Asianet Suvarna News Asianet Suvarna News

Ind vs WI ಕೆರಿಬಿಯನ್ನರ ಬೇಟೆಯಾಡಿದ ಭಾರತದ ಹುಲಿಗಳು..! ಟೀಂ ಇಂಡಿಯಾಗೆ ಇನಿಂಗ್ಸ್‌ ಜಯಭೇರಿ..!

ವೆಸ್ಟ್‌ ಇಂಡೀಸ್ ಎದುರು ಮೊದಲ ಟೆಸ್ಟ್ ಗೆದ್ದು ಬೀಗಿದ ಟೀಂ ಇಂಡಿಯಾ
ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಇನಿಂಗ್ಸ್‌& 141 ರನ್ ಜಯಭೇರಿ
ಎರಡನೇ ಇನಿಂಗ್ಸ್‌ನಲ್ಲಿ ವಿಂಡೀಸ್ ಕೇವಲ 130ಕ್ಕೆ ಆಲೌಟ್

Ind vs WI Team India thrash West Indies by Innings and 141 runs in first Test kvn
Author
First Published Jul 15, 2023, 9:45 AM IST

ರೋಸೀ(ಡೊಮಿನಿಕಾ): ಆರಂಭಿಕ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ರೋಹಿತ್ ಶರ್ಮಾ ಬಾರಿಸಿದ ಆಕರ್ಷಕ ಶತಕ ಹಾಗೂ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಮಾರಕ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ತಂಡವು ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಶರಣಾಗಿದೆ. ಭಾರತದ ಸಂಘಟಿತ ಪ್ರದರ್ಶನದ ಎದುರು ಕೆರಿಬಿಯನ್ ಪಡೆ ಮಂಡಿಯೂರಿದ್ದು, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇನಿಂಗ್ಸ್‌ ಹಾಗೂ 141 ರನ್ ಅಂತರದ ಜಯ ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದಿದೆ.

ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಕಳೆದುಕೊಂಡು 421 ರನ್ ಗಳಿಸಿ ಮೊದಲ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ ಬರೋಬ್ಬರಿ 271 ರನ್‌ಗಳ ಮುನ್ನಡೆ ಪಡೆಯಿತು. ಭಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು ರವಿಚಂದ್ರನ್ ಅಶ್ವಿನ್ ಮಾರಕ ದಾಳಿಗೆ ತತ್ತರಿಸಿ ಕೇವಲ 130 ರನ್‌ಗಳಿಗೆ ಸರ್ವಪತನ ಕಂಡಿತು. ಎರಡನೇ ಇನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ಪರ ಯಾವೊಬ್ಬ ಬ್ಯಾಟರ್‌ ಕೂಡಾ 30 ರನ್ ಬಾರಿಸಲು ಸಫಲವಾಗಲಿಲ್ಲ. ರವಿಚಂದ್ರನ್ ಅಶ್ವಿನ್‌ 71 ರನ್ ನೀಡಿ 7 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ರವಿಚಂದ್ರನ್ ಅಶ್ವಿನ್ ಮೊದಲ ಇನಿಂಗ್ಸ್‌ನಲ್ಲೂ ವೆಸ್ಟ್‌ ಇಂಡೀಸ್‌ನ ಐವರು ಬ್ಯಾಟರ್‌ಗಳ ಬಲಿ ಪಡೆದಿದ್ದರು.

ಇನ್ನು ಇದಕ್ಕೂ ಮೊದಲು ಪಾದಾರ್ಪಣಾ ಪಂದ್ಯದಲ್ಲೇ ವೆಸ್ಟ್‌ಇಂಡೀಸ್‌ ಬೌಲರ್‌ಗಳನ್ನು ಚೆಂಡಾಡಿದ ಯಶಸ್ವಿ ಜೈಸ್ವಾಲ್‌, ಆತಿಥೇಯ ತಂಡದ ವಿರುದ್ಧ ಪ್ರಥಮ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಬೃಹತ್‌ ಮೊತ್ತ ಕಲೆಹಾಕಲು ನೆರವಾದರು. ವಿಂಡೀಸ್‌ ತಂಡವನ್ನು 150 ರನ್‌ಗೆ ನಿಯಂತ್ರಿಸಿದ ಭಾರತ, ಮೊದಲ ಇನ್ನಿಂಗ್ಸ್‌ನಲ್ಲಿ 3ನೇ ದಿನದಾಟದಲ್ಲಿ 5 ವಿಕೆಟ್‌ ಕಳೆದುಕೊಂಡು 421 ರನ್‌ ಕಲೆ ಹಾಕಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತು. 

ಪಾನಿಪುರಿ‌ಯಿಂದ ಸೆಂಚುರಿವರೆಗೆ! ಭಾರತದ ಕ್ರಿಕೆಟ್ ತಂಡಕ್ಕೆ ಸಿಕ್ಕಿದ ಯಶಸ್ವಿ ಎಂಬೊಂದು ನಕ್ಷತ್ರ

2ನೇ ದಿನ ಭೋಜನ ವಿರಾಮದ ವೇಳೆಗೆ ವಿಕೆಟ್‌ ನಷ್ಟವಿಲ್ಲದೇ 146 ರನ್‌ ಗಳಿಸಿದ್ದ ಭಾರತ ಬಳಿಕ 2ನೇ ಅವಧಿಯಲ್ಲಿ ಕೆಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಜೈಸ್ವಾಲ್‌ ಜೊತೆ 229 ರನ್‌ ಜೊತೆಯಾಟವಾಡಿದ್ದ ರೋಹಿತ್‌ ಶರ್ಮಾ 103 ರನ್‌ ಗಳಿಸಿ ಔಟಾದರು. ಬಳಿಕ ಬಂದ ಗಿಲ್‌ 06 ರನ್‌ಗೆ ಪೆವಿಲಿಯನ್‌ಗೆ ಮರಳಿದರು. 2ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 312 ರನ್‌ ಗಳಿಸಿದ್ದ ಭಾರತ ಶುಕ್ರವಾರವೂ ಅಬ್ಬರಿಸಿತು.  ಪಾದಾರ್ಪಣಾ ಪಂದ್ಯದಲ್ಲಿ 150 ರನ್‌ ಸಿಡಿಸಿದ 3ನೇ ಭಾರತೀಯ ಎನಿಸಿಕೊಂಡ ಜೈಸ್ಚಾಲ್‌ 387 ಎಸೆತಗಳಲ್ಲಿ 171 ರನ್‌ ಸಿಡಿಸಿ ನಿರ್ಗಮಿಸಿದರು. ಬಳಿಕ ಬಂದ ಅಜಿಂಕ್ಯ ರಹಾನೆ 3 ರನ್‌ ಗಳಿಸಿ ಔಟಾದರು. 

ಇನ್ನು ವೆಸ್ಟ್ ಇಂಡೀಸ್ ಎದುರು 40 ರನ್ ಗಳಿಸಿದ್ದಾಗ ಪಡೆದ ಜೀವದಾನವನ್ನು ಸದುಪಯೋಗಪಡಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯಿಟ್ಟ ವಿರಾಟ್ ಕೊಹ್ಲಿ 2018ರ ಬಳಿಕ ವಿದೇಶಿ ನೆಲದಲ್ಲಿ ಟೆಸ್ಟ್ ಶತಕ ಸಿಡಿಸುವ ಅವಕಾಶವನ್ನು ಮತ್ತೊಮ್ಮೆ ಕೈಚೆಲ್ಲಿದರು. ವಿರಾಟ್ ಕೊಹ್ಲಿ 182 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 76 ರನ್ ಬಾರಿಸಿ ರಾಕೀಂ ಕಾರ್ನವಾಲ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇನ್ನು ರವೀಂದ್ರ ಜಡೇಜಾ ಅಜೇಯ 37 ರನ್ ಹಾಗೂ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಇಶಾನ್ ಕಿಶನ್ ಒಂದು ರನ್ ಗಳಿಸಿದ್ದಾಗ ನಾಯಕ ರೋಹಿತ್ ಶರ್ಮಾ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡರು.

ಟೆಸ್ಟ್‌ನಲ್ಲಿ ಗರಿಷ್ಠ ರನ್‌: 5ನೇ ಸ್ಥಾನಕ್ಕೆ ಕೊಹ್ಲಿ

ವಿಂಡೀಸ್‌ ವಿರುದ್ಧದ ಪಂದ್ಯದ ಮೂಲಕ ವಿರಾಟ್‌ ಕೊಹ್ಲಿ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಸಿಡಿಸಿದ ಭಾರತೀಯ ಆಟಗಾರರ ಪೈಕಿ 5ನೇ ಸ್ಥಾನಕ್ಕೇರಿದರು. ಗುರುವಾರ 25 ರನ್‌ ಗಳಿಸುವುದೊಂದಿಗೆ ಅವರು ಒಟ್ಟು ರನ್‌ ಗಳಿಕೆಯನ್ನು 8504ಕ್ಕೆ ಏರಿಸಿ, ವೀರೇಂದ್ರ ಸೆಹ್ವಾಗ್‌ ಅವರನ್ನು ಹಿಂದಿಕ್ಕಿದರು. ಸೆಹ್ವಾಗ್ ಟೆಸ್ಟ್ ಕ್ರಿಕೆಟ್​ನಲ್ಲಿ 8,503 ರನ್ ಕಲೆಹಾಕಿದ್ದಾರೆ. ಸಚಿನ್‌ ತೆಂಡುಲ್ಕರ್‌ 15921 ರನ್‌ ಗಳಿಸಿದ್ದು, ವಿಶ್ವದಲ್ಲೇ ಗರಿಷ್ಠ ರನ್‌ ಗಳಿಸಿದ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಭಾರತೀಯರ ಪೈಕಿ ರಾಹುಲ್‌ ದ್ರಾವಿಡ್‌ 13,265, ಸುನಿಲ್‌ ಗವಾಸ್ಕರ್‌ 10,122, ವಿವಿಎಸ್‌ ಲಕ್ಷ್ಮಣ್‌ 8,781 ರನ್‌ ಗಳಿಸಿದ್ದಾರೆ.

Follow Us:
Download App:
  • android
  • ios