ಸರಣಿ ಸೋಲು ತಪ್ಪಿಸಿಕೊಳ್ಳುತ್ತಾ ಟೀಂ ಇಂಡಿಯಾ; ಹಾರ್ದಿಕ್ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ.!
* ಇಂದು ವೆಸ್ಟ್ ಇಂಡೀಸ್ ವಿರುದ್ದ 3ನೇ ಟಿ20 ಪಂದ್ಯ
* ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಹಾರ್ದಿಕ್ ಪಾಂಡ್ಯ ಪಡೆ
* 2016ರ ಬಳಿಕ ಭಾರತ ಎದುರು ಟಿ20 ಸರಣಿ ಗೆಲ್ಲುವ ಕನಸು ಕಾಣುತ್ತಿದೆ ವಿಂಡೀಸ್
ಪ್ರಾವಿಡೆನ್ಸ್(ಆ.08): ಪದೇ ಪದೇ ಭಾರತೀಯ ಬ್ಯಾಟರ್‌ಗಳು ನಿರ್ಭೀತ ಆಡವಾಡಬೇಕು ಎಂದು ಮಾತನಾಡುವುದನ್ನು ಕೇಳಿದ್ದೇವೆ. ವಿಂಡೀಸ್ ವಿರುದ್ದ ಮಂಗಳವಾರ ನಡೆಯಲಿರುವ 3ನೇ ಟಿ20 ಪಂದ್ಯದಲ್ಲಿ ಸೋಲುವ ಭಯವಿಲ್ಲದೇ ಆಡಿದರಷ್ಟೇ, ಸರಣಿ ಸೋಲಿನ ಮುಖಭಂಗದಿಂದ ತಪ್ಪಿಸಿಕೊಳ್ಳಬಹುದು. 5 ಪಂದ್ಯಗಳ ಟಿ20 ಸರಣಿಯಲ್ಲಿಯಲ್ಲಿ ಮೊದಲೆರಡು ಪಂದ್ಯಗಳ ಅಂತ್ಯದ ವೇಳೆಗೆ 2-0 ಮುನ್ನಡೆಯಲ್ಲಿದ್ದು, 2016ರ ಬಳಿಕ ಭಾರತ ವಿರುದ್ದ ಮೊದಲ ಟಿ20 ಸರಣಿ ಗೆಲ್ಲಲು ತಹತಹಿಸುತ್ತಿದೆ. ಮತ್ತೊಂದೆಡೆ ಸರಣಿ ಸೋಲು ಎದುರಾದರೆ 'ಐಪಿಎಲ್ ಸ್ಟಾರ್ಸ್'ಗೆ ಭಾರೀ ಹಿನ್ನಡೆ ಉಂಟಾಗಲಿದೆ.
ನಿಧಾನಗತಿಯ ಪಿಚ್‌ಗಳಲ್ಲಿ ಭಾರತೀಯ ಬ್ಯಾಟರ್‌ಗಳು ರನ್ ಗಳಿಸಲು ತಿಣುಕಾಡುತ್ತಿದ್ದಾರೆ. ಟಿ20 ಕ್ರಿಕೆಟ್ ಮಾದರಿಯಲ್ಲಿ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟಕ್ಕಿಳಿಯಬೇಕು. ಪವರ್-ಪ್ಲೇನಲ್ಲೇ ಗಳಿಸುವ ರನ್‌ಗಳು ನಿರ್ಣಾಯಕವಾಗಲಿವೆ. ಆದರೆ ಈ ಸರಣಿಯ ಎರಡೂ ಪಂದ್ಯಗಳಲ್ಲಿ ಭಾರತದ ಅಗ್ರಕ್ರಮಾಂಕ ವೈಫಲ್ಯ ಕಂಡಿದೆ. ಶುಭ್‌ಮನ್ ಗಿಲ್, ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರಿಂದಲೂ ತಂಡಕ್ಕೆ ಅನುಕೂಲವಾಗುವಂತಹ ಪ್ರದರ್ಶನ ಮೂಡಿ ಬರುತ್ತಿಲ್ಲ.
'ಇವರೇ ಕಾರಣ': ವೆಸ್ಟ್ ಇಂಡೀಸ್ ಎದುರಿನ ಸೋಲಿಗೆ ಕಾರಣ ಬಿಚ್ಚಿಟ್ಟ ಹಾರ್ದಿಕ್ ಪಾಂಡ್ಯ..!
ಇದರಿಂದಾಗಿ ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಹಾಗೂ ಸಂಜು ಸ್ಯಾಮ್ಸನ್ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ತಿಲಕ್ ವರ್ಮಾ ಎರಡೂ ಪಂದ್ಯಗಳಲ್ಲಿ ಉತ್ತಮ ಆಟವಾಡಿದ್ದರೂ, ಹಾರ್ದಿಕ್ ಪಾಂಡ್ಯ ಹಾಗೂ ಸಂಜು ಸ್ಯಾಮ್ಸನ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತ ಆಟವಾಡಲು ಸಾಧ್ಯವಾಗಿಲ್ಲ. ಇನ್ನು 7ನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್‌ರನ್ನು ಆಡಿಸದೇ ಬೇರೆ ದಾರಿಯೇ ಇಲ್ಲ ಎನ್ನುವಂತಾಗಿದೆ. ಆಡುವ ಹನ್ನೊಂದರ ಬಳಗದಿಂದ ಹೊರತಾಗಿರುವ ಏಕೈಕ ಬ್ಯಾಟರ್ ಯಶಸ್ವಿ ಜೈಸ್ವಾಲ್. ಒಂದು ವೇಳೆ ಜೈಸ್ವಾಲ್ ಆಡಬೇಕು ಎಂದರೆ ಭಾರತ ಕೇವಲ 5 ಬೌಲಿಂಗ್ ಆಯ್ಕೆಯೊಂದಿಗೆ ಕಣಕ್ಕಿಳಿಯಬೇಕಾಗುತ್ತದೆ. ಒಬ್ಬ ಬೌಲರ್ ದುಬಾರಿಯಾದರೂ ಅರೆಕಾಲಿಕ ಸ್ಪಿನ್ನರ್‌ಗಳಾದ ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ಅಥವಾ ಯಶಸ್ವಿ ಜೈಸ್ವಾಲ್‌ರಿಂದ ಬೌಲ್ ಮಾಡಿಸಬೇಕಾದ ಪರಿಸ್ಥಿತಿ ಎದುರಾಗಬಹುದು.
ಇನ್ನು ಮತ್ತೊಂದೆಡೆ ಭಾರತೀಯ ಸ್ಪಿನ್ನರ್‌ಗಳನ್ನು ನಿಕೋಲಸ್ ಪೂರನ್ ಅಟ್ಟಾಡಿಸಿ ಚಚ್ಚುತ್ತಿದ್ದು, ಅವರನ್ನು ನಿಯಂತ್ರಿಸದೆ ಇದ್ದರೆ ಭಾರತಕ್ಕೆ ಮತ್ತೊಂದು ಸೋಲು ಎದುರಾದರೂ ಅಚ್ಚರಿಯಿಲ್ಲ. ಭಾರತಕ್ಕೆ ಹೋಲಿಸಿದರೆ ವಿಂಡೀಸ್‌ಗೆ ಬ್ಯಾಟಿಂಗ್‌ನಲ್ಲಿ ಹೆಚ್ಚಿಗೆ ಆಯ್ಕೆಗಳಿದ್ದು, ತಂಡದ ಬೌಲರ್‌ಗಳು ಗುಣಮಟ್ಟದ ಆಟವಾಡುತ್ತಿದ್ದಾರೆ. ಇದು ಭಾರತದ ತಲೆನೋವು ಹೆಚ್ಚಿಸಿದೆ.
ಹಾರ್ದಿಕ್ ಪಾಂಡ್ಯ ಹಾಗೂ ಆರ್ಶದೀಪ್ ಸಿಂಗ್ ಉತ್ತಮ ದಾಳಿ ಸಂಘಟಿಸುತ್ತಿದ್ದು, ಮುಕೇಶ್ ಕುಮಾರ್ ಹೆಚ್ಚು ರನ್ ಬಿಟ್ಟುಕೊಡುತ್ತಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಮುಕೇಶ್ ಕುಮಾರ್ ಬದಲಿಗೆ ಉಮ್ರಾನ್ ಮಲಿಕ್ ಅಥವಾ ಆವೇಶ್ ಖಾನ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ. ಮತ್ತೊಂದೆಡೆ ವಿಂಡೀಸ್‌ನ ಅಗ್ರಕ್ರಮಾಂಕವೂ ಜವಾಬ್ದಾರಿಯುತ ಆಟವಾಡುತ್ತಿಲ್ಲ. ಒಂದುವೇಳೆ ಪೂರನ್ ದೊಡ್ಡ ಇನಿಂಗ್ಸ್ ಆಡಲು ವಿಫಲರಾದರೆ, ವಿಂಡೀಸ್ ಕುಸಿಯುವುದರಲ್ಲಿ ಅನುಮಾನವಿಲ್ಲ.