ಭಾರತದ ಕೋವಿಡ್ ಹೋರಾಟಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ 50 ಸಾವಿರ ಡಾಲರ್ ದೇಣಿಗೆ
ಕೊರೋನಾ ವಿರುದ್ದ ಹೋರಾಡುತ್ತಿರುವ ಭಾರತಕ್ಕೆ ಕ್ರಿಕೆಟ್ ಅಸ್ಟ್ರೇಲಿಯಾ ಸುಮಾರು 28.5 ಲಕ್ಷ ರುಪಾಯಿ ದೇಣಿಗೆ ನೀಡುವ ಮೂಲಕ ಸಂಕಷ್ಟದ ಸಂದರ್ಭದಲ್ಲಿ ಭಾರತಕ್ಕೆ ನೆರವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮೆಲ್ಬರ್ನ್(ಮೇ.03): ಕೋವಿಡ್ ಎರಡನೇ ಅಲೆಯ ವಿರುದ್ದ ಸೆಣಸುತ್ತಿರುವ ಭಾರತಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸಮಾರು 28.5 ಲಕ್ಷ(50 ಸಾವಿರ ಆಸ್ಟ್ರೇಲಿಯನ್ ಡಾಲರ್) ರುಪಾಯಿ ದೇಣಿಗೆ ನೀಡಿದೆ. ಮುಂದುವರೆದು ಆಸ್ಟ್ರೇಲಿಯಾ ಆಟಗಾರರು ನೆರವಿನಿಂದ ಯುನಿಸೆಪ್ ಸಹಯೋಗದಲ್ಲಿ ಮತ್ತಷ್ಟು ದೇಣಿಗೆ ಸಂಗ್ರಹಿಸುವುದಾಗಿ ತಿಳಿಸಿದೆ.
ಕಳೆದೊಂದು ತಿಂಗಳಿನಿಂದ ಭಾರತದಲ್ಲಿ ನಿರಂತರವಾಗಿ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಲೇ ಇವೆ. ಇತ್ತೀಚಿನ ಕೆಲವು ದಿನಗಳಲ್ಲಿ ಪ್ರತಿನಿತ್ಯ 4 ಲಕ್ಷಕ್ಕೂ ಅಧಿಕ ಹೊಸ ಕೋವಿಡ್ 19 ಪ್ರಕರಣಗಳು ಹಾಗೂ 3 ಸಾವಿರಕ್ಕೂ ಅಧಿಕ ಸಾವು ಸಂಭವಿಸುತ್ತಿವೆ. ಭಾರತ ಆಕ್ಸಿಜನ್ ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದೆ. ಇಂತಹ ಕಠಿಣ ಸಂದರ್ಭದಲ್ಲಿ ಕ್ರಿಕೆಟ್ ಅಸ್ಟ್ರೇಲಿಯಾ ನೆರವಿಗೆ ಧಾವಿಸಿದೆ.
ಐಪಿಎಲ್ 2021: ಲಕ್ಷ್ಮಿಪತಿ ಬಾಲಾಜಿ ಸೇರಿ ಸಿಎಸ್‌ಕೆ 3 ಮಂದಿಗೆ ಕೋವಿಡ್ ಪಾಸಿಟಿವ್..!
ಈ ಕುರಿತಂತೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಕೋವಿಡ್ 19 ವಿರುದ್ದ ಭಾರತದ ಹೋರಾಟಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಸದಾ ಬೆಂಬಲ ನಿಲ್ಲಲಿದೆ. ಆಸ್ಟ್ರೇಲಿಯಾ ಕ್ರಿಕೆಟಿಗರು ಹಾಗೂ ಯುನಿಸೆಫ್ ಸಹಯೋಗದಲ್ಲಿ ಮತ್ತಷ್ಟು ದೇಣಿಗೆ ಸಂಗ್ರಹಿಸಿ ನೀಡಲಿದ್ದೇವೆ. ಭಾರತದಲ್ಲಿ ಕೊರೋನಾ ಎರಡನೇ ಅಲೆ ಸೃಷ್ಟಿಸಿದ ಅವಾಂತರಕ್ಕೆ ನಾವು ದುಃಖಿತರಾಗಿದ್ದೇವೆ. ಇದರ ಭಾಗವಾಗಿ ಕೋವಿಡ್ ವಿರುದ್ದ ಹೋರಾಡಲು ಭಾರತಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ 50,000 ಆಸ್ಟ್ರೇಲಿಯನ್ ಡಾಲರ್ ದೇಣಿಗೆ ನೀಡುತ್ತಿದ್ದೇವೆ. ಜಗತ್ತಿನ ನಾನಾ ಮೂಲೆಯಲ್ಲಿ ನೆಲೆಸಿರುವ ಆಸ್ಟ್ರೇಲಿಯನ್ನರು ಭಾರತದ ಸಂಕಷ್ಟದ ಸಂದರ್ಭದಲ್ಲಿ ನೆರವಾಗಿ ಎಂದು ಮನವಿ ಮಾಡಿಕೊಂಡಿದೆ.
ಕೆಲವು ದಿನಗಳ ಹಿಂದಷ್ಟೇ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ 50 ಸಾವಿರ ಅಮೆರಿಕನ್ ಡಾಲರ್(37 ಲಕ್ಷ ರುಪಾಯಿ) ದೇಣಿಗೆ ನೀಡುವ ಮೂಲಕ ಹಲವರಿಗೆ ಮಾದರಿಯಾಗಿದ್ದರು. ಇದರ ಬೆನ್ನಲ್ಲೇ ಆಸೀಸ್ ಮಾಜಿ ವೇಗಿ ಬ್ರೆಟ್ ಲೀ ಒಂದು ಬಿಟ್ ಕಾಯಿನ್ ದೇಣಿಗೆ ನೀಡುವ ಮೂಲಕ ಭಾರತದ ನೆರವಿಗೆ ಧಾವಿಸಿದ್ದನ್ನು ಸ್ಮರಿಸಬಹುದಾಗಿದೆ.