ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್‌ನಲ್ಲಿ ಫಾಲೋ ಆನ್‌ಗೆ ಒಳಗಾದ ವಿಂಡೀಸ್, ಎರಡನೇ ಇನ್ನಿಂಗ್ಸ್‌ನಲ್ಲಿ ದಿಟ್ಟ ಪ್ರತಿರೋಧ ತೋರಿದೆ. ಕುಲ್ದೀಪ್ ಯಾದವ್ ಅವರ 5 ವಿಕೆಟ್ ಗೊಂಚಲಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಕುಸಿದರೂ, ಎರಡನೇ ಇನ್ನಿಂಗ್ಸ್‌ನಲ್ಲಿ ಚೇತರಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ.
ನವದೆಹಲಿ: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಆತಿಥೇಯ ಟೀಂ ಇಂಡಿಯಾಗೆ ವಿಂಡೀಸ್ ತಿರುಗೇಟು ನೀಡುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 270 ರನ್ ಹಿನ್ನಡೆ ಅನುಭವಿಸಿದರ ಪರಿಣಾಮ ಫಾಲೋ ಆನ್‌ಗೆ ಒಳಗಾದ ವೆಸ್ಟ್ ಇಂಡೀಸ್ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಎದುರು ದಿಟ್ಟ ಪ್ರತಿರೋಧ ತೋರಿದೆ. ಮೂರನೇ ದಿನದಾಟದಂತ್ಯಕ್ಕೆ ವೆಸ್ಟ್ ಇಂಡೀಸ್ ತಂಡವು ತಂಡವು ನಾಲ್ಕು ವಿಕೆಟ್ ಕಳೆದುಕೊಂಡು 173 ರನ್ ಬಾರಿಸಿದ್ದು, ಇನ್ನೂ 97 ರನ್‌ಗಳ ಹಿನ್ನಡೆಯಲ್ಲಿದೆ.
ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎರಡನೇ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿತ್ತು. ಇನ್ನು ಮೂರನೇ ದಿನದಾಟ ಆರಂಭಿಸಿದ ವಿಂಡೀಸ್ ತಂಡಕ್ಕೆ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ ಆರಂಭದಲ್ಲೇ ಶಾಕ್ ನೀಡಿದರು. ವೆಸ್ಟ್ ಇಂಡೀಸ್ ತಂಡವು ತನ್ನ ಖಾತೆಗೆ 19 ರನ್ ಸೇರಿಸುವಷ್ಟರಲ್ಲಿ ಮಧ್ಯಮ ಕ್ರಮಾಂಕದ 4 ಪ್ರಮುಖ ವಿಕೆಟ್ ಕಳೆದುಕೊಳ್ಳುವ ಮೂಲಕ ನಾಟಕೀಯ ಕುಸಿತ ಕಂಡಿತು.
ಬಾಲಂಗೋಚಿಗಳ ಆಸರೆ:
ಕೇವಲ 175 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಬಾಲಂಗೋಚಿಗಳು ಆಸರೆಯಾದರು. ಕೊನೆಯಲ್ಲಿ ಖಾರೆ ಪಿಯರೆ(23), ಜೇಡನ್ ಸೀಲ್ಸ್(13) ಹಾಗೂ ಆಂಡರ್‌ಸನ್ ಫಿಲಿಫ್ ಅಜೇಯ 24 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 240ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಕುಲ್ದೀಪ್ ಯಾದವ್‌ಗೆ 5 ವಿಕೆಟ್ ಗೊಂಚಲು
ಭಾರತ ಪರ ಮಿಂಚಿನ ದಾಳಿ ನಡೆಸಿದ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ 82 ರನ್ ನೀಡಿ 5 ವಿಕೆಟ್ ಪಡೆದರು. ಇನ್ನು ರವೀಂದ್ರ ಜಡೇಜಾ 3 ಹಾಗೂ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನು ಫಾಲೋ-ಆನ್‌ಗೆ ಒಳಗಾದ ವೆಸ್ಟ್ ಇಂಡೀಸ್ ತಂಡವು ಮತ್ತೊಮ್ಮೆ ಇನ್ನಿಂಗ್ಸ್ ಸೋಲಿನ ಭೀತಿಗೆ ಸಿಲುಕಿತ್ತು. 35 ರನ್ ಗಳಿಸುವಷ್ಟರಲ್ಲಿ ವೆಸ್ಟ್ ಇಂಡೀಸ್ ತಂಡವು ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಮೂರನೇ ವಿಕೆಟ್‌ಗೆ ಜತೆಯಾದ ಜಾನ್ ಕ್ಯಾಂಪ್‌ಬೆಲ್ ಹಾಗೂ ಶಾಯ್ ಹೋಪ್ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮೂರನೇ ವಿಕೆಟ್‌ಗೆ ಈ ಜೋಡಿ ಮುರಿಯದ 138 ರನ್‌ಗಳ ಜತೆಯಾಟವಾಡುವ ತಂಡಕ್ಕೆ ಆಸರೆಯಾದರು. ಶಾಯ್ ಹೋಪ್ 66 ಹಾಗೂ ಜಾನ್ ಕ್ಯಾಂಪ್‌ಬೆಲ್ 87 ರನ್ ಸಿಡಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.