ಟಿ20 ವಿಶ್ವಕಪ್‌ನ ತನ್ನ ಎರಡನೇ ಪಂದ್ಯದಲ್ಲಿ ಭಾರತ ತಂಡವು ನಮೀಬಿಯಾ ವಿರುದ್ಧ ಸೆಣಸಲಿದೆ. ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಇದೊಂದು ಪೂರ್ವಾಭ್ಯಾಸ ಪಂದ್ಯವಾಗಿದ್ದು, ಬ್ಯಾಟಿಂಗ್ ವೈಫಲ್ಯವನ್ನು ಸರಿಪಡಿಸಿಕೊಂಡು ಬೃಹತ್ ಗೆಲುವು ಸಾಧಿಸುವ ಗುರಿಯನ್ನು ಭಾರತ ಹೊಂದಿದೆ.  

ನವದೆಹಲಿ: ಫೆ.15ರಂದು ನಡೆಯಬೇಕಿರುವ ಬದ್ಧವೈರಿ ಪಾಕಿಸ್ತಾನ ವಿರುದ್ಧ ಹೈವೋಲ್ಟೇಜ್‌ ಪಂದ್ಯಕ್ಕೂ ಮುನ್ನ ರಿಹರ್ಸಲ್‌ ಎಂಬಂತೆ ಭಾರತ ತಂಡ ಈ ಬಾರಿ ಟಿ20 ವಿಶ್ವಕಪ್‌ನ ತನ್ನ 2ನೇ ಪಂದ್ಯದಲ್ಲಿ ಗುರುವಾರ ನಮೀಬಿಯಾ ವಿರುದ್ಧ ಕಣಕ್ಕಿಳಿಯಲಿದೆ. ತಂಡ ಸತತ 2ನೇ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಕಾತರದಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಎ’ ಗುಂಪಿನಲ್ಲಿರುವ ಹಾಲಿ ಚಾಂಪಿಯನ್‌ ಭಾರತ ತನ್ನ ಆರಂಭಿಕ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಗೆದ್ದಿತ್ತು. ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದ ತಂಡಕ್ಕೆ ಗೆಲುವೇನೂ ಸುಲಭದಲ್ಲಿ ಸಿಕ್ಕಿರಲಿಲ್ಲ. ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡ ತಂಡಕ್ಕೆ ನೆರವಾಗಿದ್ದು ನಾಯಕ ಸೂರ್ಯಕುಮಾರ್‌ ಯಾದವ್‌. ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ತಂಡ 9 ವಿಕೆಟ್‌ ಕೂಡಾ ಕಳೆದುಕೊಂಡಿತ್ತು. ಆದರೆ ಬೌಲಿಂಗ್‌ನಲ್ಲಿ ಮೇಲುಗೈ ಸಾಧಿಸಿದ್ದರಿಂದ ತಂಡಕ್ಕೆ ಗೆಲುವು ಲಭಿಸಿತ್ತು.

ಪಾಕ್‌ ವಿರುದ್ಧ ಪಂದ್ಯದಲ್ಲಿ ತುಂಬು ಆತ್ಮವಿಶ್ವಾಸದೊಂದಿಗೆ ಆಡಬೇಕಿದ್ದರೆ ಭಾರತಕ್ಕೆ ನಮೀಬಿಯಾ ವಿರುದ್ಧ ಬೃಹತ್‌ ಗೆಲುವು ಅಗತ್ಯವಿದೆ. ಬ್ಯಾಟಿಂಗ್ ವಿಭಾಗ ತನ್ನ ಎಂದಿನ ಲಯಕ್ಕೆ ಮರಳಬೇಕಿದ್ದು, ಸೂರ್ಯಕುಮಾರ್‌ ಮಾತ್ರವಲ್ಲದೆ ತಿಲಕ್‌ ವರ್ಮಾ, ಇಶಾನ್‌ ಕಿಶನ್‌, ಶಿವಂ ದುಬೆ, ಹಾರ್ದಿಕ್‌, ರಿಂಕು ಸಿಂಗ್‌ ಬ್ಯಾಟ್‌ನಿಂದ ರನ್‌ ಹರಿದುಬರಬೇಕಿದೆ. ಕಳೆದ ಪಂದ್ಯಕ್ಕೆ ಗೈರಾಗಿದ್ದ ಜಸ್‌ಪ್ರೀತ್‌ ಬೂಮ್ರಾ ಈ ಪಂದ್ಯದಲ್ಲಿ ಆಡಲಿದ್ದು, ಅವರ ಬದಲು ಆಡಿದ್ದ ಸಿರಾಜ್‌ ಈ ಪಂದ್ಯದಲ್ಲಿ ಹೊರಗುಳಿಯಬೇಕಾಗುತ್ತದೆ.

ಮತ್ತೊಂದೆಡೆ ನಮೀಬಿಯಾ ಆರಂಭಿಕ ಪಂದ್ಯದಲ್ಲಿ ನೆದರ್‌ಲೆಂಡ್ಸ್‌ ವಿರುದ್ಧ ಸೋತಿತ್ತು. ತಂಡದ ಅಗ್ರ-6 ಬ್ಯಾಟರ್‌ಗಳ ಪೈಕಿ ಜೆಜೆ ಸ್ಮಿತ್‌ ಮಾತ್ರ 140+ ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ. ಭಾರತ ವಿರುದ್ಧ ಯಾವ ರೀತಿ ಬ್ಯಾಟಿಂಗ್‌ ಪ್ರದರ್ಶನ ನೀಡಲಿದ್ದಾರೆ ಎಂದು ಕುತೂಹಲವಿದೆ.

Scroll to load tweet…

ಡಿಸ್ಚಾರ್ಜ್‌ ಆದರೂ ಅಭಿ ಪಂದ್ಯಕ್ಕೆ ಗೈರು?

ಅನಾರೋಗ್ಯಕ್ಕೆ ತುತ್ತಾಗಿರುವ ಅಭಿಷೇಕ್‌ ಶರ್ಮಾ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ ಅವರನ್ನು ಈ ಪಂದ್ಯದಲ್ಲಿ ಆಡಿಸಲಾಗುತ್ತದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಅವರಿಗೆ ವಿಶ್ರಾಂತಿ ನೀಡಿದರೆ ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗಬಹುದು.

ಬುಮ್ರಾ ಫಿಟ್‌, ಇನ್ನೂ ಚೇತರಿಸದ ಅಭಿಷೇಕ್

ನವದೆಹಲಿ: ಸದ್ಯ ನಡೆಯುತ್ತಿರುವ ಟಿ0 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಆಟಗಾರರ ಫಿಟ್ನೆಸ್‌ ದೊಡ್ಡ ತಲೆನೋವಾಗಿದೆ. ಹೊಟ್ಟೆನೋವಿನಿಂದ ಬಳಲುತ್ತಿರುವ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ ಇನ್ನೂ ಚೇತರಿಸಿಕೊಂಡಿಲ್ಲ. ಹಾಗಾಗಿ ಅವರು ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಬಗ್ಗೆ ಖಚಿತವಾಗಿಲ್ಲ.

ಈ ಬಗ್ಗೆ ಸಹಾಯಕ ಕೋಚ್‌ ರಯಾನ್ ಟೆನ್ ಡೋಶ್ಕ್ಯಾಟ್‌ ಮಾತನಾಡಿದ್ದು, ‘ಅಭಿಷೇಕ್‌ ಹೊಟ್ಟೆಯಲ್ಲಿ ಕೆಲ ಸಮಸ್ಯೆಗಳಿವೆ. ಅವರು ಪಂದ್ಯಕ್ಕೆ ಲಭ್ಯವಿರುವ ವಿಶ್ವಾಸವಿದೆ’ ಎಂದಿದ್ದಾರೆ. ಮತ್ತೊಂದೆಡೆ ಜ್ವರದಿಂದ ಮೊದಲ ಪಂದ್ಯದಿಂದ ಹೊರಗುಳಿದಿದ್ದ ವೇಗಿ ಜಸ್ಪ್ರೀತ್‌ ಬೂಮ್ರಾ ಸದ್ಯ ಚೇತರಿಸಿಕೊಂಡಿದ್ದಾರೆ. ವಾಷಿಂಗ್ಟನ್‌ ಸುಂದರ್‌ ಕೂಡಾ ತಂಡ ಕೂಡಿಕೊಂಡಿದ್ದಾರೆ.

01 ಬಾರಿ: ಭಾರತ-ನಮೀಬಿಯಾ ಟಿ20ಯಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗಿವೆ. 2021ರ ವಿಶ್ವಕಪ್‌ ಪಂದ್ಯದಲ್ಲಿ ಭಾರತ 9 ವಿಕೆಟ್‌ನಿಂದ ಗೆದ್ದಿತ್ತು.

--

ಇಂದಿನ ಪಂದ್ಯಗಳು

ಶ್ರೀಲಂಕಾ-ಒಮಾನ್‌, ಬೆಳಗ್ಗೆ 11ಕ್ಕೆ(ಪಲ್ಲೆಕೆಲೆ)

ನೇಪಾಳ-ಇಟಲಿ, ಮಧ್ಯಾಹ್ನ 3ಕ್ಕೆ (ಮುಂಬೈ)

ಭಾರತ-ನಮೀಬಿಯಾ, ಸಂಜೆ 7ಕ್ಕೆ (ನವದೆಹಲಿ)