ಇಂಗ್ಲೆಂಡ್ ವಿರುದ್ದದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ತಂಡದಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಈ ಪಂದ್ಯದಿಂದ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿಗೆ ಸೂಚಿಸಲಾಗಿದೆ. ಬುಮ್ರಾ ಸ್ಥಾನದಲ್ಲಿ ಅಕಾಶ್ ದೀಪ್‌ಗೆ ಅವಕಾಶ ನೀಡುವ ಎಲ್ಲಾ ಸಾಧ್ಯತಗಳಿವೆ.
ಓವಲ್ (ಜು.30) ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಕುತೂಹಲ ಘಟ್ಟಕ್ಕೆ ತಲುಪಿದೆ. ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಹೀಗಾಗಿ ಅಂತಿಮ ಪಂದ್ಯ ಟೀಂ ಇಂಡಿಯಾ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಸರಣಿ ಸಮಬಲಗೊಳಿಸಲು ಗೆಲುವ ಅನಿವಾರ್ಯವಾಗಿದೆ. ಓವಲ್ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಕೆಲ ಬದಲಾವಣೆ ಮಾಡಲು ಟೀಂ ಇಂಡಿಯಾ ಮುಂದಾಗಿದೆ. ಈ ಪೈಕಿ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿಗೆ ಸೂಚಿಸಲಾಗಿದ್ದು, ಈ ಸ್ಥಾನದಲ್ಲಿ ಅಕಾಶ್ ದೀಪ್ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಬಿಸಿಸಿಐ ವೈದ್ಯಕೀಯ ತಂಡದಿಂದ ಮಹತ್ವದ ಸೂಚನೆ
ಜಸ್ಪ್ರೀತ್ ಬುಮ್ರಾ ಸುದೀರ್ಘ ಕಾಲದಿಂದ ಬೆನ್ನು ನೋವಿನ ಸಮಸ್ಯೆ ಎದುರಿಸಿದ್ದಾರೆ. ಇದೇ ಕಾರಣದಿಂದ ಹಲವು ಸರಣಿಗಳಿಂದ ಹೊರಗುಳುದಿದ್ದಾರೆ. ಇದೀಗ ಓವಲ್ ಟೆಸ್ಟ್ ಪಂದ್ಯದಿಂದಲೂ ಬುಮ್ರಾಗೆ ವಿಶ್ರಾಂತಿಗೆ ಸೂಚಿಸಲಾಗಿದೆ. ಬಿಸಿಸಿಐ ವೈದ್ಯಕೀಯ ತಂಡ ಬುಮ್ರಾ ಫಿಟ್ನೆಸ್ ಹಾಗೂ ಬೆನ್ನು ನೋವು ಸಮಸ್ಯೆಯಿಂದ ಸಂಪೂರ್ಣ ಗುಣಮುಖರಾಗಲು ವಿಶ್ರಾಂತಿಯ ಅಗತ್ಯವಿದೆ ಎಂದಿದೆ. ಹೀಗಾಗಿ ಜಸ್ಪ್ರೀತ್ ಬುಮ್ರಾ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯಕ್ಕೆ ಲಭ್ಯವಿರುವಿದಿಲ್ಲ ಎಂದು ಇಎಸ್‌ಪಿಯನ್ ಕ್ರಿಕ್‌ಇನ್ಫೋ ವರದಿ ಮಾಡಿದೆ. 2ನೇ ಟೆಸ್ಟ್ ಪಂದ್ಯದಿಂದಲೂ ಜಸ್ಪ್ರೀತ್ ಬುಮ್ರಾ ಹೊರಗುಳಿದಿದ್ದರು. ಇದೀಗ ಅಂತಿಮ ಪಂದ್ಯದಿಂದಲೂ ಹೊರಗುಳಿದರೆ 5 ಟೆಸ್ಟ್ ಪಂದ್ಯದಲ್ಲಿ 3 ಪಂದ್ಯಗಳನ್ನಾಡಿ 2 ಪಂದ್ಯದಲ್ಲಿ ಹೊರಗುಳಿದಂತಾಗಲಿದೆ.
ವೇಗಿ ಆಕಾಶ್ ದೀಪ್‌ಗೆ ಅವಕಾಶ
ಜಸ್ಪ್ರೀತ್ ಬುಮ್ರಾ ಓವಲ್ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾದರೆ ಈ ಸ್ಥಾನದಲ್ಲಿ ಆಕಾಶ್ ದೀಪ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಆಕಾಶ್ ದೀಪ್ ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಗಾಯದ ಸಮಸ್ಯೆಯಿಂದ 4ನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದ ಅಕಾಶ್ ದೀಪ್ ಇದೀಗ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಅಕಾಶ್ ದೀಪ್ ಓವಲ್ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
2ನೇ ಟೆಸ್ಟ್ ಪಂದ್ಯದಲ್ಲಿ ಆಕಾಶ್ ದೀಪ್ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಸಾಧನೆ ಮಾಡಿದ್ದರು. ಇಷ್ಟೇ ಅಲ್ಲ ತಮ್ಮ ಕರಿಯರ್ ಬೆಸ್ಟ್ 99 ರನ್‌ಗೆ 6 ವಿಕೆಟ್ ಕಬಳಿಸಿ ಮಿಂಚಿದ್ದರು. ಓವಲ್ ಪಿಚ್ ವೇಗಿಗಳಿಗೆ ಹೆಚ್ಚಿನ ನೆರವು ನೀಡಲಿದೆ. ಹೀಗಾಗಿ ಆಕಾಶ್ ದೀಪ್ ಕಣಕ್ಕಿಳಿದರೆ ಟೀಂ ಇಂಡಿಯಾಗೆ ವರವಾಗಲಿದೆ. ಜೊತೆಗೆ ಭಾರತ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ. ಕಾರಣ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿದ್ದರೆ, 2ನೇ ಪಂದ್ಯ ಟೀಂ ಇಂಡಿಯಾ ಗೆದ್ದುಕೊಂಡಿತ್ತು. 3ನೇ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿ, ನಾಲ್ಕನೇ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು. ಹೀಗಾಗಿ ಕೊನೆಯ ಪಂದ್ಯ ಡ್ರಾಗೊಂಡರು ಇಂಗ್ಲೆಂಡ್ ಸರಣಿ ಕೈವಶ ಮಾಡಲಿದೆ.
ಸಿರಾಜ್ ಜೊತೆಗೆ ಗರಿಷ್ಠ ವಿಕೆಟ್ ಟೇಕರ್ ಬುಮ್ರಾ
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಟೇಕರ್ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾದ್ ಮೊದಲ ಸ್ಥಾನದಲ್ಲಿದ್ದಾರೆ. ಇಬ್ಬರು ತಲಾ 14 ವಿಕೆಟ್ ಕಬಳಿಸಿದ್ದಾರೆ. ಆದರೆ ಸರಣಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಸಾಧನೆಯನ್ನು ಬೆನ್ ಸ್ಟೋಕ್ಸ್ ಹೆಸರಿನಲ್ಲಿದೆ. ಸ್ಟೋಕ್ಸ್ 17 ವಿಕೆಟ್ ಕಬಳಿಸಿದ್ದಾರೆ.
ಓವಲ್ ಟೆಸ್ಟ್ ಪಂದ್ಯಕ್ಕೆ ಸಂಭಾವ್ಯ ಟೀಂ ಇಂಡಿಯಾ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಬಮನ್ ಗಿಲ್ (ನಾಯಕ ), ಧ್ರುವ್ ಜರೆಲ್, ರವೀಂದ್ರ ಜಡೇಜಾ, ವಾಶಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅಕಾಶ್ ದೀಪ್, ಅರ್ಶದೀಪ್ ಸಿಂಗ್,
