* ಐಸಿಸಿ ಅಂಡರ್ 19 ವಿಶ್ವಕಪ್ ಸೆಮಿಫೈನಲ್‌ನಲ್ಲಿಂದು ಭಾರತ-ಆಸ್ಟ್ರೇಲಿಯಾ ಕಾದಾಟ* 8ನೇ ಬಾರಿಗೆ ಫೈನಲ್ ಪ್ರವೇಶಿಸುವ ಕನವರಿಕೆಯಲ್ಲಿದೆ ಭಾರತ* ಕಳೆದ ಬಾರಿ ರನ್ನರ್-ಅಪ್ ಆಗಿದ್ದ ಭಾರತ ತಂಡ 

ಆ್ಯಂಟಿಗಾ(ಫೆ.02): 4 ಬಾರಿ ಚಾಂಪಿಯನ್ ಭಾರತ ಹಾಗೂ ಆಸ್ಟ್ರೇಲಿಯಾ ಐಸಿಸಿ ಅಂಡರ್ 19 ಏಕದಿನ ವಿಶ್ವಕಪ್‌ನ (ICC U-19 World Cup) 2ನೇ ಸೆಮಿಫೈನಲ್ ಪಂದ್ಯದಲ್ಲಿ ಬುಧವಾರ ಮುಖಾಮುಖಿಯಾಗಲಿವೆ. ಕಳೆದ ಬಾರಿ ರನ್ನರ್-ಅಪ್ ಆಗಿದ್ದ ಭಾರತ 8ನೇ ಫೈನಲ್ ನಿರೀಕ್ಷೆಯಲ್ಲಿದ್ದರೆ, ಮೂರು ಬಾರಿ ಪ್ರಶಸ್ತಿ ವಿಜೇತ ಆಸೀಸ್ 6ನೇ ಬಾರಿ ಫೈನಲ್ ಪ್ರವೇಶಿಸುವ ಕಾತರದಲ್ಲಿದೆ. 

ಗುಂಪು ಹಂತದಲ್ಲಿ ಪ್ರಮುಖ ಆಟಗಾರರು ಕೋವಿಡ್‌ಗೆ (COVID 19) ತುತ್ತಾದ ಹೊರತಾಗಿಯೂ ಅಜೇಯವಾಗಿಯೇ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಭಾರತ, ಕ್ವಾರ್ಟರ್‌ನಲ್ಲಿ ಹಾಲಿ ಚಾಂಪಿ ಯನ್ ಬಾಂಗ್ಲಾದೇಶ ವಿರುದ್ಧ ಜಯಿಸಿತ್ತು. ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ವಿರುದ್ಧ ಗೆದ್ದು ಸೆಮೀಸ್ ತಲುಪಿತ್ತು. ಗುಂಪು ಹಂತದಲ್ಲಿ ಯಶ್ ಧುಳ್ (Yash Dhull) ಅನು ಪಸ್ಥಿತಿಯಲ್ಲಿ ತಂಡ ಮುನ್ನಡೆಸಿದ್ದ ನಿಶಾಂತ್ ಸಿಂಧು ಸೋಂಕಿನಿಂದ ಗುಣಮುಖರಾಗಿದ್ದು, ಆಯ್ಕೆಗೆ ಲಭ್ಯವಿರಲಿದ್ದಾರೆ. ವಿಶ್ವಕಪ್ ಆರಂಭಕ್ಕೂ ಮುನ್ನ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಭಾರತ ಮಣಿಸಿತ್ತು.

ಆಫ್ಘಾನಿಸ್ತಾನವನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಇಂಗ್ಲೆಂಡ್

ಆಫ್ಘಾನಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಅಂಡರ್‌ 19 ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 15 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಬರೋಬ್ಬರಿ 24 ವರ್ಷಗಳ ಬಳಿಕ ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿದೆ. 

ಒಂದು ಹಂತದಲ್ಲಿ 106 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಥಾಮಸ್ ಹಾಗೂ ಜಾರ್ಜ್‌ ಆಕರ್ಷಕ ಅರ್ಧಶತಕ ಚಚ್ಚುವ ಮೂಲಕ ತಂಡ 6 ವಿಕೆಟ್ ಕಳೆದುಕೊಂಡು 231 ರನ್ ಕಲೆಹಾಕಲು ನೆರವಾದರು. 

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಫ್ಘಾನಿಸ್ತಾನ ತಂಡಕ್ಕೆ ಎರಡನೇ ವಿಕೆಟ್‌ಗೆ ಮೊಹಮ್ಮದ್ ಇಶಾಕ್ ಹಾಗೂ ಅಲ್ಲಾ ನೂರ್ 93 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿ ಬೇರ್ಪಡುತ್ತಿದ್ದಂತೆ ಆಫ್ಘಾನಿಸ್ತಾನ ತಂಡವು ಕುಸಿತದತ್ತ ಮುಖ ಮಾಡಿತು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಅಬ್ದುಲ್ ಹಾದಿ(37), ಬಿಲಾಲ್‌ ಅಹ್ಮದ್(33) ಹಾಗೂ ನೂರ್ ಅಹಮ್ಮದ್(25) ಚುರುಕಾಗಿ ರನ್ ಗಳಿಸುವ ಮೂಲಕ ಆಫ್ಘಾನಿಸ್ತಾನ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಕೊನೆಯ ಮೂರು ಓವರ್‌ಗಳಲ್ಲಿ ಆಫ್ಘಾನಿಸ್ತಾನ ಗೆಲ್ಲಲು ಕೇವಲ 23 ರನ್‌ಗಳ ಅಗತ್ಯವಿತ್ತು. ಆದರೆ ಪೆನಾಲ್ಟಿ ಮೇಟ್‌ ಓವರ್‌ನಲ್ಲಿ ರೆಹಾನ್ ಅಹಮ್ಮದ್‌ ಕೇವಲ ಒಂದು ರನ್‌ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಆಫ್ಘಾನ್ ತಂಡಕ್ಕೆ ಶಾಕ್ ನೀಡಿದರು. ಅಂತಿಮವಾಗಿ ಆಫ್ಘಾನಿಸ್ತಾನ ತಂಡವು 9 ವಿಕೆಟ್ ಕಳೆದುಕೊಂಡು 215 ರನ್‌ ಗಳಿಸಲಷ್ಟೇ ಶಕ್ತವಾಯಿತು.

ICC U-19 World Cup : ಹಾಲಿ ಚಾಂಪಿಯನ್ ತಂಡವನ್ನು ಸೋಲಿಸಿ ಸೆಮಿಫೈನಲ್ ಹಂತಕ್ಕೇರಿದ ಭಾರತ

ಇಂಗ್ಲೆಂಡ್‌ ತಂಡವು 1998ರ ಬಳಿಕ ಮೊದಲ ಬಾರಿಗೆ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. 1998ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ ಅಂಡರ್‌ 19 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಇಂಗ್ಲೆಂಡ್ ಕಿರಿಯರ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ ಮೊದಲ ಬಾರಿಗೆ ಇಂಗ್ಲೆಂಡ್ ತಂಡವು ಇದೀಗ ಪ್ರಶಸ್ತಿ ಸುತ್ತು ತಲುಪಿದೆ. 

ಇದೀಗ ಎರಡನೇ ಸೆಮಿಫೈನಲ್‌ನಲ್ಲಿ ಬಲಿಷ್ಠ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಾಟ ನಡೆಸಲಿದ್ದು, ಎರಡನೇ ಸೆಮೀಸ್‌ನಲ್ಲಿ ವಿಜೇತರಾದ ತಂಡವು ಫೆಬ್ರವರಿ 05ರಂದು ಸರ್ ವಿವಿನ್ ರಿಚರ್ಡ್ಸ್‌ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.