ಕೆಟ್ ಜಗತ್ತಿನಲ್ಲಿ ವೈಭವ್ ಸೂರ್ಯವಂಶಿ ಹೆಸರು ಮಾರುಮೊಳಗುತ್ತಿದೆ. ಐಪಿಎಲ್ ಹರಾಜಿನಲ್ಲಿ ಕೋಟಿ ಮೊತ್ತಕ್ಕೆ ಮಾರಾಟವಾಗಿ ದಾಖಲೆ ಬರೆದ ಈ ಪ್ರತಿಭೆಗೆ ಟೀಮ್ ಇಂಡಿಯಾ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅತ್ಯಂತ ಮಹತ್ವದ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ಕ್ರಿಕೆಟ್ ಜಗತ್ತಿನಲ್ಲಿ ವೈಭವ್ ಸೂರ್ಯವಂಶಿ ಹೆಸರು ಮಾರುಮೊಳಗುತ್ತಿದೆ. ಐಪಿಎಲ್ ಹರಾಜಿನಲ್ಲಿ ಕೋಟಿ ಮೊತ್ತಕ್ಕೆ ಮಾರಾಟವಾಗಿ ದಾಖಲೆ ಬರೆದ ಈ ಪ್ರತಿಭೆಗೆ ಟೀಮ್ ಇಂಡಿಯಾ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅತ್ಯಂತ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಕೆರಿಯರ್ ಬೆಳೆಯುವ ಹಂತದಲ್ಲಿ ಹುಡುಗಿಯರ ವ್ಯಾಮೋಹ ಮತ್ತು ಸೋಶಿಯಲ್ ಮೀಡಿಯಾ ಮಾಯೆಗೆ ಬಿದ್ದರೆ ಏನಾಗುತ್ತದೆ? ಎಂಬುದಕ್ಕೆ ಉತ್ತಪ್ಪ ನೀಡಿರುವ ಉದಾಹರಣೆಗಳು ಈಗ ಭಾರೀ ಚರ್ಚೆಗೆ ಕಾರಣವಾಗಿವೆ.
ಹುಡುಗಿಯರ ಅಟೆನ್ಷನ್ ಬಗ್ಗೆ ಎಚ್ಚರ
ವೈಭವ್ ಸೂರ್ಯವಂಶಿ ಅವರ ಭವಿಷ್ಯ ನಿರ್ಧಾರವಾಗುವುದು ಮುಂದಿನ ಐದು ವರ್ಷಗಳಲ್ಲಿ ಎಂದು ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ. ಈಗ ಅವನಿಗೆ 15 ವರ್ಷ. 20 ವರ್ಷ ತುಂಬುವವರೆಗೆ ಅವನು ತನ್ನ ಆಟದ ಮೇಲೆ ಎಷ್ಟು ಶಿಸ್ತಿನಿಂದ ಗಮನ ಹರಿಸುತ್ತಾನೋ ಅದೇ ಅವನ ಯಶಸ್ಸನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ 18 ವರ್ಷ ದಾಟಿದ ಮೇಲೆ ಯುವ ಆಟಗಾರರಿಗೆ ಹುಡುಗಿಯರಿಂದ ಅತಿಯಾದ ಅಟೆನ್ಷನ್ (ಗಮನ) ಸಿಗಲು ಶುರುವಾಗುತ್ತದೆ. ಆ ಆಕರ್ಷಣೆಗೆ ಒಳಗಾದರೆ ಆಟದ ಮೇಲಿನ ಶ್ರದ್ಧೆ ಕಡಿಮೆಯಾಗಿ, ದಾರಿ ತಪ್ಪುವ ಅಪಾಯವಿರುತ್ತದೆ ಎಂದು ಉತ್ತಪ್ಪ ನೇರವಾಗಿಯೇ ಎಚ್ಚರಿಸಿದ್ದಾರೆ.
ಕಾಂಬ್ಲಿ ಮತ್ತು ಪೃಥ್ವಿ ಶಾ ಉದಾಹರಣೆ ನೀಡಿದ ಉತ್ತಪ್ಪ
ಅಪಾರ ಪ್ರತಿಭೆ ಇದ್ದರೂ ಶಿಸ್ತಿನ ಕೊರತೆ ಮತ್ತು ದಾರಿ ತಪ್ಪಿದ ಕಾರಣಕ್ಕೆ ಕೆರಿಯರ್ ಹಾಳು ಮಾಡಿಕೊಂಡವರ ಸಾಲಿಗೆ ಉತ್ತಪ್ಪ ಇಬ್ಬರು ಆಟಗಾರರನ್ನು ಹೆಸರಿಸಿದ್ದಾರೆ. ಈ ಹಿಂದೆ ವಿನೋದ್ ಕಾಂಬ್ಲಿ ಮತ್ತು ಪೃಥ್ವಿ ಶಾ ಅವರಲ್ಲಿ ಅದ್ಭುತ ಪ್ರತಿಭೆಯನ್ನು ಕಂಡಿದ್ದೆವು. ಅವರಿಬ್ಬರೂ 17-18ನೇ ವಯಸ್ಸಿನಲ್ಲಿ ಎಲ್ಲರ ಗಮನ ಸೆಳೆದಿದ್ದರು. ಆದರೆ ಅಷ್ಟೇ ವೇಗವಾಗಿ ಅವರು ಕೆಳಗುರುಳಿದರು. ವೈಭವ್ ಸೂರ್ಯವಂಶಿ ಅಂತಹ ತಪ್ಪುಗಳನ್ನು ಮಾಡಬಾರದು ಎಂದು ಕಿವಿಮಾತು ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್‌ಗಿಂತಲೂ ದೊಡ್ಡ ಪ್ರಭಾವ ಬೀರಬಲ್ಲ!
ವೈಭವ್ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಉತ್ತಪ್ಪ, ಒಂದು ವೇಳೆ ವೈಭವ್ ತನ್ನ ಶಿಸ್ತನ್ನು ಕಾಪಾಡಿಕೊಂಡರೆ ದೊಡ್ಡ ಇತಿಹಾಸವನ್ನೇ ಬರೆಯಲಿದ್ದಾನೆ ಎಂದಿದ್ದಾರೆ. ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರಿಗಿಂತಲೂ ಹೆಚ್ಚಿನ ಪ್ರಭಾವ ಬೀರುವ ಸಾಮರ್ಥ್ಯ ವೈಭವ್‌ಗೆ ಇದೆ. ಸದ್ಯಕ್ಕೆ ಅವನು ಜಾಹೀರಾತು ಮತ್ತು ಸೋಶಿಯಲ್ ಮೀಡಿಯಾದಿಂದ ದೂರವಿರುವುದು ಒಳ್ಳೆಯದು. ಅವನ ಸುತ್ತಮುತ್ತ ಸರಿಯಾದ ಮಾರ್ಗದರ್ಶಕರು ಇರಬೇಕು ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.
ಉತ್ತಪ್ಪ ಅವರ ಈ ಮಾತುಗಳು ಕೇವಲ ವೈಭವ್‌ಗೆ ಮಾತ್ರವಲ್ಲ, ದೇಶದ ಪ್ರತಿಯೊಬ್ಬ ಉದಯೋನ್ಮುಖ ಕ್ರೀಡಾಪಟುವಿಗೂ ಒಂದು ಪಾಠದಂತಿದೆ. ಈ ಹದಿಹರೆಯದ ಸಂಚಲನ ತನ್ನ ಪ್ರತಿಭೆಯನ್ನು ಕಾಪಾಡಿಕೊಂಡು ಮುನ್ನಡೆದರೆ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಯುಗ ಆರಂಭವಾಗುವುದರಲ್ಲಿ ಸಂಶಯವಿಲ್ಲ.


