ವಿಂಡೀಸ್ ಎದುರು ಏಕದಿನ ಸರಣಿ ಕ್ಲೀನ್‌ಸ್ವೀಪ್ ಮಾಡಿದ ಟೀಂ ಇಂಡಿಯಾಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಭಾರೀ ಅಂತರದ ಗೆಲುವುಅಜೇಯ 98 ರನ್ ಬಾರಿಸಿ ಮಿಂಚಿದ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್
ಪೋರ್ಟ್ ಆಫ್ ಸ್ಪೇನ್(ಜು.28): ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮತ್ತೊಮ್ಮೆ ಪ್ರಾಬಲ್ಯ ಮೆರೆದ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ 119 ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಂ ಇಂಡಿಯಾ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿದೆ. ಭಾರತ ನೀಡಿದ್ದ 257 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ಕೇವಲ 137 ರನ್ ಗಳಿಸಲಷ್ಟೇ ಶಕ್ತವಾಯಿತು.
ಇಲ್ಲಿನ ಕ್ವೀನ್ಸ್ ಪಾರ್ಕ್ ಮೈದಾನದಲ್ಲಿ ಟಾಸ್ ಗೆದ್ದ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಭರ್ಜರಿ ಆರಂಭವನ್ನೇ ಪಡೆಯಿತು. ಪಂದ್ಯಕ್ಕೆ ಎರಡೆರಡು ಬಾರಿ ಮಳೆ ಅಡ್ಡಿ ಪಡಿಸಿದ್ದರಿಂದ ಓವರ್‌ಗಳನ್ನು ಕಡಿತಗೊಳಿಸಲಾಯಿತು. ಪರಿಣಾಮ ಭಾರತ ಕ್ರಿಕೆಟ್ ತಂಡವು 36 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 225 ರನ್ ಬಾರಿಸಿತ್ತು. ಇದಾದ ಬಳಿಕ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು 35 ಓವರ್‌ಗಳಲ್ಲಿ 257 ರನ್‌ಗಳ ಗುರಿ ನೀಡಲಾಯಿತು.
ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ಖಾತೆ ತೆರೆಯುವ ಮುನ್ನವೇ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿ ಹೋಯಿತು. ಆರಂಭದಲ್ಲೇ ವೇಗಿ ಮೊಹಮ್ಮದ್ ಸಿರಾಜ್, ಕೈಲ್ ಮೇಯರ್ಸ್ ಹಾಗೂ ಸಮರ್ಥ್ ಬ್ರೂಕ್ಸ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಮೂರನೇ ವಿಕೆಟ್‌ಗೆ ಶಾಯ್ ಹೋಪ್ ಹಾಗೂ ಬ್ರೆಂಡನ್ ಕಿಂಗ್ 47 ರನ್‌ಗಳ ಜತೆಯಾಟವಾಡುವ ಮೂಲಕ ಆಸರೆಯಾದರು. ಹೋಪ್ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬ್ರೆಂಡನ್ ಕಿಂಗ್ ಹಾಗೂ ನಾಯಕ ನಿಕೋಲಸ್ ಪೂರನ್ ತಲಾ 42 ರನ್ ಬಾರಿಸುವ ಮೂಲಕ ಭಾರತಕ್ಕೆ ತಿರುಗೇಟು ನೀಡುವ ಯತ್ನ ನಡೆಸಿದರು. ಆದರೆ ಈ ಇಬ್ಬರು ಆಟಗಾರರು ವಿಕೆಟ್ ಒಪ್ಪಿಸುತ್ತಿದ್ದಂತೆಯೇ ವೆಸ್ಟ್ ಇಂಡೀಸ್ ತಂಡವು ನಾಟಕೀಯ ಕುಸಿತ ಕಂಡಿತು.
ವಿಂಡೀಸ್ ದಿಢೀರ್ ಕುಸಿತ: 74 ರನ್‌ಗಳಿಗೆ ಕೇವಲ 3 ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ತಂಡವು, ಬ್ರೆಂಡನ್ ಕಿಂಗ್ ವಿಕೆಟ್ ಪತನವಾಗುತ್ತಿದ್ದಂತೆಯೇ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಯುಜುವೇಂದ್ರ ಚಹಲ್ ಹಾಗೂ ಶಾರ್ದೂಲ್ ಠಾಕೂರ್ ದಾಳಿಗೆ ತತ್ತರಿಸಿದ ವಿಂಡೀಸ್ ತಂಡವು ಕೇವಲ 136 ರನ್‌ಗಳಿಗೆ ಸರ್ವಪತನ ಕಂಡು ಹೀನಾಯ ಸೋಲು ಅನುಭವಿಸಿತು.
WI vs IND ವೆಸ್ಟ್ ಇಂಡೀಸ್ ಭಾರತ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿ, ತಾತ್ಕಾಲಿಕ ಸ್ಥಗಿತ!
ಭಾರತ ಪರ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ 17 ರನ್ ನೀಡಿ 4 ವಿಕೆಟ್ ಪಡೆದರೇ, ಶಾರ್ದೂಲ್ ಠಾಕೂರ್ ಕೂಡಾ 17 ರನ್ ನೀಡಿ 2 ವಿಕೆಟ್ ಉರುಳಿಸಿದರು. ಇನ್ನು ಮೊಹಮ್ಮದ್ ಸಿರಾಜ್ 14 ರನ್ ನೀಡಿ 2 ಮತ್ತು ಅಕ್ಷರ್ ಪಟೇಲ್ ಹಾಗೂ ಪ್ರಸಿದ್ದ್ ಕೃಷ್ಣ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ಟೀಂ ಇಂಡಿಯಾಗೆ ನಾಯಕ ಶಿಖರ್ ಧವನ್ ಹಾಗೂ ಶುಭ್‌ಮನ್ ಗಿಲ್ ಭರ್ಜರಿ ಆರಂಭವನ್ನೇ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ 22.5 ಓವರ್‌ಗಳಲ್ಲಿ 113 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರಬುನಾದಿ ಹಾಕಿ ಕೊಟ್ಟರು. ನಾಯಕ ಶಿಖರ್ ಧವನ್ 74 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 58 ರನ್ ಬಾರಿಸಿ ಹೇಡನ್ ವಾಲ್ಷ್‌ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಶುಭ್‌ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಎರಡನೇ ವಿಕೆಟ್‌ಗೆ 88 ರನ್‌ಗಳ ಜತೆಯಾಟ ನಿಭಾಯಿಸಿದರು. ಶುಭ್‌ಮನ್ ಗಿಲ್ 98 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 98 ರನ್ ಬಾರಿಸಿದರು. ಇನ್ನು ಶ್ರೇಯಸ್ ಅಯ್ಯರ್ 44 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೇ, ಸೂರ್ಯಕುಮಾರ್ ಯಾದವ್ ಕೇವಲ 8 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಮತ್ತೊಮ್ಮೆ ನಿರಾಸೆ ಅನುಭವಿಸಿದರು. ಸಂಜು ಸ್ಯಾಮ್ಸನ್ ಅಜೇಯ 6 ರನ್ ಗಳಿಸಿದರು.
