ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಹರಾಜಿಗೆ ಭರ್ಜರಿ ಚಾಲನೆಟೂರ್ನಿಯ ದುಬಾರಿ ಆಟಗಾರನಾಗಿ ಹೊರಹೊಮ್ಮಿದ ಅಭಿನವ್ ಮನೋಹರ್14 ಲಕ್ಷ ರುಪಾಯಿಗೆ ಬೆಂಗಳೂರು ಬ್ಲಾಸ್ಟರ್ಸ್‌ ಪಾಲಾದ ಮಯಾಂಕ್‌ ಅಗರ್‌ವಾಲ್

ಬೆಂಗಳೂರು(ಜು.22): ಬಹುನಿರೀಕ್ಷಿತ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಹರಾಜು ಪ್ರಕ್ರಿಯೆ ಭರ್ಜರಿಯಾಗಿಯೇ ಸಾಗುತ್ತಿದ್ದು, ಸ್ಪೋಟಕ ಬ್ಯಾಟರ್‌ ಅಭಿನವ್ ಮನೋಹರ್ ಅವರನ್ನು ಶಿವಮೊಗ್ಗ ಲಯನ್ಸ್ ತಂಡವು ದಾಖಲೆಯ 15 ಲಕ್ಷ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಈ ಆವೃತ್ತಿಯ ಮಹಾರಾಜ ಟಿ20 ಟೂರ್ನಿಯ ದುಬಾರಿ ಆಟಗಾರ ಎನ್ನುವ ಹಿರಿಮೆಗೆ ಅಭಿನವ್ ಮನೋಹರ್ ಪಾತ್ರರಾಗಿದ್ದಾರೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ ತಾರಾ ಆಟಗಾರರಾದ ಮಯಾಂಕ್‌ ಅಗರ್‌ವಾಲ್‌, ದೇವದತ್‌ ಪಡಿಕ್ಕಲ್‌, ಮನೀಶ್‌ ಪಾಂಡೆ, ವೈಶಾಖ್‌, ಕೆ.ಗೌತಮ್‌ ಸೇರಿದಂತೆ 700ಕ್ಕೂ ಹೆಚ್ಚು ಆಟಗಾರರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್‌ ತಂಡವನ್ನು ಪ್ರತಿನಿಧಿಸುತ್ತಿರುವ ಪಿಂಚ್ ಹಿಟ್ಟರ್ ಅಭಿನವ್ ಮನೋಹರ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಶಿವಮೊಗ್ಗ ಲಯನ್ಸ್ ಯಶಸ್ವಿಯಾಗಿದೆ. 

Scroll to load tweet…
Scroll to load tweet…
Scroll to load tweet…

ಇನ್ನುಳಿದಂತೆ ಪ್ರತಿಭಾನ್ವಿತ ಎಡಗೈ ಬ್ಯಾಟರ್‌ ದೇವದತ್ ಪಡಿಕ್ಕಲ್ ಅವರಿಗೆ 13 ಲಕ್ಷ ರುಪಾಯಿ ನೀಡಿ ಗುಲ್ಬರ್ಗಾ ಮೈಸ್ಟಿಕ್ಸ್‌ ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಅನುಭವಿ ಬ್ಯಾಟರ್ ಕರುಣ್ ನಾಯರ್ 6.8 ಲಕ್ಷ ರುಪಾಯಿಗೆ ಮೈಸೂರು ವಾರಿಯರ್ಸ್‌ ಪಾಲಾದರು. ಅನುಭವಿ ವೇಗಿ ಅಭಿಮನ್ಯು ಮಿಥುನ್‌ 5.20 ಕೋಟಿ ರುಪಾಯಿಗೆ ಬೆಂಗಳೂರು ಬ್ಲಾಸ್ಟರ್ಸ್‌ ತಂಡವನ್ನು ಕೂಡಿಕೊಂಡರು. ರಾಜ್ಯ ತಂಡದ ಸ್ಟಾರ್ ಆಲ್ರೌಂಡರ್ ಜಗದೀಶ ಸುಚಿತ್, 8.40 ಲಕ್ಷ ರುಪಾಯಿಗೆ ಮೈಸೂರು ವಾರಿಯರ್ಸ್‌ ತೆಕ್ಕೆಗೆ ಜಾರಿದರು. 

ಶ್ರೇಯಸ್ ಗೋಪಾಲ್ ಸೇರಿದಂತೆ ಕರ್ನಾಟಕದ 3 ಆಟಗಾರರು ಬೇರೆ ರಾಜ್ಯಗಳಿಗೆ ವಲಸೆ!

ಚೊಚ್ಚಲ ಆವೃತ್ತಿಯ ಮಹಾರಾಜ ಟ್ರೋಫಿ ಟೂರ್ನಿಯ ಆರೆಂಜ್ ಕ್ಯಾಪ್ ವಿಜೇತ ಮಯಾಂಕ್ ಅಗರ್‌ವಾಲ್‌ ಅವರಿಗೆ 14 ಲಕ್ಷ ರುಪಾಯಿ ನೀಡಿ ಬೆಂಗಳೂರು ಬ್ಲಾಸ್ಟರ್ಸ್‌ ತಂಡವು ಸೆಳೆದುಕೊಂಡಿತು. ಇನ್ನು ವೇಗಿ ರೋನಿತ್ ಮೋರೆ(4 ಲಕ್ಷ ರುಪಾಯಿ) ಮಂಗಳೂರು ಡ್ರ್ಯಾಗನ್ಸ್‌ ಪಾಲಾದರು. ಅನುಭವಿ ಎಡಗೈ ಸ್ಪಿನ್ನರ್ ಕೆಪಿ ಅಪ್ಪಣ್ಣ(4 ಲಕ್ಷ ರುಪಾಯಿ) ಗುಲ್ಬರ್ಗಾ ಮೈಸ್ಟಿಕ್ಸ್‌, ಸ್ಟಾರ್ ಆಲ್ರೌಂಡರ್ ಕೃಷ್ಣಪ್ಪ ಗೌತಮ್(6.6 ಲಕ್ಷ) ಮಂಗಳೂರು ಡ್ರ್ಯಾಗನ್ಸ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಮತ್ತೋರ್ವ ಸ್ಟಾರ್ ಆಲ್ರೌಂಡರ್ ಪ್ರವೀಣ್ ದುಬೆ(5.8) ಮತ್ತು ಕೆ.ಸಿ ಕಾರಿಯಪ್ಪ(7.20) ಹುಬ್ಬಳ್ಳಿ ಟೈಗರ್ಸ್‌ ಪಾಲಾದರು.

ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ತೋರಿದ ವೈಶಾಕ್ ವಿಜಯ್‌ಕುಮಾರ್ ಅವರನ್ನು ಗುಲ್ಬರ್ಗಾ ಮೈಸ್ಟಿಕ್ಸ್‌ ತಂಡವು 8.80 ಲಕ್ಷ ರುಪಾಯಿ ನೀಡಿ ಖರೀದಿಸಿತು. ಟೀಂ ಇಂಡಿಯಾ ವೇಗಿ ಪ್ರಸಿದ್ಧ್ ಕೃಷ್ಣ ಅವರಿಗೆ 7.40 ಲಕ್ಷ ರುಪಾಯಿ ನೀಡಿ ಮಂಗಳೂರು ಡ್ರ್ಯಾಗನ್ಸ್ ತಂಡವು ಖರೀದಿಸಿತು. ಇನ್ನು ಸ್ಟಾರ್ ಕ್ರಿಕೆಟಿಗ ಮನೀಶ್ ಪಾಂಡೆ ಅವರಿಗೆ 10.60 ಲಕ್ಷ ರುಪಾಯಿ ನೀಡಿ ಹುಬ್ಬಳ್ಳಿ ಟೈಗರ್ಸ್‌ ತಂಡವು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನುಳಿದಂತೆ ಶ್ರೇಯಸ್ ಗೋಪಾಲ್(7.80 ಲಕ್ಷ ರುಪಾಯಿ), ನಿಹಾಲ್ ಉಲ್ಲಾಳ(2.10), ವಿ. ಕೌಶಿಕ್‌(5.9), ರೋಹನ್ ಕದಂ(4.7) ಶರತ್ ಎಚ್ ಎಸ್(2.6) ಅವರು ಶಿವಮೊಗ್ಗ ಲಯನ್ಸ್ ತಂಡದ ಪಾಲಾಗಿದ್ದಾರೆ.

ಟೂರ್ನಿಯಲ್ಲಿ 6 ತಂಡಗಳಾದ ಗುಲ್ಬರ್ಗಾ ಮೈಸ್ಟಿಕ್ಸ್‌, ಬೆಂಗಳೂರು ಬ್ಲಾಸ್ಟರ್ಸ್‌, ಮೈಸೂರು ವಾರಿಯರ್ಸ್‌, ಹುಬ್ಬಳ್ಳಿ ಟೈಗರ್ಸ್‌, ಮಂಗಳೂರು ಡ್ರಾಗನ್ಸ್, ಶಿವಮೊಗ್ಗ ಲಯನ್ಸ್‌ ಪಾಲ್ಗೊಳ್ಳಲಿದ್ದು, ಪ್ರತಿ ತಂಡ ಕನಿಷ್ಠ 16, ಗರಿಷ್ಠ 18 ಆಟಗಾರರನ್ನು ಖರೀದಿಸಲು ಅವಕಾಶವಿದೆ. ಪ್ರತಿ ಫ್ರಾಂಚೈಸಿಯು ಆಟಗಾರರ ಖರೀದಿಗೆ 50 ಲಕ್ಷ ರುಪಾಯಿವರೆಗೆ ಬಳಸಬಹುದು. ಈ ಬಾರಿ ಟೂರ್ನಿ ಆಗಸ್ಟ್‌ 14ರಿಂದ 30 ವರೆಗೆ ನಡೆಯಲಿದ್ದು, ಎಲ್ಲಾ ಪಂದ್ಯಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.