ವಿರಾಟ್ ಕೊಹ್ಲಿಗೆ ಮುತ್ತಿಕ್ಕಿ ಆನಂದ ಭಾಷ್ಪ ಸುರಿಸಿದ ವಿಂಡೀಸ್ ಕ್ರಿಕೆಟಿಗನ ತಾಯಿ...! ವಿಡಿಯೋ ವೈರಲ್
ವೆಸ್ಟ್ ಇಂಡೀಸ್ ಎದುರು ಭರ್ಜರಿ ಶತಕ ಸಿಡಿಸಿ ಮಿಂಚಿದ ವಿರಾಟ್ ಕೊಹ್ಲಿ
ವಿಂಡೀಸ್ ಕ್ರಿಕೆಟಿಗನ ತಾಯಿ ಭೇಟಿ ಮಾಡಿದ ಕಿಂಗ್ ಕೊಹ್ಲಿ
ವಿರಾಟ್ ಕೊಹ್ಲಿಯ ಸಿಂಪ್ಲಿಸಿಟಿಯ ವಿಡಿಯೋ ವೈರಲ್
ಪೋರ್ಟ್ ಆಫ್ ಸ್ಪೇನ್(ಜು.22): ಟೀಂ ಇಂಡಿಯಾ ಸೂಪರ್ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಎಷ್ಟೊಂದು ಸರಳ ವ್ಯಕ್ತಿ ಎನ್ನುವುದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಸದ್ಯ ವೆಸ್ಟ್ ಇಂಡೀಸ್ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ ಕೊಹ್ಲಿ, ಎರಡನೇ ದಿನದಾಟ ಮುಗಿಸಿ ಮೈದಾನದಿಂದ ಹೊರ ಬರುತ್ತಿದ್ದಂತೆಯೇ ವಿಂಡೀಸ್ ವಿಕೆಟ್ ಕೀಪರ್ ಬ್ಯಾಟರ್ ಜೋಶ್ವಾ ಡ ಸಿಲ್ವಾ ಅವರ ತಾಯಿಯನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಜೋಶ್ವಾ ಅವರ ತಾಯಿ, ವಿರಾಟ್ ಕೊಹ್ಲಿಯನ್ನು ಅಪ್ಪಿಕೊಂಡು ಕೆನ್ನೆಗೆ ಮುತ್ತಿಕ್ಕಿ ಆನಂದ ಭಾಷ್ಪ ಸುರಿಸಿದ್ದಾರೆ. ಈ ವಿಡಿಯೋವೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ
ವಿರಾಟ್ ಕೊಹ್ಲಿ ಜತೆಗಿದ್ದಾಗ ಮಗ ಜೋಶ್ವಾ ಅವರಿಗೆ ಅವರ ತಾಯಿ "ಫೋಟೋ ತೆಗಿ" ಎಂದು ಹೇಳುತ್ತಾರೆ. ಇದಾದ ಬಳಿಕ ವಿರಾಟ್ ಕೊಹ್ಲಿಯನ್ನು ಉದ್ದೇಶಿಸಿ, "ನೀವೊಬ್ಬ ಅದ್ಭುತ ವ್ಯಕ್ತಿ, ನಿಮ್ಮ ಹೆಂಡತಿ ಸುಂದರವಾಗಿದ್ದಾರೆ ಎಂದು ಜೋಶ್ವಾ ತಾಯಿ ಹೇಳುತ್ತಾರೆ.
ಈ ವಿಡಿಯೋವನ್ನು ವಿಮಲ್ ಕುಮಾರ್ ಎನ್ನುವ ಪತ್ರಕರ್ತ ಶೇರ್ ಮಾಡಿದ್ದು, "ನಾನು ನಿನ್ನನ್ನು ಅಲ್ಲ, ವಿರಾಟ್ ಕೊಹ್ಲಿಯನ್ನು ನೋಡಬೇಕು ಎನ್ನುವ ಉದ್ದೇಶದಿಂದಲೇ ಇಂದು ಮೈದಾನಕ್ಕೆ ಬರುತ್ತೇನೆ ಎಂದು ಜೋಶ್ವಾಗೆ ಹೇಳಿದ್ದೆ. ಯಾಕೆಂದರೆ ನಾನು ನಿನ್ನನ್ನು ಪ್ರತಿದಿನವೂ ನೋಡುತ್ತಿರುತ್ತೇನೆ. ನಾನು ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿಯನ್ನು ಭೇಟಿಯಾಗಿದ್ದು. ಅವರೊಬ್ಬ ಅದ್ಭುತ ವ್ಯಕ್ತಿ. ಅವರೊಬ್ಬ ಪ್ರತಿಭಾನ್ವಿತ ವ್ಯಕ್ತಿಯಾಗಿದ್ದು, ನನ್ನ ಮಗ ಕೂಡಾ ಅವರನ್ನು ಅನುಕರಿಸಲಿದ್ದಾನೆ ಎನ್ನುವ ವಿಶ್ವಾಸವಿದೆ ಎಂದು ಜೋಶ್ವಾ ಅವರ ತಾಯಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ನಮ್ಮ ಜೀವಮಾನದ ಅತ್ಯದ್ಭುತ ಕ್ರಿಕೆಟಿಗ. ಹೀಗಾಗಿ ಅವರನ್ನು ಭೇಟಿ ಮಾಡಿದ್ದು, ನನ್ನ ಪಾಲಿನ ಸೌಭಾಗ್ಯ ಎಂದು ಭಾವಿಸುತ್ತೇನೆ. ವಿರಾಟ್ ಕೊಹ್ಲಿ ಜತೆಗೆ ನನ್ನ ಮಗನೂ ಇದೇ ಮೈದಾನದಲ್ಲಿ ಎದುರ ಬದುರಾಗಿ ಆಡುತ್ತಿರುವುದು ಖುಷಿ ಎನಿಸುತ್ತಿದೆ ಎಂದು ಜೋಶ್ವಾ ತಾಯಿ ಹೇಳಿದ್ದಾರೆ.
ಇನ್ನು ಪಂದ್ಯದ ವೇಳೆಯಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಕ್ಷೇತ್ರರಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಜೋಶ್ವಾ ಡ ಸಿಲ್ವಾ, ಕೊಹ್ಲಿ ಬಳಿ, "ನನ್ನ ತಾಯಿ ನನಗೆ ಕರೆ ಮಾಡಿ, ನಿಮ್ಮ ಆಟವನ್ನು ನೋಡಲು ಬರುತ್ತಿದ್ದೇನೆ ಎಂದು ತಿಳಿಸಿದರು. ನಾನು ಅದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳುವ ಮಾತುಗಳ ಸ್ಟಂಪ್ಸ್ ಮೈಕ್‌ನಲ್ಲಿ ಸೆರೆಯಾಗಿತ್ತು.
Maharaja Trophy T20 ಹರಾಜು: ದುಬಾರಿ ಮೊತ್ತಕ್ಕೆ ಶಿವಮೊಗ್ಗ ಪಾಲಾದ ಪಿಂಚ್ ಹಿಟ್ಟರ್ ಅಭಿಮನ್ ಮನೋಹರ್
ಇನ್ನು ಪಂದ್ಯದ ಬಗ್ಗೆ ಮಾತನಾಡುವುದಾದರೇ, ವೆಸ್ಟ್ ಇಂಡೀಸ್ ಎದುರಿನ ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 29ನೇ ಸೆಂಚುರಿ ಬಾರಿಸಿ ಸಂಭ್ರಮಿಸಿದರು. ಈ ಮೂಲಕ ಕ್ರಿಕೆಟ್ ದಂತಕಥೆ ಸರ್ ಡಾನ್ ಬ್ರಾಡ್ಮನ್ ಅವರ ಶತಕದ ದಾಖಲೆ(29) ಸರಿಗಟ್ಟುವಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದರು. ವಿರಾಟ್ ಕೊಹ್ಲಿ ಬಾರಿಸಿದ ಶತಕ ಹಾಗೂ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಬಾರಿಸಿದ ಸಮಯೋಚಿತ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 438 ರನ್ ಗಳಿಸಿ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿರುವ ವೆಸ್ಟ್ ಇಂಡೀಸ್ ತಂಡವು ಎರಡನೇ ದಿನದಾಟದಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 86 ರನ್ ಬಾರಿಸಿದ್ದು, ಇನ್ನೂ 352 ರನ್‌ಗಳ ಹಿನ್ನಡೆಯಲ್ಲಿದೆ.
ವಿದೇಶಿ ನೆಲದಲ್ಲಿ ಶತಕದ ಬರ ನೀಗಿಸಿಕೊಂಡ ಕೊಹ್ಲಿ: ವಿಂಡೀಸ್ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಬರೋಬ್ಬರಿ 5 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಶತಕದ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. 2018ರ ಡಿಸೆಂಬರ್‌ನಲ್ಲಿ ಪರ್ತ್‌ನಲ್ಲಿ ಆಸ್ಟ್ರೇಲಿಯಾ ಎದುರು ವಿದೇಶಿ ನೆಲದಲ್ಲಿ ಕೊನೆಯ ಟೆಸ್ಟ್ ಶತಕ ಸಿಡಿಸಿದ್ದರು. ಇದಾದ ಬಳಿಕ ಪದೇ ಪದೇ ವಿದೇಶಿ ನೆಲದಲ್ಲಿ ಮೂರಂಕಿ ಮೊತ್ತ ದಾಖಲಿಸಲು ವಿರಾಟ್ ಕೊಹ್ಲಿ ವಿಫಲವಾಗುತ್ತಾ ಬಂದಿದ್ದರು. ಇದೀಗ ತಮ್ಮ ಕ್ರಿಕೆಟ್ ವೃತ್ತಿಜೀವನದ 500ನೇ ಇಂಟರ್ ನ್ಯಾಷನಲ್ ಪಂದ್ಯವನ್ನಾಡುತ್ತಿರುವ ವಿರಾಟ್ ಕೊಹ್ಲಿ ಶತಕ ಸಿಡಿಸುವ ಮೂಲಕ, ಈ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.