ಭಾರತದ ತಾರಾ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್, ಮುಂಬರುವ ನ್ಯೂಜಿಲೆಂಡ್ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಕಾರಣ 12ನೇ ತರಗತಿ ಪರೀಕ್ಷೆ

ನವದೆಹಲಿ: ಮುಂಬರುವ ಅಕ್ಟೋಬರ್ 24ರಿಂದ ಆರಂಭಗೊಳ್ಳಲಿರುವ ನ್ಯೂಜಿಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಪ್ರಕಟಗೊಂಡ ಭಾರತ ತಂಡದಲ್ಲಿ ವಿಕೆಟ್‌ ಕೀಪರ್‌ ಬ್ಯಾಟರ್‌ ರಿಚಾ ಘೋಷ್‌ ಸ್ಥಾನ ಪಡೆದಿಲ್ಲ. ಇದಕ್ಕೆ ಕಾರಣ 12ನೇ ತರಗತಿ ಬೋರ್ಡ್‌ ಪರೀಕ್ಷೆ. 

ತಮ್ಮ 16ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಪಶ್ಚಿಮ ಬಂಗಾಳದ ರಿಚಾ ಘೋಷ್‌ಗೆ ಈಗ 21 ವರ್ಷ. ಅವರು ಬೋರ್ಡ್‌ ಪರೀಕ್ಷೆ ಬರೆಯಲಿರುವ ಹಿನ್ನೆಲೆಯಲ್ಲಿ ಕಿವೀಸ್‌ ಸರಣಿಗೆ ಲಭ್ಯರಿಲ್ಲ ಎಂದು ಬಿಸಿಸಿಐ ತಿಳಿಸಿದೆ. ರಿಚಾ ಈ ವರೆಗೂ ಭಾರತದ ಪರ 23 ಏಕದಿನ, 59 ಟಿ20 ಹಾಗೂ 2 ಟೆಸ್ಟ್‌ ಪಂದ್ಯಗಳನ್ನಾಡಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳು ಅ.24, ಅ.27 ಹಾಗೂ 29ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿವೆ.

ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಟಾಪ್ 10 ತಂಡಗಳು!

ಅನುಭವಿ ಲೆಗ್‌ಸ್ಪಿನ್ನರ್ ಆಶಾ ಶೋಭನಾ ಅವರಿಗೆ ಗಾಯದ ಸಮಸ್ಯೆಯಿಂದಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇನ್ನು ಬೌಲಿಂಗ್ ಆಲ್ರೌಂಡರ್ ಪೂಜಾ ವಸ್ತ್ರಾಕರ್‌ಗೆ ವಿಶ್ರಾಂತಿ ನೀಡಲಾಗಿದೆ. 

ನಾಯಕತ್ವ ಉಳಿಸಿಕೊಂಡ ಹರ್ಮನ್‌ಪ್ರೀತ್ ಕೌರ್: ಇನ್ನು ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಗ್ರೂಪ್ ಹಂತದಲ್ಲೇ ಹೊರಬೀಳುವ ಮೂಲಕ ಮುಖಭಂಗ ಅನುಭವಿಸಿತ್ತು. ಹೀಗಾಗಿ ನಾಯಕಿ ಹರ್ಮನ್‌ಪ್ರೀತ್ ಕೌರ್ ತಲೆದಂಡವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಮುಂದಿನ ವರ್ಷ ಭಾರತದಲ್ಲೇ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ ಜರುಗಲಿದೆ. ಭವಿಷ್ಯದ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಹರ್ಮನ್‌ಪ್ರೀತ್ ಕೌರ್ ಅವರನ್ನು ನಾಯಕಿಯನ್ನಾಗಿಯೇ ಉಳಿಸಿಕೊಂಡಿದೆ ಎನ್ನಲಾಗುತ್ತಿದೆ. 

ಇಂದಿನಿಂದ ಹೈದರಾಬಾದ್‌ನಲ್ಲಿ ಪ್ರೊ ಕಬಡ್ಡಿ ಲೀಗ್‌: ಈ ವರ್ಷ ಬೆಂಗಳೂರಲ್ಲಿಲ್ಲ ಪಂದ್ಯ

ಭಾರತ ಮಹಿಳಾ ಕ್ರಿಕೆಟ್ ತಂಡ: 

ಹರ್ಮನ್‌ಪ್ರೀತ್‌ ಕೌರ್(ನಾಯಕಿ), ಸ್ಮೃತಿ ಮಂಧನಾ(ಉಪನಾಯಕಿ), ಶಫಾಲಿ ವರ್ಮಾ, ಹೇಮಲತಾ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗ್ಸ್‌, ಯಸ್ತಿಕಾ ಭಾಟಿಯಾ, ಉಮಾ ಚೆಟ್ರಿ, ಸಯಾಲಿ, ಅರುಂಧತಿ, ರೇಣುಕಾ ಸಿಂಗ್‌, ತೇಜಲ್‌, ಸೈಮಾ, ಪ್ರಿಯಾ ಮಿಶ್ರಾ, ರಾಧಾ ಯಾದವ್‌, ಶ್ರೇಯಾಂಕ ಪಾಟೀಲ್.