Asian Games 2023: ಭಾರತ ಕ್ರಿಕೆಟ್ ತಂಡ ಪ್ರಕಟ, ಗಾಯಕ್ವಾಡ್‌ಗೆ ನಾಯಕ ಪಟ್ಟ, ರಿಂಕು ಸಿಂಗ್‌ಗೆ ಜಾಕ್‌ಪಾಟ್
ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಭಾರತ ಕ್ರಿಕೆಟ್ ತಂಡ ಪ್ರಕಟ
ಭಾರತ ಪುರುಷರ ತಂಡವನ್ನು ಮುನ್ನಡೆಸಲಿರುವ ಋತುರಾಜ್ ಗಾಯಕ್ವಾಡ್
ಮುಂಬರುವ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 08ರ ವರೆಗೆ ನಡೆಯಲಿರುವ ಟೂರ್ನಿ
ಮುಂಬೈ(ಜು.15): ಚೀನಾದಲ್ಲಿ ಮುಂಬರುವ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 08ರ ವರೆಗೆ ನಡೆಯಲಿರುವ 19ನೇ ಏಷ್ಯನ್ ಗೇಮ್ಸ್ ಕ್ರಿಕೆಟ್‌ಗೆ ಭಾರತ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳನ್ನು ಬಿಸಿಸಿಐ ಪ್ರಕಟಿಸಿದೆ. ಪುರುಷರ ತಂಡವನ್ನು ಪ್ರತಿಭಾನ್ವಿತ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದಾರೆ. ಇನ್ನು 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ರಿಂಕು ಸಿಂಗ್ ಹಾಗೂ ಪ್ರಭ್‌ಸಿಮ್ರನ್ ಸಿಂಗ್ ಇದೇ ಮೊದಲ ಬಾರಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾದವರು, ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವುದಿಲ್ಲ ಎನ್ನುವುದನ್ನು ಬಿಸಿಸಿಐ ಈಗಾಗಲೇ ಸ್ಪಷ್ಟಪಡಿಸಿತ್ತು. ಹೀಗಾಗಿಯೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಹಾಗೂ ಇನ್ನಿತರ ಹಿರಿಯ ಆಟಗಾರರಿಗೆ ಏಷ್ಯನ್ ಗೇಮ್ಸ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ.
ಈ ಮೊದಲು ಏಷ್ಯನ್ ಗೇಮ್ಸ್ ಕ್ರಿಕೆಟ್ ಟೂರ್ನಿಗೆ ಅನುಭವಿ ಎಡಗೈ ಬ್ಯಾಟರ್ ಶಿಖರ್ ಧವನ್ ಅವರಿಗೆ ಭಾರತ ತಂಡದ ನಾಯಕ ಪಟ್ಟ ಕಟ್ಟಲಾಗುತ್ತದೆ ಎಂದೆಲ್ಲ ವರದಿಯಾಗಿತ್ತು. ಆದರೆ ಭವಿಷ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ, ಮುಂಬೈ ಮೂಲದ ಪ್ರತಿಭಾನ್ವಿತ ಬ್ಯಾಟರ್ ಋತುರಾಜ್ ಗಾಯಕ್ವಾಡ್‌ಗೆ ಭಾರತ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ. ಇನ್ನುಳಿದಂತೆ ಏಷ್ಯನ್ ಗೇಮ್ಸ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡದಲ್ಲಿ ರಾಹುಲ್ ತ್ರಿಪಾಠಿ, ಯಶಸ್ವಿ ಜೈಸ್ವಾಲ್ ಹಾಗೂ ತಿಲಕ್ ವರ್ಮಾ ಅವರಿಗೂ ಮಣೆ ಹಾಕಲಾಗಿದೆ. ಯಶಸ್ವಿ ಜೈಸ್ವಾಲ್ ಹಾಗೂ ತಿಲಕ್ ವರ್ಮಾ ಅವರನ್ನು ಈಗಾಗಲೇ ವೆಸ್ಟ್ ಇಂಡೀಸ್ ಎದುರಿನ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ.
Duleep Trophy Final: ಪಶ್ಚಿಮ ವಲಯಕ್ಕೆ ಗೆಲ್ಲಲು ಕಠಿಣ ಗುರಿ ನೀಡಿದ ದಕ್ಷಿಣ ವಲಯ
ಇನ್ನುಳಿದಂತೆ ಆಲ್ರೌಂಡರ್‌ಗಳಾದ ಶಿವಂ ದುಬೆ, ವಾಷಿಂಗ್ಟನ್ ಸುಂದರ್ ಹಾಗೂ ಶಹಬಾಜ್ ಅಹಮ್ಮದ್ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 2023ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಶಿವಂ ದುಬೆ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದರು. ಇನ್ನು ದುಬೆ ಹಂಗಾಮಿ ಮಧ್ಯಮ ವೇಗದ ಬೌಲರ್ ಪಾತ್ರವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದು, ಭಾರತ ತಂಡದ ಪರ ಮಿಂಚಿನ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.
ಇನ್ನುಳಿದಂತೆ ಜಿತೇಶ್ ಶರ್ಮಾ, ಏಷ್ಯನ್ ಗೇಮ್ಸ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆಯುವ ಸಾಧ್ಯತೆಯಿದ್ದು, ಪ್ರಭ್‌ಸಿಮ್ರನ್‌ಜಿತ್ ಸಿಂಗ್ ಬ್ಯಾಕ್‌ಅಪ್ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇನ್ನು ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ನಿರೀಕ್ಷಿಸಲಾಗಿದ್ದ ಆರ್ಶದೀಪ್ ಸಿಂಗ್, ಆವೇಶ್ ಖಾನ್ ಇದೀಗ ಏಷ್ಯನ್ ಗೇಮ್ಸ್ ಟೂರ್ನಿಗೆ ಪ್ರಮುಖ ವೇಗಿಯಾಗಿ ಸ್ಥಾನ ಪಡೆದಿದ್ದಾರೆ. ರವಿ ಬಿಷ್ಣೋಯ್, ಏಷ್ಯನ್ ಗೇಮ್ಸ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಏಕೈಕ ತಜ್ಞ ಸ್ಪಿನ್ನರ್ ಎನಿಸಿಕೊಂಡಿದ್ದಾರೆ. ಇನ್ನು ಸ್ಪಿನ್ ಆಲ್ರೌಂಡರ್‌ಗಳಾಗಿ ವಾಷಿಂಗ್ಟನ್ ಸುಂದರ್ ಹಾಗೂ ಶೆಹಬಾಜ್ ಅಹಮ್ಮದ್ ಸ್ಥಾನ ಪಡೆದಿದ್ದಾರೆ.
Ind vs WI ಕೆರಿಬಿಯನ್ನರ ಬೇಟೆಯಾಡಿದ ಭಾರತದ ಹುಲಿಗಳು..! ಟೀಂ ಇಂಡಿಯಾಗೆ ಇನಿಂಗ್ಸ್ ಜಯಭೇರಿ..!
ಇನ್ನು ಇದೇ ವೇಳೆ ಏಷ್ಯನ್ ಗೇಮ್ಸ್‌ಗೆ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದು, ಹರ್ಮನ್‌ಪ್ರೀತ್ ಕೌರ್ ನಾಯಕಿಯಾಗಿ ನೇಮಕವಾಗಿದ್ದಾರೆ. ಇನ್ನು ಉಪನಾಯಕಿಯಾಗಿ ಸ್ಮೃತಿ ಮಂದನಾ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಶಫಾಲಿ ವರ್ಮಾ, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಸೇರಿದಂತೆ ಬಲಾಢ್ಯ ಆಟಗಾರ್ತಿಯರನ್ನು ಒಳಗೊಂಡ ತಂಡ ಪ್ರಕಟಿಸಲಾಗಿದೆ.
ಏಷ್ಯನ್ ಗೇಮ್ಸ್ ಟೂರ್ನಿಗೆ ಭಾರತ ಪುರುಷರ ತಂಡ ಹೀಗಿದೆ:
ಋತುರಾಜ್ ಗಾಯಕ್ವಾಡ್(ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಪ್ರಭ್‌ಸಿಮ್ರನ್ ಸಿಂಗ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶೆಹಬಾಜ್ ಅಹಮದ್, ರವಿ ಬಿಷ್ಣೋಯ್, ಆವೇಶ್ ಖಾನ್, ಆರ್ಶದೀಪ್ ಸಿಂಗ್, ಮುಕೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ.
ಏಷ್ಯನ್ ಗೇಮ್ಸ್ ಟೂರ್ನಿಗೆ ಭಾರತ ಮಹಿಳಾ ತಂಡ ಹೀಗಿದೆ:
ಹರ್ಮನ್‌ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂದನಾ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗ್ಸ್, ರಿಚಾ ಘೋಷ್, ದೀಪ್ತಿ ಶರ್ಮಾ, ಅಮನ್, ದೇವಿಕಾ ವೈದ್ಯ, ಅಂಜಲಿ, ಟಿಟಾಸ್ ಸದು, ರಾಜೇಶ್ವರಿ ಗಾಯಕ್ವಾಡ್, ಮಿನ್ನು ರಾಣಿ, ಕನಿಕಾ ಅಹುಜಾ, ಉಮಾ, ಅನುಷಾ.