ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು; ಟಿ20 ಸರಣಿ ಶ್ರೀಲಂಕಾ ಪಾಲು!
- 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾಗೆ ಮುಖಭಂಗ
- ಶ್ರೀಲಂಕಾಗೆ 7 ವಿಕೆಟ್ ಭರ್ಜರಿ ಗೆಲುವು
- 2-1 ಅಂತರದಲ್ಲಿ ಟಿ20 ಸರಣಿ ಗೆದ್ದ ಶ್ರೀಲಂಕಾ
ಕೊಲೊಂಬೊ(ಜು.29): ಟೀಂ ಇಂಡಿಯಾ ವಿರುದ್ಧದ ಏಕದಿನ ಸರಣಿ ಸೋಲಿಗೆ ಶ್ರೀಲಂಕಾ ಭರ್ಜರಿ ತಿರುಗೇಟು ನೀಡಿದೆ. 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಶ್ರೀಲಂಕಾ 7 ವಿಕೆಟ್ ಭರ್ಜರಿ ಗೆಲುವು ಕಂಡಿದೆ. ಈ ಮೂಲಕ ಟಿ20 ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿದೆ.
ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಕೇವಲ 81 ರನ್‌ಗಳಿಗೆ ಕಟ್ಟಿಹಾಕಿದ ಶ್ರೀಲಂಕಾ, ಬ್ಯಾಟಿಂಗ್‌ನಲ್ಲಿ ದಿಟ್ಟ ಪ್ರದರ್ಶನ ನೀಡಿತು. 82 ರನ್ ಸುಲಭ ಗುರಿ ಪಡದೆ ಶ್ರೀಲಂಕಾ ನಿರೀಕ್ಷಿತ ಆರಂಭ ಪಡೆಯಿದಿದ್ದರೂ ತಂಡಕ್ಕೆ ಯಾವುದೇ ಆತಂಕ ಎದುರಾಗಲಿಲ್ಲ. ಆವಿಷ್ಕಾ ಫರ್ನಾಂಡೋ 12 ರನ್ ಸಿಡಿಸಿ ಔಟಾದರು.
ಮಿನೋದ್ ಬಾನುಕಾ 18 ರನ್ ಕಾಣಿಕೆ ನೀಡಿದರು. ಇತ್ತ ಸದೀರಾ ಸಮರವಿಕ್ರಮ 6 ರನ್ ಸಿಡಿಸಿ ಔಟಾದರು. 56ರನ್‌ಗೆ ಲಂಕಾ 3 ವಿಕೆಟ್ ಕಳೆದುಕೊಂಡಿತ್ತು. ಆದರೆ ಗುರಿ ಸನಿಹದಲ್ಲೇ ಇದ್ದ ಕಾರಣ ಯಾವುದೇ ಒತ್ತಡಕ್ಕೆ ಒಳಗಾಗಲಿಲ್ಲ. ಧನಂಜಯ ಡಿಸಿಲ್ವಾ ಅಜೇಯ 23 ರನ್ ಹಾಗೂ ವಾವಿಂಡು ಹಸರಂಗ ಅಜೇಯ 14 ರನ್ ಸಿಡಿಸಿದರು.
ಇದರೊಂದಿಗೆ ಶ್ರೀಲಂಕಾ 14.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. 7 ಭರ್ಜರಿ ಗೆಲವು ಕಂಡ ಶ್ರೀಲಂಕಾ ಟಿ20 ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಂಡಿತು.