ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡ ಬಳಿಕ ಟೀಂ ಇಂಡಿಯಾ ಎರಡನೇ ಟೆಸ್ಟ್‌ಗೆ ಬದಲಾವಣೆಗಳನ್ನು ಪರಿಗಣಿಸುತ್ತಿದೆ. ವರ್ಕ್‌ಲೋಡ್ ನಿರ್ವಹಣೆಗಾಗಿ ಬುಮ್ರಾ ಅವರನ್ನು ಪಂದ್ಯದಿಂದ ಹೊರಗಿಡುವ ಸಾಧ್ಯತೆಯಿದೆ.
ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು 5 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಟೆಸ್ಟ್ ಸರೆಣಿಯಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 1-0 ಮುನ್ನಡೆ ಸಾಧಿಸಿದೆ. ಇದೀಗ ಎರಡನೇ ಟೆಸ್ಟ್ ಪಂದ್ಯವು ಜುಲೈ 02ರಿಂದ ಏಜ್‌ಬಾಸ್ಟನ್‌ನಲ್ಲಿ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ಭಾರತ ತಂಡವು ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, ಟೆಸ್ಟ್ ಎದುರಿನ ಟೆಸ್ಟ್ ಸರಣಿಯಲ್ಲಿ ಉತ್ತಮ ಆರಂಭ ಪಡೆಯಲು ವಿಫಲವಾಗಿದೆ. ಹೀಗಾಗಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಕೆಲ ಮಾಧ್ಯಮಗಳ ವರದಿಗಳ ಪ್ರಕಾರ, ವರ್ಕ್‌ಲೋಡ್ ಮ್ಯಾನೇಜ್ ಮಾಡುವ ಉದ್ದೇಶದಿಂದ ಟೀಂ ಇಂಡಿಯಾ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಹೀಗಾದಲ್ಲಿ ಎರಡನೇ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ಎಡಗೈ ವೇಗಿ ಅರ್ಶದೀಪ್ ಸಿಂಗ್ ಅಥವಾ ಆಕಾಶ್‌ದೀಪ್ ಸಿಂಗ್‌ಗೆ ಸ್ಥಾನ ಸಿಗುವ ಸಾಧ್ಯತೆಯಿದೆ. ಬಲಗೈ ಮಧ್ಯಮ ವೇಗಿ ಆಕಾಶ್‌ದೀಪ್ ಸಿಂಗ್ ಈಗಾಗಲೇ ಬಾರತ ಪರ 7 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಇನ್ನೊಂದೆಡೆ ಅರ್ಶದೀಪ್ ಸಿಂಗ್ ಭಾರತ ಪರ ಮೊದಲ ಟೆಸ್ಟ್ ಪಂದ್ಯವನ್ನಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಇನ್ನು ಮತ್ತೊಂದೆಡೆ ಟೀಂ ಇಂಡಿಯಾ ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಮೊದಲ ಟೆಸ್ಟ್ ಪಂದ್ಯದಲ್ಲಿ ಕೇವಲ 16 ಓವರ್‌ಗಳನ್ನಷ್ಟೇ ಬೌಲಿಂಗ್ ಮಾಡಿದ್ದರು. ಇನ್ನು ಬ್ಯಾಟಿಂಗ್‌ನಲ್ಲೂ ಹೆಚ್ಚೇನು ಕಾಣಿಕೆ ನೀಡಿರಲಿಲ್ಲ. ಹೀಗಾಗಿ ಶಾರ್ದೂಲ್ ಠಾಕೂರ್ ಅವರಿಗೆ ವಿಶ್ರಾಂತಿ ನೀಡಿ ಕುಲ್ದೀಪ್ ಯಾದವ್ ಇಲ್ಲವೇ ನಿತೀಶ್ ಕುಮಾರ್ ರೆಡ್ಡಿಗೆ ಭಾರತ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ.
ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅಗ್ರಕ್ರಮಾಂಕದ ಬ್ಯಾಟರ್‌ಗಳು ಆಕರ್ಷಕ ಪ್ರದರ್ಶನ ತೋರಿದ್ದರು. ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್, ನಾಯಕ ಶುಭ್‌ಮನ್ ಗಿಲ್, ಕೆ ಎಲ್ ರಾಹುಲ್ ಆಕರ್ಷಕ ಶತಕ ಸಿಡಿಸಿದ್ದರು. ಇನ್ನು ಉಪನಾಯಕ ಹಾಗು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಎರಡೂ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸುವ ಮೂಲಕ ಮಿಂಚಿದ್ದರು. ಆದರೆ ಮಧ್ಯಮ ಹಾಗೂ ಕೆಳಕ್ರಮಾಂಕದ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಕರುಣ್ ನಾಯರ್, ರವೀಂದ್ರ ಜಡೇಜಾ ಅವರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮೂಡಿಬರಲಿಲ್ಲ. ಇದು ಗಿಲ್ ಪಡೆಯ ತಲೆನೋವು ಹೆಚ್ಚಿಸುವಂತೆ ಮಾಡಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ದ್ ಕೃಷ್ಣ ಹಾಗೂ ಮೊಹಮ್ಮದ್ ಸಿರಾಜ್ ಕೂಡಾ ಪರಿಣಾಮಕಾರಿ ದಾಳಿ ನಡೆಸಲು ವಿಫಲವಾಗಿದ್ದರು. ಒಂದು ವೇಳೆ ಎರಡನೇ ಟೆಸ್ಟ್ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ ಕೂಡಾ ಅಲಭ್ಯವಾದರೇ, ಭಾರತ ತಂಡದ ಬೌಲಿಂಗ್ ವಿಭಾಗ ಮತ್ತಷ್ಟು ಮಂಕಾಗುವ ಸಾಧ್ಯತೆಯಿದೆ. ಹೀಗಾಗಿ ಬುಮ್ರಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಯಾವ ರೀತಿಯ ಪ್ರದರ್ಶನ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಹೀಗಿದೆ ನೋಡಿ:
ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ಸಾಯಿ ಸುದರ್ಶನ್, ಶುಭ್‌ಮನ್ ಗಿಲ್(ನಾಯಕ), ರಿಷಭ್ ಪಂತ್(ವಿಕೆಟ್ ಕೀಪರ್), ಕರುಣ್ ನಾಯರ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ/ಕುಲ್ದೀಪ್ ಯಾದವ್, ಅರ್ಶದೀಪ್ ಸಿಂಗ್/ಆಕಾಶ್‌ದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ.


