಯಾನ್ಸ್, ಕಮಲೇಶ್ ಅವರನ್ನ ಹೀಯಾಳಿಸಿದ್ದಾರೆ. ಇದನ್ನ ಗಮನಿಸಿದ ಕಿಂಗ್ ಕೊಹ್ಲಿ, ಫ್ಯಾನ್ಸ್​ ವಿರುದ್ಧ ಗರಂ ಆಗಿ, ಅವರ ಬಾಯಿ ಮುಚ್ಚಿಸಿದ್ದಾರೆ. ಆ ವಿಡಿಯೋ ಈಗ ಸಖತ್ ವೈರಲ್ ಆಗಿದೆ.