ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್ ನಡುವೆ ಪೈಪೋಟಿ ಇದ್ದು, ಜೈಸ್ವಾಲ್ ಬದಲು ಬೇರೆ ಆಟಗಾರರು ಸ್ಲಿಪ್‌ನಲ್ಲಿ ಕಾಣಿಸಿಕೊಳ್ಳಬಹುದು.

ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್‌ ವಿರುದ್ಧ ಬುಧವಾರದಿಂದ ಆರಂಭಗೊಳ್ಳಲಿರುವ 2ನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲಿದೆ. ಇದರ ಬಗ್ಗೆ ಸ್ವತಃ ತಂಡದ ಸಹಾಯಕ ಕೋಚ್‌ ರ್‍ಯಾನ್‌ ಟೆನ್‌ ಡೊಶ್ಯಾಟ್‌ ಮಾಹಿತಿ ನೀಡಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸುವ ಸಾಧ್ಯತೆ ಹೆಚ್ಚಿದೆ. ಆ ಇಬ್ಬರು ಯಾರು ಎಂಬುದು ಮುಖ್ಯ. ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಹೆಚ್ಚಿನ ನೆರವಾಗುವುದನ್ನು ಪರಿಗಣಿಸಿ ನಾವು ಆಯ್ಕೆ ಮಾಡುತ್ತೇವೆ. ವಾಷಿಂಗ್ಟನ್‌ ಸುಂದರ್‌ ಉತ್ತಮ ಬ್ಯಾಟರ್‌. ಹೀಗಾಗಿ ತಜ್ಞ ಸ್ಪಿನ್ನರ್‌ನ ಆಡಿಸುವುದೋ ಅಥವಾ ಆಲ್ರೌಂಡರ್‌ ಸ್ಪಿನ್ನರ್‌ನ ಕಣಕ್ಕಿಳಿಸುವುದೋ ಎಂಬುದರ ಬಗ್ಗೆ ನಿರ್ಧರಿಸುತ್ತೇವೆ’ ಎಂದಿದ್ದಾರೆ.

ಹಿರಿಯ ಆಲ್ರೌಂಡರ್‌ ರವೀಂದ್ರ ಜಡೇಜಾ ಮೊದಲ ಪಂದ್ಯದಲ್ಲಿ ಆಡಿದ್ದರು. ಅವರು 2ನೇ ಟೆಸ್ಟ್‌ನಲ್ಲೂ ಕಣಕ್ಕಿಳಿಯುವುದು ಬಹುತೇಕ ಖಚಿತ. ಮತ್ತೊಂದು ಸ್ಪಿನ್ನರ್‌ ಸ್ಥಾನಕ್ಕೆ ವಾಷಿಂಗ್ಟನ್‌ ಸುಂದರ್‌ ಹಾಗೂ ಕುಲ್ದೀಪ್‌ ಯಾದವ್ ನಡುವೆ ಪೈಪೋಟಿಯಿದೆ. ತಜ್ಞ ಸ್ಪಿನ್ನರ್‌ ಆಯ್ಕೆ ಬೇಕಿದ್ದರೆ ಕುಲ್ದೀಪ್‌ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

ನಿತೀಶ್‌ ಕುಮಾರ್ ಅಥವಾ ಶಾರ್ದೂಲ್‌ ಠಾಕೂರ್?: ಲೀಡ್ಸ್‌ ಟೆಸ್ಟ್‌ನಲ್ಲಿ ಶಾರ್ದೂಲ್‌ ಠಾಕೂರ್‌ ಆಲ್ರೌಂಡರ್‌ ಸ್ಥಾನದಲ್ಲಿ ಕಣಕ್ಕಿಳಿದಿದ್ದರು. ಆದರೆ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು. ಹೀಗಾಗಿ ಅವರ ಬದಲು ನಿತೀಶ್‌ ಕುಮಾರ್‌ ರೆಡ್ಡಿ 2ನೇ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆಯಿದೆ. ‘ತಂಡದಲ್ಲಿ ಸಮತೋಲನ ಕಾಯ್ದುಕೊಳ್ಳಲು ಮೊದಲ ಟೆಸ್ಟ್‌ನಲ್ಲಿ ಶಾರ್ದೂಲ್‌ರನ್ನು ಆಡಿಸಲಾಗಿತ್ತು. ನಿತೀಶ್‌ ಆಸ್ಟ್ರೇಲಿಯಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅವರು ನಮ್ಮ ಪ್ರಮುಖ ಬ್ಯಾಟಿಂಗ್‌ ಆಲ್ರೌಂಡರ್‌. ಹೀಗಾಗಿ ಅವರು 2ನೇ ಪಂದ್ಯಕ್ಕೆ ಆಯ್ಕೆಯಾಗಲೂಬಹುದು’ ಎಂದಿದ್ದಾರೆ.

ಜಸ್ಪ್ರೀತ್ ಬುಮ್ರಾ ಆಯ್ಕೆಗೆ ಲಭ್ಯ: ಡೊಶ್ಯಾಟ್‌

2ನೇ ಟೆಸ್ಟ್‌ನಲ್ಲಿ ಬುಮ್ರಾ ಆಡಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕೋಚ್‌ ಡೊಶ್ಯಾಟ್‌, ‘ಬುಮ್ರಾ ಪಂದ್ಯದ ಆಯ್ಕೆಗೆ ಲಭ್ಯರಿದ್ದಾರೆ. ಮೊದಲ ಟೆಸ್ಟ್‌ನಿಂದ ಅವರಿಗೆ 8 ದಿನ ವಿಶ್ರಾಂತಿ ಲಭಿಸಿದೆ. ಆದರೆ 2ನೇ ಟೆಸ್ಟ್‌ನಲ್ಲಿ ಆಡಲಿದ್ದಾರೊ ಎಂಬುದನ್ನು ಪಂದ್ಯ ಆರಂಭದ ವೇಳೆ ನಿರ್ಧರಿಸುತ್ತೇವೆ. ಅವರು ಈ ಸರಣಿಯಲ್ಲಿ ಕೇವಲ 3 ಪಂದ್ಯ ಮಾತ್ರ ಆಡಲಿದ್ದಾರೆ. ಅವರನ್ನು ಲಾರ್ಡ್ಸ್‌ ಟೆಸ್ಟ್‌ನಲ್ಲಿ ಆಡಿಸುವುದೋ ಅಥವಾ ಮ್ಯಾಂಚೆಸ್ಟರ್‌, ಓವಲ್‌ ಟೆಸ್ಟ್‌ಗೆ ಮೀಸಲಿಡುವುದೋ ಎಂಬುದರ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ’ ಎಂದಿದ್ದಾರೆ.

ಸ್ಲಿಪ್‌ನಿಂದ ಯಶಸ್ವಿ ಜೈಸ್ವಾಲ್‌ ಔಟ್‌?

ಯಶಸ್ವಿ ಜೈಸ್ವಾಲ್‌ ಮೊದಲ ಪಂದ್ಯದಲ್ಲಿ 4 ಕ್ಯಾಚ್‌ ಕೈಚೆಲ್ಲಿದ್ದರು. ಈ ಪೈಕಿ 3 ಕ್ಯಾಚ್‌ಗಳನ್ನು ಸ್ಲಿಪ್‌ನಲ್ಲಿದ್ದಾಗಲೇ ಬಿಟ್ಟಿದ್ದರು. ಹೀಗಾಗಿ ಅವರನ್ನು ಸ್ಲಿಪ್‌ನಲ್ಲಿ ಫೀಲ್ಡಿಂಗ್‌ಗೆ ಇಳಿಸುವ ಸಾಧ್ಯತೆ ಕಡಿಮೆ. ಸೋಮವಾರ ಶಿಬಿರದಲ್ಲಿ ಕರುಣ್‌, ರಾಹುಲ್‌, ಶುಭ್‌ಮನ್‌ ಗಿಲ್‌, ನಿತೀಶ್‌ ಕುಮಾರ್ ರೆಡ್ಡಿ ಹಾಗೂ ಸಾಯಿ ಸುದರ್ಶನ್‌ ಸ್ಲಿಪ್‌ನಲ್ಲಿ ಕ್ಯಾಚ್‌ ಅಭ್ಯಾಸ ನಡೆಸಿದರು. ಈ ಬಗ್ಗೆ ಮಾಹಿತಿ ನೀಡಿರುವ ಡೊಶ್ಯಾಟ್‌, ‘ಜೈಸ್ವಾಲ್‌ ಉತ್ತಮ ಕ್ಯಾಚರ್‌. ಅವರಲ್ಲಿ ಮತ್ತೆ ಆತ್ಮವಿಶ್ವಾಸ ಬರಬೇಕು. ಸದ್ಯಕ್ಕೆ ಗಲ್ಲಿಯಲ್ಲಿ ಕ್ಯಾಚಿಂಗ್‌ನಿಂದ ಜೈಸ್ವಾಲ್‌ಗೆ ವಿರಾಮ ನೀಡುತ್ತೇವೆ’ ಎಂದಿದ್ದಾರೆ.

ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್‌ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಹೀಗಿದೆ ನೋಡಿ:

ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ಸಾಯಿ ಸುದರ್ಶನ್, ಶುಭ್‌ಮನ್ ಗಿಲ್(ನಾಯಕ), ರಿಷಭ್ ಪಂತ್(ವಿಕೆಟ್ ಕೀಪರ್), ಕರುಣ್ ನಾಯರ್, ರವೀಂದ್ರ ಜಡೇಜಾ, ನಿತೀಶ್‌ ಕುಮಾರ್ ರೆಡ್ಡಿ/ಕುಲ್ದೀಪ್ ಯಾದವ್/ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ/ ಅರ್ಶದೀಪ್ ಸಿಂಗ್/ಆಕಾಶ್‌ದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ.