ಕುಲ್ದೀಪ್ ಯಾದವ್ ಅವರ ಮಾರಕ ಬೌಲಿಂಗ್ & ಕೆ ಎಲ್ ರಾಹುಲ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ, ಭಾರತವು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ, ಟೀಂ ಇಂಡಿಯಾ 2 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಕ್ಲೀನ್‌ಸ್ವೀಪ್ ಮಾಡಿದೆ.
ನವದೆಹಲಿ: ಕುಲ್ದೀಪ್ ಯಾದವ್ ಮಿಂಚಿನ ಬೌಲಿಂಗ್, ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್ ಹಾಗೂ ಕೆ ಎಲ್ ರಾಹುಲ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ಎದುರಿನ ಎರಡನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ 7 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿದೆ.
ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಫಾಲೋ ಆನ್‌ಗೆ ಒಳಗಾಗಿದ್ದ ವೆಸ್ಟ್ ಇಂಡೀಸ್ ತಂಡವು, ಎರಡನೇ ಇನ್ನಿಂಗ್ಸ್‌ನಲ್ಲಿ ಜಾನ್ ಕ್ಯಾಂಬೆಲ್ (115) ಹಾಗೂ ಶಾಯ್ ಹೋಪ್ (103) ಆಕರ್ಷಕ ಶತಕಗಳ ನೆರವಿನಿಂದ 390 ರನ್ ಕಲೆಹಾಕಿತು. ಈ ಮೂಲಕ ಭಾರತಕ್ಕೆ ಗೆಲ್ಲಲು 121 ರನ್‌ಗಳ ಸಾಧಾರಣ ಗುರಿ ಸಿಕ್ಕಿತ್ತು. ಈ ಗುರಿ ಬೆನ್ನತ್ತಿದ ಭಾರತ, ನಾಲ್ಕನೇ ದಿನದಾಟದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 63 ರನ್ ಕಲೆಹಾಕಿತು. ಕೊನೆಯ ದಿನ ಗೆಲ್ಲಲು ಭಾರತಕ್ಕೆ ಕೇವಲ 58 ರನ್‌ಗಳ ಅಗತ್ಯವಿತ್ತು. ಇನ್ನು ಕೊನೆಯ ದಿನದಾಟದಲ್ಲಿ ಸಾಯಿ ಸುದರ್ಶನ್ ತಮ್ಮ ಖಾತೆಗೆ 9 ರನ್ ಸೇರಿಸಿ 39 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಕೆ ಎಲ್ ರಾಹುಲ್, 108 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ ಎರಡು ಸಿಕ್ಸರ್ ಸಹಿತ 58 ರನ್ ಗಳಿಸಿ ತಂಡವನ್ನು ಅಜೇಯವಾಗಿ ಗೆಲುವಿನ ದಡ ಸೇರಿಸಿದರು. ನಾಯಕ ಶುಭ್‌ಮನ್ ಗಿಲ್ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ವಿಕೆಟ್ ಕೀಪರ್ ಧ್ರುವ್ ಜುರೆಲ್ ಅಜೇಯ 6 ರನ್ ಸಿಡಿಸಿದರು.
ಹೇಗಿತ್ತು ಎರಡನೇ ಟೆಸ್ಟ್?
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀ ಇಂಡಿಯಾ, ಶುಭ್‌ಮನ್ ಗಿಲ್(175), ನಾಯಕ ಶುಭ್‌ಮನ್ ಗಿಲ್(129*) ಆಕರ್ಷಕ ಶತಕ ಹಾಗೂ ಸಾಯಿ ಸುದರ್ಶನ್(87) ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ 5 ವಿಕೆಟ್ ಕಳೆದುಕೊಂಡು 518 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು ಕುಲ್ದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ಮಾರಕ ದಾಳಿಗೆ ತತ್ತರಿಸಿ ಕೇವಲ 248 ರನ್‌ಗಳಿಗೆ ಸರ್ವಪತನ ಕಂಡಿತು. ವಿಂಡೀಸ್‌ನ ಯಾವೊಬ್ಬ ಬ್ಯಾಟರ್ ಕೂಡಾ ಅರ್ಧಶತಕ ದಾಖಲಿಸಲು ಯಶಸ್ವಿಯಾಗಲಿಲ್ಲ. ಕುಲ್ದೀಪ್ ಯಾದವ್ 5 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಮೂರು ವಿಕೆಟ್ ಪಡೆದರು.
ಬರೋಬ್ಬರಿ 270 ರನ್‌ಗಳ ಬೃಹತ್ ಮುನ್ನಡೆ ಪಡೆದಿದ್ದರಿಂದ ಭಾರತ ತಂಡವು ವೆಸ್ಟ್ ಇಂಡೀಸ್ ಮೇಲೆ ಫಾಲೋ ಆನ್ ಹೇರಿತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಕ್ಯಾಂಬೆಲ್ 115 ಹಾಗೂ ಶಾಯ್ ಹೋಪ್ 103 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಹೀಗಾಗಿ ತಂಡವನ್ನು ಇನ್ನಿಂಗ್ಸ್ ಸೋಲಿನಿಂದ ಪಾರು ಮಾಡಿದರು.
