ನವದೆಹಲಿ(ಮಾ.09): ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ಲಾರ್ಡ್ಸ್ ಕ್ರೀಡಾಂಗಣದ ಬದಲಿಗೆ ಸೌಥಾಂಪ್ಟನ್‌ನ ಏಜೀಸ್‌ ಬೌಲ್‌ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸೋಮವಾರ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಖಚಿತಪಡಿಸಿದ್ದಾರೆ. ಜೂನ್‌ 18ರಿಂದ 22ರ ವರೆಗೂ ಪಂದ್ಯ ನಡೆಯಲಿದ್ದು, ಭಾರತ ಹಾಗೂ ನ್ಯೂಜಿಲೆಂಡ್‌ ಚೊಚ್ಚಲ ಬಾರಿಗೆ ವಿಶ್ವ ಚಾಂಪಿಯನ್‌ ಆಗಲು ಸೆಣಸಲಿವೆ.

ಏಜೀಸ್‌ ಬೌಲ್‌ ಕ್ರೀಡಾಂಗಣದ ಆವರಣದಲ್ಲೇ ಪಂಚತಾರಾ ಹೋಟೆಲ್‌ ಇರುವ ಕಾರಣ ಐಸಿಸಿ ಹಾಗೂ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ)ಗೆ ಬಯೋ ಬಬಲ್‌ ವ್ಯವಸ್ಥೆ ಮಾಡಲು ಸುಲಭವಾಗಲಿದೆ ಎನ್ನುವ ಕಾರಣಕ್ಕೆ ಪಂದ್ಯವನ್ನು ಲಾರ್ಡ್ಸ್‌ನಿಂದ ಸ್ಥಳಾಂತರಿಸಲಾಗಿದೆ. ಏಜೀಸ್‌ ಬೌಲ್‌ನ ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡಲಿದ್ದು, ಭಾರತ ತಂಡಕ್ಕೆ ಲಾಭವಾಗಲಿದೆ.

ಟೀಂ ಇಂಡಿಯಾ ದಿಗ್ವಿಜಯ; ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೇರಿದ ಭಾರತ

ಇಂಗ್ಲೆಂಡ್ ವಿರುದ್ದ ತವರಿನಲ್ಲಿ ನಡೆದ 4 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾ 3-1 ಅಂತರದಲ್ಲಿ ಟೆಸ್ಟ್‌ ಸರಣಿ ಗೆಲ್ಲುವ ಮೂಲಕ ಚೊಚ್ಚಲ ಆವೃತ್ತಿಯ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆಗಿಟ್ಟಿಸಿಕೊಂಡಿತ್ತು. ಇದೀಗ ಟೆಸ್ಟ್ ವಿಶ್ವಕಪ್ ಎಂದೇ ಬಿಂಬಿತವಾಗಿರುವ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಗೆಲ್ಲಲು ಕೇನ್‌ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲೆಂಡ್ ಹಾಗೂ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಜಿದ್ದಾಜಿದ್ದಿನ ಪೈಪೋಟಿ ನಡೆಸುವ ಸಾಧ್ಯತೆಯಿದೆ.