ಸಿಡ್ನಿ(ಡಿ.13): ಭಾರತ ಹಾಗೂ ಆಸ್ಟ್ರೇಲಿಯಾ 'ಎ' ತಂಡಗಳ ನಡುವಿನ 3 ದಿನಗಳ ಪಿಂಕ್ ಬಾಲ್ ಅಭ್ಯಾಸ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯವಾಗಿದೆ. ಕೊನೆಯ ದಿನದಾಟದಲ್ಲಿ ಆಸ್ಟ್ರೇಲಿಯಾ 'ಎ' ತಂಡವನ್ನು ಆಲೌಟ್ ಮಾಡಿ ಗೆಲುವು ದಾಖಲಿಸುವ ಲೆಕ್ಕಾಚಾರದಲ್ಲಿದ್ದ ಅಜಿಂಕ್ಯ ರಹಾನೆ ಪಡೆಗೆ ಬೆನ್‌ ಮೆಕ್‌ಡರ್ಮೊಟ್‌ ಹಾಗೂ ಜಾಕ್ ವಿಲ್‌ಡರ್ಮೊಟ್‌ ಭರ್ಜರಿ ಶತಕ ಬಾರಿಸಿ ಟೀಂ ಇಂಡಿಯಾ ಲೆಕ್ಕಾಚಾರ ತಲೆ ಕೆಳಗಾಗುವಂತೆ ಮಾಡಿದರು.

ಹೌದು, ಎರಡನೇ ದಿನದಾಟಕ್ಕೆ 386 ರನ್ ಬಾರಿಸಿದ್ದ ಟೀಂ ಇಂಡಿಯಾ ಕೊನೆಯ ದಿನ ಬ್ಯಾಟಿಂಗ್ ಮಾಡಲಿಳಿಯದೇ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತು. ಬಳಿಕ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ 2 ಹಾಗೂ ಮೊಹಮ್ಮದ್ ಸಿರಾಜ್ ಆರಂಭದಲ್ಲೇ ವಿಕೆಟ್ ಕಬಳಿಸುವ ಮೂಲಕ ಆತಿಥೇಯರಿಗೆ ಶಾಕ್ ನೀಡುವಲ್ಲಿ ಯಶಸ್ವಿಯಾದರು. ಒಂದು ಹಂತದಲ್ಲಿ ಆಸ್ಟ್ರೇಲಿಯಾ 'ಎ' ತಂಡ ಕೇವಲ 25 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು

ಟೀಂ ಇಂಡಿಯಾ ಬೌಲರ್‌ಗಳನ್ನು ಕಾಡಿದ ಮಧ್ಯಮ ಕ್ರಮಾಂಕ: ಆರಂಭದಲ್ಲಿ ಸಿಕ್ಕ ಯಶಸ್ಸನ್ನು ಬಳಸಿಕೊಳ್ಳಲು ಆ ಬಳಿಕ ಟೀಂ ಇಂಡಿಯಾ ಬೌಲರ್‌ಗಳು ಯಶಸ್ವಿಯಾಗಲಿಲ್ಲ. ನಾಲ್ಕನೇ ವಿಕೆಟ್‌ಗೆ ಬೆನ್‌ ಮೆಕ್‌ಡರ್ಮೊಟ್(107*) ಹಾಗೂ ನಾಯಕ ಅಲೆಕ್ಸ್‌ ಕ್ಯಾರಿ(58) ಶತಕದ ಜತೆಯಾಟವಾಡುವ ಮೂಲಕ ಭಾರತೀಯ ಬೌಲರ್‌ಗಳಿಗೆ ತಿರುಗೇಟು ನೀಡಿದರು, ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಹನುಮ ವಿಹಾರಿ ಯಶಸ್ವಿಯಾದರು. ಆ ಬಳಿಕ 5ನೇ ವಿಕೆಟ್‌ಗೆ ಬೆನ್‌ ಡರ್ಮೊಟ್‌ ಜತೆಗೆ ಜಾಕ್‌ ವಿಲ್ಡರ್ಮೊಟ್‌(111*) ಮತ್ತೊಂದು ಶತಕದ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾ ಬೌಲರ್‌ಗಳನ್ನು ಕಾಡಿದರು.

ವಿಹಾರಿ-ಪಂತ್ ಅಜೇಯ ಶತಕ: ಭಾರತ ಬೃಹತ್ ಮೊತ್ತ

ಡಿಸೆಂಬರ್ 17ರಂದು ನಡೆಯಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯವಾಗಿರಲಿದ್ದು, ಅದಕ್ಕೂ ಮುನ್ನ ನಡೆದ ಮೂರು ದಿನಗಳ ಪಿಂಕ್‌ ಬಾಲ್ ಅಭ್ಯಾಸ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಹಾಗೂ ಬ್ಯಾಟ್ಸ್‌ಮನ್‌ಗಳು ಭರ್ಜರಿಯಾಗಿಯೇ ಅಭ್ಯಾಸ ನಡೆಸಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ಮೊದಲ ಇನಿಂಗ್ಸ್‌ನಲ್ಲಿ ಕೇವಲ 194 ರನ್ ಬಾರಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ 'ಎ' ತಂಡ ಕೇವಲ 108 ರನ್‌ಗಳಿಗೆ ಸರ್ವಪತನ ಕಂಡಿತ್ತು. ನಂತರ ಎರಡನೇ ಇನಿಂಗ್ಸ್‌ನಲ್ಲಿ ರಿಷಭ್‌ ಪಂತ್ ಹಾಗೂ ಹನುಮ ವಿಹಾರಿ ಬಾರಿಸಿದ ಅಜೇಯ ಶತಕಗಳ ನೆರವಿನಿಂದ ಟೀಂ ಇಂಡಿಯಾ 386 ರನ್ ಬಾರಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತ್ತು. ಇನ್ನು ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 'ಎ' ತಂಡ 4 ವಿಕೆಟ್ ಕಳೆದುಕೊಂಡು 307 ರನ್ ಬಾರಿಸಿದಾಗ ಪಂದ್ಯ ಡ್ರಾ ಎಂದು ಘೋಷಿಸಲಾಯಿತು.