ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ ಪಂದ್ಯಕ್ಕೆ ಭಾರತ ಸಜ್ಜು. ಸರಣಿಯಲ್ಲಿ 1-2 ಹಿನ್ನಡೆಯಲ್ಲಿರುವ ಭಾರತಕ್ಕೆ ಈ ಪಂದ್ಯ ಮಹತ್ವದ್ದು. ಬ್ಯಾಟಿಂಗ್‌ನಲ್ಲಿ ಮಿಂಚಿದರೂ ಬೌಲಿಂಗ್‌ನಲ್ಲಿ ಭಾರತ ಸೊರಗಿದೆ.

ಲಂಡನ್‌: ಸರಣಿಯುದ್ದಕ್ಕೂ ಅಭೂತಪೂರ್ವ ಪ್ರದರ್ಶನ ತೋರಿದರೂ 1-2 ಹಿನ್ನಡೆಯಲ್ಲಿರುವ ಟೀಂ ಇಂಡಿಯಾ ಈಗ ಇಂಗ್ಲೆಂಡ್‌ ವಿರುದ್ಧ ಕೊನೆ ಟೆಸ್ಟ್‌ ಪಂದ್ಯಕ್ಕೆ ಸಜ್ಜಾಗುತ್ತಿದೆ. ಆತಿಥೇಯರ ವಿರುದ್ಧ 5ನೇ ಟೆಸ್ಟ್‌ ಪಂದ್ಯ ಗುರುವಾರ ಇಲ್ಲಿನ ದಿ ಓವಲ್‌ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ. ಈ ಪಂದ್ಯ ಭಾರತದ ಪಾಲಿಗೆ ಮಹತ್ವದ್ದಾಗಿದ್ದು, ಗೆದ್ದರೆ ಸರಣಿ ಸಮವಾಗಲಿದೆ. ಭಾರತ ಸೋತರೆ ಅಥವಾ ಡ್ರಾಗೊಂಡರೆ ಇಂಗ್ಲೆಂಡ್‌ ಸರಣಿ ಕೈವಶಪಡಿಸಿಕೊಳ್ಳಲಿದೆ.

ಈ ಸರಣಿಯಲ್ಲಿ ಭಾರತೀಯ ಬ್ಯಾಟರ್‌ಗಳು ಅಬ್ಬರದ ಪ್ರದರ್ಶನ ನೀಡಿದ್ದಾರೆ. ಶುಭ್‌ಮನ್‌ ಗಿಲ್‌(722 ರನ್‌), ಕೆ.ಎಲ್‌.ರಾಹುಲ್‌(511), ರಿಷಭ್‌ ಪಂತ್‌(479), ರವೀಂದ್ರ ಜಡೇಜಾ(454) ಆರಂಭಿಕ 4 ಪಂದ್ಯಗಳಲ್ಲೂ ದೊಡ್ಡ ಮೊತ್ತ ಕಲೆಹಾಕಿ ತಂಡದ ಕೈಹಿಡಿದಿದ್ದಾರೆ. ಆದರೆ ಬೌಲಿಂಗ್‌ ವಿಭಾಗ ಸೊರಗಿದಂತಿದ್ದು, ನಿರೀಕ್ಷಿತ ಪ್ರದರ್ಶನ ಕಂಡುಬಂದಿಲ್ಲ. ಕೊನೆ ಟೆಸ್ಟ್‌ನಲ್ಲಾದರೂ ಬೌಲಿಂಗ್‌ ಪಡೆ ಭಾರತದ ಕೈ ಹಿಡಿಯಬೇಕಾದ ಅಗತ್ಯವಿದೆ. ರಿಷಭ್‌ ಪಂತ್‌ರಿಂದ ತೆರವಾಗಿರುವ ವಿಕೆಟ್‌ ಕೀಪರ್‌ ಸ್ಥಾನಕ್ಕೆ ಧ್ರುವ್‌ ಜುರೆಲ್‌ ಆಯ್ಕೆಯಾಗುವುದು ಬಹುತೇಕ ಖಚಿತ.

ಬುಮ್ರಾಗೆ ವಿಶ್ರಾಂತಿ?

ಕಾರ್ಯದೊತ್ತದ ನಿಭಾಯಿಸುವ ನಿಟ್ಟಿನಲ್ಲಿ ವೇಗಿ ಜಸ್‌ಪ್ರೀತ್‌ ಬೂಮ್ರಾಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚು. ಅವರ ಸ್ಥಾನಕ್ಕೆ ಆಕಾಶ್‌ದೀಪ್‌ ಸಿಂಗ್‌ ಆಯ್ಕೆಯಾಗಬಹುದು. ಕಳೆದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಅನ್ಶುಲ್‌ ಕಂಬೋಜ್‌ ಈ ಪಂದ್ಯದಲ್ಲಿ ಸ್ಥಾನ ಕಳೆದುಕೊಳ್ಳಬಹುದು. ಹೀಗಾದರೆ ಎಡಗೈ ವೇಗಿ ಅರ್ಶ್‌ದೀಪ್‌ ಸಿಂಗ್‌ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.

ಇನ್ನು, ಇಂಗ್ಲೆಂಡ್‌ ತಂಡ ಕೊನೆ ಟೆಸ್ಟ್‌ನಲ್ಲಿ ತಜ್ಞ ಸ್ಪಿನ್ನರ್‌ ಲಿಯಾಮ್‌ ಡಾವ್ಸನ್‌ರನ್ನು ಆಡಿಸುತ್ತಿಲ್ಲ. ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇಲ್ಲದಿರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಭಾರತ ತಂಡ ಕುಲ್ದೀಪ್‌ ಯಾದವ್‌ರನ್ನು ಆಡಿಸುವ ಬಗ್ಗೆ ಮತ್ತೊಮ್ಮೆ ಯೋಚಿಸಲಿದೆ. ಅವರ ಬದಲು ಮಧ್ಯಮ ವೇಗಿ ಆಲ್ರೌಂಡರ್‌ನನ್ನೇ ಮುಂದುವರಿಸುವ ನಿರೀಕ್ಷೆಯಿದೆ.

ಆತ್ಮವಿಶ್ವಾಸದಲ್ಲಿ ಇಂಗ್ಲೆಂಡ್‌:

4ನೇ ಟೆಸ್ಟ್‌ನ ಕೊನೆ 2 ದಿನ ಬೌಲಿಂಗ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದ ಹೊರತಾಗಿಯೂ ಇಂಗ್ಲೆಂಡ್‌ ತುಂಬು ಆತ್ಮವಿಶ್ವಾಸದೊಂದಿಗೆ ಈ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಆದರೆ ಬೆನ್‌ ಸ್ಟೋಕ್ಸ್‌ರ ಅಲಭ್ಯತೆ ತಂಡಕ್ಕೆ ಕಾಡಬಹುದರು. ಬ್ಯಾಟಿಂಗ್‌ನಲ್ಲಿ 304 ರನ್‌ ಕಲೆಹಾಕಿರುವ ಸ್ಟೋಕ್ಸ್‌, 17 ವಿಕೆಟ್‌ ಕೂಡಾ ಪಡೆದಿದ್ದಾರೆ. ಉಳಿದಂತೆ ಯುವ ಆಲ್ರೌಂಡರ್‌ ಜೇಕಬ್‌ ಬೆಥೆಲ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಆಟಗಾರರ ಪಟ್ಟಿ

ಭಾರತ(ಸಂಭವನೀಯ): ರಾಹುಲ್‌, ಜೈಸ್ವಾಲ್‌, ಸುದರ್ಶನ್‌, ಗಿಲ್‌(ನಾಯಕ), ಜಡೇಜಾ, ವಾಷಿಂಗ್ಟನ್‌, ಜುರೆಲ್‌, ಶಾರ್ದೂಲ್‌/ಕುಲ್ದೀಪ್‌, ಆಕಾಶ್‌ದೀಪ್‌, ಸಿರಾಜ್‌, ಅರ್ಶ್‌ದೀಪ್‌.

ಇಂಗ್ಲೆಂಡ್‌(ಆಡುವ 11): ಜ್ಯಾಕ್‌ ಕ್ರಾಲಿ, ಡಕೆಟ್‌, ಓಲಿ ಪೋಪ್‌(ನಾಯಕ), ರೂಟ್‌, ಬ್ರೂಕ್‌, ಬೆಥೆಲ್‌, ಜೆಮೀ ಸ್ಮಿತ್‌, ಕ್ರಿಸ್‌ ವೋಕ್ಸ್‌, ಆಟ್ಕಿನ್ಸನ್‌, ಓವರ್‌ಟನ್‌, ಜೋಶ್‌ ಟಂಗ್‌.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ

ಪಿಚ್‌ ರಿಪೋರ್ಟ್‌

ಈ ಕ್ರೀಡಾಂಗಣ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ದೊಡ್ಡ ಮೊತ್ತದ ಪಂದ್ಯಗಳಿಗೆ ಹೆಸರುವಾಸಿ. ಮೊದಲ 3 ದಿನ ವೇಗದ ಬೌಲರ್‌ಗಳು ಮೇಲುಗೈ ಸಾಧಿಸಲಿದ್ದು, ಕೊನೆ ದಿನ ಸ್ಪಿನ್ನರ್‌ಗಳಿಗೆ ನೆರವಾಗಬಹುದು.

ಸ್ಟೋಕ್ಸ್‌ ಸೇರಿ ನಾಲ್ವರು ಔಟ್‌: ಪೋಪ್‌ ನಾಯಕ

ಇಂಗ್ಲೆಂಡ್‌ ತಂಡ ಈ ಪಂದ್ಯದಲ್ಲಿ 4 ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ಭುಜದ ಗಾಯಕ್ಕೆ ತುತ್ತಾಗಿರುವ ನಾಯಕ ಬೆನ್‌ ಸ್ಟೋಕ್ಸ್‌ ಪಂದ್ಯಕ್ಕೆ ಗೈರಾಗಲಿದ್ದಾರೆ. ವೇಗಿ ಆರ್ಚರ್‌, ಬ್ರೈಡನ್‌ ಕಾರ್ಸ್‌, ಸ್ಪಿನ್ನರ್‌ ಡಾವ್ಸನ್‌ ಪಂದ್ಯದಿಂದ ಹೊರಬಿದ್ದಿದ್ದಾರೆ. ಸ್ಟೋಕ್ಸ್‌ ಅನುಪಸ್ಥಿತಿಯಲ್ಲಿ ಓಲಿ ಪೋಪ್‌ ತಂಡ ಮುನ್ನಡೆಸಲಿದ್ದಾರೆ. ಆಲ್ರೌಂಡರ್ ಜೇಕಬ್‌ ಬೆಥೆಲ್‌ ವೇಗಿ ಆಟ್ಕಿನ್ಸನ್‌, ಜೋಶ್‌ ಟಂಗ್‌ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.