ವಿಕೆಟ್ ಕೀಪರ್ ತಲೆಯ ಮೇಲೆ ಚೆಂಡನ್ನು ಬೌಂಡರಿಗಟ್ಟಿದ ಸೂರ್ಯಕುಮಾರ್ ಯಾದವ್..! ವಿಡಿಯೋ ವೈರಲ್
* ವೆಸ್ಟ್ ಇಂಡೀಸ್ ಎದುರು ಮೂರನೇ ಪಂದ್ಯ ಜಯಿಸಿದ ಟೀಂ ಇಂಡಿಯಾ
* ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಸೂರ್ಯಕುಮಾರ್ ಯಾದವ್
* ಸೂರ್ಯಕುಮಾರ್ ಯಾದವ್ ಬಾರಿಸಿದ ಆಕರ್ಷಕ ಬೌಂಡರಿ ವಿಡಿಯೋ ವೈರಲ್
ಬಾಸೆಟೆರೆ(ಆ.03): ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವು 2-1 ರ ಮುನ್ನಡೆ ಸಾಧಿಸಿದೆ. ರೋಹಿತ್ ಶರ್ಮಾ ಬೆನ್ನು ನೋವಿನ ಸೆಳೆತದಿಂದ ಬೇಗ ಪೆವಿಲಿಯನ್ನಿಗೆ ವಾಪಸ್ಸಾಗಿದ್ದರಿಂದ ಹೆಚ್ಚಿನ ಜವಾಬ್ದಾರಿ ಮತ್ತೋರ್ವ ಆರಂಭಿಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಹೆಗಲೇರಿತು. ಸೂರ್ಯಕುಮಾರ್ ಯಾದವ್ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಸೂರ್ಯಕುಮಾರ್ ಯಾದವ್ ಕೇವಲ 44 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ಸಿಕ್ಸರ್ ಸಹಿತ ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದರು. ಇದೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಬಾರಿಸಿದ ಆಕರ್ಷಕ ಬೌಂಡರಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಸೂರ್ಯಕುಮಾರ್ ಯಾದವ್ ಆರಂಭಿಕನಾಗಿ ಕಣಕ್ಕಿಳಿಯುವಾಗ ಸ್ಪಷ್ಟ ಸಿದ್ದತೆಯೊಂದಿಂಗೆ ಕಣಕ್ಕಿಳಿದಂತೆ ಕಂಡು ಬಂದಿತು. ಇನಿಂಗ್ಸ್‌ನ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟದ ಮುನ್ಸೂಚನೆ ನೀಡಿದ ಸೂರ್ಯ ತಮ್ಮ 360 ಡಿಗ್ರಿ ಮಾದರಿಯಲ್ಲಿ ಬ್ಯಾಟ್ ಬೀಸಿ ವಿಂಡೀಸ್ ಬೌಲರ್‌ಗಳು ತಬ್ಬಿಬ್ಬಾಗುವಂತೆ ಮಾಡಿದರು. ಎರಡನೇ ವಿಕೆಟ್‌ಗೆ ಶ್ರೇಯಸ್ ಅಯ್ಯರ್ ಜತೆಗೂಡಿ ಸೂರ್ಯಕುಮಾರ್ ಯಾದವ್ 86 ರನ್‌ಗಳ ಜತೆಯಾಟ ನಿಭಾಯಿಸಿದರು. ಈ ಮೂಲಕ ಟೀಂ ಇಂಡಿಯಾ 100 ರನ್‌ಗಳ ಗಡಿ ದಾಟಲು ನೆರವಾದರು.
ಸೂರ್ಯಕುಮಾರ್ ಯಾದವ್ ಕೇವಲ 26 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ಇನಿಂಗ್ಸ್‌ನ 9ನೇ ಓವರ್‌ನಲ್ಲಿ ಅಕೆಲ್ ಹುಸೈನ್ ಬೌಲಿಂಗ್‌ನಲ್ಲಿ ಸೂರ್ಯ ಡೀಪ್ ಸ್ಕ್ವೇರ್‌ನಲ್ಲಿ ಸಿಕ್ಸರ್ ಚಚ್ಚಿ ಫಿಫ್ಟಿ ಪೂರೈಸುವಲ್ಲಿ ಯಶಸ್ವಿಯಾದರು. ಇದಾದ ಮರು ಓವರ್‌ನಲ್ಲೇ ವಿಂಡೀಸ್ ವೇಗಿ ಅಲ್ಜೆರಿ ಜೋಸೆಫ್ ಎಸೆದ ಬೌನ್ಸರ್ ಅನ್ನು ಸೂರ್ಯಕುಮಾರ್ ಯಾದವ್ ಸೊಗಸಾಗಿ ವಿಕೆಟ್ ಕೀಪರ್ ತಲೆ ಮೇಲೆ ಚೆಂಡನ್ನು ಬೌಂಡರಿಗಟ್ಟುವಲ್ಲಿ ಯಶಸ್ವಿಯಾದರು. ಇದು ಎಂತಹ ಅದ್ಭುತ ಆಟ ಸೂರ್ಯಕುಮಾರ್ ಯಾದವ್ ಅವರಿಂದ. ಕಣ್ಣಳತೆಯ ಆಧಾರದಲ್ಲಿ ತಮ್ಮ ಕೌಶಲ್ಯವನ್ನು ಬಳಸಿಕೊಂಡು ಸೂರ್ಯ ಚೆಂಡನ್ನು ಬೌಂಡರಿಗಟ್ಟಿದರು ಎಂದು ವೀಕ್ಷಕವಿವರಣೆಗಾರ ಈ ಶಾಟ್ ಅನ್ನು ಬಣ್ಣಿಸಿದರು.
ಆರಂಭಿಕನಾಗಿ ಕಣಕ್ಕಿಳಿದಿದ್ದ ಸೂರ್ಯಕುಮಾರ್ ಯಾದವ್, 15ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಹೀಗಿದ್ದೂ ಟೀಂ ಇಂಡಿಯಾ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಸೂರ್ಯ ವಿಕೆಟ್ ಒಪ್ಪಿಸುವ ವೇಳೆ ಟೀಂ ಇಂಡಿಯಾ ಗೆಲ್ಲಲು 33 ಎಸೆತಗಳಲ್ಲಿ 30 ರನ್‌ಗಳ ಅಗತ್ಯವಿತ್ತು. ಕೊನೆಯಲ್ಲಿ ರಿಷಭ್ ಪಂತ್ ಕೇವಲ 26 ಎಸೆತಗಳಲ್ಲಿ ಅಜೇಯ 33 ರನ್ ಬಾರಿಸುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.
WI vs Ind: ವಿಂಡೀಸ್ ವಿರುದ್ಧದ 3ನೇ ಪಂದ್ಯ ಗೆದ್ದ ಭಾರತ, ಸರಣಿಯಲ್ಲಿ ಮುನ್ನಡೆ ಸಾಧಿಸಿದ ಟೀಂ ಇಂಡಿಯಾ
ಪಂದ್ಯ ಮುಕ್ತಾದ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ ಆರಂಭದಲ್ಲೇ ಪೆವಿಲಿಯನ್‌ಗೆ ವಾಪಾಸ್ಸಾಗಿದ್ದರಿಂದ ಯಾರಾದರೊಬ್ಬರು 17 ಓವರ್‌ವರೆಗೂ ಕ್ರೀಸ್‌ನಲ್ಲಿ ನೆಲೆಯೂರುವ ಅಗತ್ಯವಿತ್ತು. ನಾನು ಇನ್ನೂ ಚೆನ್ನಾಗಿ ಆಡಬಹುದಿತ್ತು ಎಂದು ಮುಂಬೈ ಮೂಲದ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.
ನಾನು ಈ ರೀತಿಯ ಶಾಟ್‌ಗಳನ್ನು ಆಡುವುದಕ್ಕೆ ಇಷ್ಟಪಡುತ್ತೇನೆ. ಯಾಕೆಂದರೆ ಐಪಿಎಲ್‌ನಲ್ಲಿಯೂ ನಾನು ಈ ರೀತಿ ಆಡಿದ್ದೇನೆ ಹಾಗೂ ನನ್ನ ಆಟವನ್ನು ನಾನು ಎಂಜಾಯ್ ಮಾಡುತ್ತೇನೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.