ಸಿಡ್ನಿ(ಡಿ.13): ಆಸ್ಪ್ರೇಲಿಯಾ ವಿರುದ್ಧ ಡಿ.17ರಂದು ಆರಂಭವಾಗಲಿರುವ ಪಿಂಕ್‌ ಬಾಲ್‌ ಟೆಸ್ಟ್‌ಗೆ ಅಭ್ಯಾಸ ನಡೆಸುತ್ತಿರುವ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಭರ್ಜರಿ ಲಯ ಪ್ರದರ್ಶಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಆಸ್ಪ್ರೇಲಿಯಾ ‘ಎ’ ವಿರುದ್ಧದ ಅಭ್ಯಾಸ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಭಾರತ 4 ವಿಕೆಟ್‌ ನಷ್ಟಕ್ಕೆ 386 ರನ್‌ ಗಳಿಸಿದ್ದು, 472 ರನ್‌ಗಳ ಬೃಹತ್‌ ಮುನ್ನಡೆ ಸಾಧಿಸಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ 194 ರನ್‌ ಗಳಿಸಿದ್ದ ಭಾರತ, ಮೊದಲ ದಿನವೇ ಆಸ್ಪ್ರೇಲಿಯಾ ‘ಎ’ ತಂಡವನ್ನು 108 ರನ್‌ಗಳಿಗೆ ಆಲೌಟ್‌ ಮಾಡಿತ್ತು. 2ನೇ ದಿನವಾದ ಶನಿವಾರ 2ನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ, ಪೃಥ್ವಿ ಶಾ (03) ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆದರೆ ಮಯಾಂಕ್‌ ಅಗರ್‌ವಾಲ್‌ (61) ಹಾಗೂ ಶುಭ್‌ಮನ್‌ ಗಿಲ್‌ (65) ಅರ್ಧಶತಕ ಬಾರಿಸಿದರೆ, ಹನುಮ ವಿಹಾರಿ ಹಾಗೂ ರಿಷಭ್‌ ಪಂತ್‌ ಶತಕ ಸಿಡಿಸಿದರು. ನಾಯಕ ಅಜಿಂಕ್ಯ ರಹಾನೆ 38 ರನ್‌ ಗಳಿಸಿದರು.

ಆಸೀಸ್‌ ಯುವ ಆಟಗಾರರ ಕನಸಿಗೆ ಟೀಂ ಇಂಡಿಯಾ ವೇಗಿಗಳಿಂದ ತಣ್ಣೀರು..!

194 ಎಸೆತಗಳಲ್ಲಿ 104 ರನ್‌ ಗಳಿಸಿರುವ ವಿಹಾರಿ ಅಜೇಯವಾಗಿ ಉಳಿದರೆ, 73 ಎಸೆತಗಳಲ್ಲಿ 9 ಬೌಂಡರಿ, 6 ಸಿಕ್ಸರ್‌ ನೆರವಿನಿಂದ 103 ರನ್‌ ಗಳಿಸಿ ಪಂತ್‌ ಕ್ರೀಸ್‌ ವಿಕೆಟ್‌ ಉಳಿಸಿಕೊಂಡಿದ್ದಾರೆ. 3ನೇ ಹಾಗೂ ಅಂತಿಮ ದಿನವಾದ ಭಾನುವಾರ ಮೊದಲ ಅವಧಿಯಲ್ಲೇ ಭಾರತ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಳ್ಳುವ ನಿರೀಕ್ಷೆ ಇದೆ. ಆಸ್ಪ್ರೇಲಿಯಾ ‘ಎ’ ತಂಡವನ್ನು ಆಲೌಟ್‌ ಮಾಡಿ, ಭರ್ಜರಿ ಗೆಲುವಿನೊಂದಿಗೆ ಅಡಿಲೇಡ್‌ಗೆ ಹೊರಡಲು ಭಾರತ ಕಾತರಿಸುತ್ತಿದೆ.

ಕೊನೆ ಓವರಲ್ಲಿ ಪಂತ್‌ 22 ರನ್‌!

2ನೇ ದಿನದಾಟದ ಅಂತಿಮ ಓವರ್‌ನಲ್ಲಿ ಬರೋಬ್ಬರಿ 22 ರನ್‌ ಸಿಡಿಸಿದ ರಿಷಭ್‌ ಪಂತ್‌ ಶತಕ ಪೂರೈಸಿದರು. ಈ ಶತಕದೊಂದಿಗೆ ಮೊದಲ ಟೆಸ್ಟ್‌ನಲ್ಲಿ ತಮಗೆ ಸ್ಥಾನ ನೀಡುವಂತೆ ತಂಡದ ಆಡಳಿತದ ಮೇಲೆ ಒತ್ತಡ ಹಾಕಿದ್ದಾರೆ. ವೃದ್ಧಿಮಾನ್‌ ಸಾಹ ಹಾಗೂ ಪಂತ್‌ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲ ಕೊಹ್ಲಿ ಹಾಗೂ ಕೋಚ್‌ ಶಾಸ್ತ್ರಿಗೆ ಎದುರಾಗಲಿದೆ.

ಸ್ಕೋರ್‌: 

ಭಾರತ 194 ಹಾಗೂ 386/4, 

ಆಸ್ಪ್ರೇಲಿಯಾ ‘ಎ’ 108
(* ಎರಡನೇ ದಿನದಾಟದಂತ್ಯಕ್ಕೆ)