* ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್‌ಗೆ ಲಗ್ಗೆ* ಆಸ್ಟ್ರೇಲಿಯಾ ವಿರುದ್ದ ಸೆಮಿಫೈನಲ್‌ನಲ್ಲಿ ಭಾರತಕ್ಕೆ 96 ರನ್‌ಗಳ ಜಯ* ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಇಂಗ್ಲೆಂಡ್ ಎದುರು ಸೆಣಸಾಟ

ಆ್ಯಂಟಿಗಾ(ಫೆ.03): ನಾಯಕ ಯಶ್ ಧುಳ್ (Yash Dhull) ಆಕರ್ಷಕ ಶತಕ, ಉಪನಾಯಕ ಶೇಕ್ ರಶೀದ್ (Shaik Rasheed) ಶತಕ ವಂಚಿತ ಅರ್ಧಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಐಸಿಸಿ ಅಂಡರ್ 19 ವಿಶ್ವಕಪ್‌ (ICC U-19 World Cup) ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ (Australia) ವಿರುದ್ದ 96 ರನ್‌ಗಳ ಅಂತರದ ಗೆಲುವು ಸಾಧಿಸುವ ಮೂಲಕ ಭಾರತ ಕಿರಿಯರ ತಂಡವು ಅಜೇಯವಾಗಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದರೊಂದಿಗೆ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಸತತ 4ನೇ ಬಾರಿಗೆ ಫೈನಲ್‌ ಪ್ರವೇಶಿಸಿದ ಮೊದಲ ತಂಡ ಎನ್ನುವ ಕೀರ್ತಿಗೆ ಭಾರತ ಪಾತ್ರವಾಗಿದೆ. 

ಇಲ್ಲಿನ ಕಾಲಿಡ್ಜ್ ಕ್ರಿಕೆಟ್‌ ಮೈದಾನದಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಕಿರಿಯರ ಕ್ರಿಕೆಟ್ ತಂಡವು ಸಂಘಟಿತ ಪ್ರದರ್ಶನ ತೋರುವ ಮೂಲಕ ಭರ್ಜರಿಯಾಗಿಯೇ ಫೈನಲ್‌ಗೆ ಲಗ್ಗೆಯಿಟ್ಟಿದೆ. ಟಾಸ್ ಗೆದ್ದ ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ಆರಂಭಿಕ ಆಘಾತ ಅನುಭವಿಸಿತಾದರೂ, ಇದಾದ ಬಳಿಕ ಮೂರನೇ ವಿಕೆಟ್‌ಗೆ ನಾಯಕ ಯಶ್ ಧುಳ್ ಹಾಗೂ ಉಪನಾಯಕ ಶೇಕ್ ರಶೀದ್ 204 ರನ್‌ಗಳ ಅಮೂಲ್ಯ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಯಶ್ ಧುಳ್‌ 110 ಎಸೆತಗಳನ್ನು ಎದುರಿಸಿ 110 ರನ್‌ ಬಾರಿಸಿದರೆ, 17 ವರ್ಷದ ಶೇಕ್ ರಶೀದ್ 94 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರು. ಇನ್ನು ಕೊನೆಯ ಓವರ್‌ನಲ್ಲಿ ಭಾರತ ಬರೋಬ್ಬರಿ 27 ರನ್‌ ಗಳಿಸುವ ಮೂಲಕ ಅಂತಿಮವಾಗಿ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 290 ರನ್‌ ಗಳಿಸಿತ್ತು. ಇನ್ನು ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಕೇವಲ 194 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಮುಖಭಂಗ ಅನುಭವಿಸಿತು.

ವಿರಾಟ್ ಕೊಹ್ಲಿ(Virat Kohli), ಉನ್ಮುಕ್ತ್ ಚಾಂದ್ ಬಳಿಕ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಶತಕ ಬಾರಿಸಿದ ಭಾರತದ ಮೂರನೇ ಬ್ಯಾಟರ್‌ ಎನ್ನುವ ಕೀರ್ತಿಗೆ ಯಶ್ ಧುಳ್ ಪಾತ್ರರಾದರು. ಕಾಕತಾಳೀಯವೆಂಬಂತೆ ಈ ಮೂವರು ಬ್ಯಾಟರ್‌ಗಳು ಡೆಲ್ಲಿ ಮೂಲದವರಾಗಿದ್ದಾರೆ.

Scroll to load tweet…

ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಆಸ್ಟ್ರೇಲಿಯಾ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದ ಭಾರತ ಆ ಬಳಿಕ ಬೌಲಿಂಗ್‌ನಲ್ಲೂ ಮಿಂಚಿನ ಪ್ರದರ್ಶನ ತೋರಿತು. ವೇಗಿ ರವಿ ಕುಮಾರ್ ಪಂದ್ಯದ ಎರಡನೇ ಓವರ್‌ನಲ್ಲೇ ಫಾರ್ಮ್‌ನಲ್ಲಿದ್ದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌ ಟ್ಯಾಗ್ಯೂ ವಿಲ್ಲೇಯನ್ನು ಎಲ್‌ಬಿ ಬಲೆಗೆ ಕೆಡಹುವಲ್ಲಿ ಯಶಸ್ವಿಯಾದರು. ಇದರ ಹೊರತಾಗಿಯೂ ಕ್ಯಾಂಪೆಲ್‌ ಕೆಲ್ಲವೇ ಹಾಗೂ ಕಾರ್ನೆ ಮಿಲ್ಲರ್ ಜೋಡಿ 70 ರನ್‌ಗಳ ಜತೆಯಾಟವಾಡುವ ಮೂಲಕ ಭಾರತೀಯ ಬೌಲರ್‌ಗಳ ಎದುರು ದಿಟ್ಟ ಪ್ರತಿರೋಧ ತೋರಿದರು. ಈ ಜೋಡಿ ನೆಲ ಕಚ್ಚಿ ಆಡುವ ಮೂಲಕ ಭಾರತೀಯರಿಗೆ ಅಪಾಯಕಾರಿಯಾಗುವ ಸೂಚನೆ ನೀಡಿದರು. ಈ ವೇಳೆ ಪಂದ್ಯದ 17ನೇ ಓವರ್‌ನಲ್ಲಿ 38 ರನ್‌ ಗಳಿಸಿದ್ದ ಮಿಲ್ಲರ್ ಅವರನ್ನು ಎಲ್‌ಬಿ ಬಲೆಗೆ ಕೆಡಹುವಲ್ಲಿ ರಘುವಂಶಿ ಯಶಸ್ವಿಯಾದರು.

Scroll to load tweet…

ICC U-19 World Cup: ಸೆಮೀಸ್‌ನಲ್ಲಿಂದು ಇಂಡೋ-ಆಸೀಸ್ ಸೆಣಸಾಟ

ಇದಾಗಿ ಮರು ಓವರ್‌ನಲ್ಲೇ ವಿಕ್ಕಿ ಓಸ್ತ್ವಾಲ್‌ 30 ರನ್ ಗಳಿಸಿದ್ದ ಕೆಲ್ಲವೇ ಅವರನ್ನು ಪೆವಿಲಿಯನ್ನಿಗಟ್ಟಿದರು. ಇನ್ನು ಲಚ್‌ಲನ್ ಶಾ 66 ಎಸೆತಗಳನ್ನು ಎದುರಿಸಿ 51 ರನ್‌ ಬಾರಿಸಿದರು. ಇದು ಆಸ್ಟ್ರೇಲಿಯಾ ಪರ ಸೆಮೀಸ್‌ನಲ್ಲಿ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿತು. ಇದಾದ ಬಳಿಕ ಆಸೀಸ್‌ನ ಯಾವೊಬ್ಬ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನೆಲೆಯೂರದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು. 

ಇದೀಗ ಫೆಬ್ರವರಿ 05ರಂದು ನಡೆಯಲಿರುವ ಐಸಿಸಿ ಅಂಡರ್ 19 ವಿಶ್ವಕಪ್ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಸೆಣಸಾಟ ನಡೆಸಲಿವೆ. ಕಳೆದ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.