ದುಬೈ(ಮೇ.13): ಐಸಿಸಿ ನೂತನವಾಗಿ ಬಿಡುಗಡೆ ಮಾಡಿದ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ನಂ.1 ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.  ಆದರೆ ಐಸಿಸಿ ಟೆಸ್ಟ್‌ ಚಾಂಪಿಯನ್‌ ಫೈನಲ್‌ಗೆ ಅರ್ಹತೆಗಿಟ್ಟಿಸಿಕೊಂಡಿರುವ ನ್ಯೂಜಿಲೆಂಡ್ ತಂಡವು ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ.

ಐಸಿಸಿ ಗುರುವಾರ(ಮೇ.13) ಪ್ರಕಟಿಸಿದ ಪರಿಷ್ಕೃತ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಭಾರತ ತಂಡ ಒಂದು ರೇಟಿಂಗ್ ಅಂಕ ಪಡೆಯುವ ಮೂಲಕ 121 ರೇಟಿಂಗ್ ಅಂಕಗಳೊಂದಿಗೆ ಟೆಸ್ಟ್ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ಪಡೆ ಅಗ್ರಸ್ಥಾನಕ್ಕೇರಿದೆ. ಭಾರತ 121 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದರೆ, ನ್ಯೂಜಿಲೆಂಡ್‌ ತಂಡವು 120 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನು ಇಂಗ್ಲೆಂಡ್ ತಂಡ ಒಂದು ಸ್ಥಾನ ಏರಿಕೆ ಕಂಡು 109 ರೇಟಿಂಗ್‌ ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೇರಿದ್ದರೆ, ಆಸ್ಟ್ರೇಲಿಯಾ ಒಂದು ಸ್ಥಾನ ಕುಸಿತ ಕಂಡು 4ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಪಾಕಿಸ್ತಾನ 94 ರೇಟಿಂಗ್ ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ.

ಇನ್ನುಳಿದಂತೆ ವೆಸ್ಟ್ ಇಂಡೀಸ್‌ ತಂಡವು 2 ಸ್ಥಾನ ಏರಿಕೆ ಕಂಡು 6ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದರೆ, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ತಂಡವು ತಲಾ ಒಂದೊಂದು ಸ್ಥಾನ ಕುಸಿತ ಕಂಡು ಕ್ರಮವಾಗಿ 7 ಹಾಗೂ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ. ಇನ್ನು ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ತಂಡಗಳು 9 ಹಾಗೂ 10ನೇ ಸ್ಥಾನದಲ್ಲಿವೆ.

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಬಳಿಕ ಬಿ ಜೆ ವ್ಯಾಟ್ಲಿಂಗ್‌ ಕ್ರಿಕೆಟ್‌ಗೆ ಗುಡ್‌ಬೈ

ಇದೀಗ ಜೂನ್ 18ರಿಂದ ಆರಂಭವಾಗಲಿರುವ ಐಸಿಸಿ ಟೆಸ್ಟ್‌ ಚಾಂಪಿಯನ್‌ ಫೈನಲ್‌ ಬಳಿಕ ಯಾವ ತಂಡ ನಂ.1 ಸ್ಥಾನದಲ್ಲಿರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.