* ಭಾರತ-ಲಂಕಾ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಗುವಾಹಟಿ ಆತಿಥ್ಯ* ಟಾಸ್ ಗೆದ್ದ ಶ್ರೀಲಂಕಾ ಮೊದಲು ಬೌಲಿಂಗ್ ಆಯ್ಕೆ* ಸರಣಿಯಲ್ಲಿ ಶುಭಾರಂಭ ಮಾಡಲು ಎದುರು ನೋಡುತ್ತಿರುವ ಉಭಯ ತಂಡಗಳು
ಗುವಾಹಟಿ(ಜ.10): ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಶುನ್ ಶಾನಕ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಭಾರತದಲ್ಲಿ ಇನ್ನು ಕೇವಲ 10 ತಿಂಗಳಿನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಸಿದ್ದತೆ ಆರಂಭಿಸಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇದೀಗ ಗೆಲುವಿನೊಂದಿಗೆ ಸರಣಿಯಲ್ಲಿ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.
ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಇಲ್ಲಿನ ಬರ್ಸಾಪರ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ಭಾರತ ತಂಡದಲ್ಲಿ ಕೆ ಎಲ್ ರಾಹುಲ್, ವಿಕೆಟ್ ಕೀಪರ್ ಬ್ಯಾಟರ್ ರೂಪದಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಇನ್ನುಳಿದಂತೆ ನಾಲ್ವರು ಬೌಲರ್, ಐವರು ಬ್ಯಾಟರ್ ಹಾಗೂ ಇಬ್ಬರು ಆಲ್ರೌಂಡರ್‌ಗಳೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿದಿದೆ.
ಗಾಯದ ಸಮಸ್ಯೆಯಿಂದಾಗಿ ವರ್ಷಕ್ಕೂ ಹೆಚ್ಚು ಸಮಯ ಬೌಲಿಂಗ್ ಮಾಡದ ಹಾರ್ದಿಕ್ ಪಾಂಡ್ಯ, ಇತ್ತೀಚಿನ ಕೆಲ ಟಿ20 ಸರಣಿಗಳಲ್ಲಿ ಬೌಲಿಂಗ್ ನಡೆಸುತ್ತಿದ್ದಾರೆ. ಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಆರಂಭಿಕ ಬೌಲರ್ ಆಗಿ ಕಾಣಿಸಿಕೊಂಡಿದ್ದ ಹಾರ್ದಿಕ್, ಏಕದಿನದಲ್ಲಿ 10 ಓವರ್ ಬೌಲ್ ಮಾಡುವಷ್ಟು ಫಿಟ್ನೆಸ್ ಕಂಡುಕೊಂಡಿದ್ದಾರಾ ಎನ್ನುವ ಕುತೂಹಲವಿದೆ. ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಜವಾಬ್ದಾರಿಯ ಜತೆಗೆ ಉಪನಾಯಕನ ಪಾತ್ರವನ್ನು ನಿಭಾಯಿಸಬೇಕಿದೆ. ಆಲ್ರೌಂಡರ್ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯಗೆ ಅಕ್ಷರ್ ಪಟೇಲ್ ಸಾಥ್ ನೀಡಲಿದ್ದಾರೆ
ಶಮಿ, ಸಿರಾಜ್ ಮೇಲೆ ನಿರೀಕ್ಷೆ: ಹಿರಿಯ ಬೌಲರ್ ಮೊಹಮದ್ ಶಮಿ ತಂಡಕ್ಕೆ ಮರಳಿದ್ದು, ಬೌಲಿಂಗ್ ಪಡೆ ಮುನ್ನಡೆಸಲಿದ್ದಾರೆ. ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮದ್ ಸಿರಾಜ್‌ಗೆ ಮೇಲೆ ಹೆಚ್ಚಿನ ಜವಾಬ್ದಾರಿ ಇರಲಿದೆ. ಶಮಿ ಹಾಗೂ ಸಿರಾಜ್ ಜತೆಗೆ ವೇಗದ ಬೌಲಿಂಗ್ ವಿಭಾಗದಲ್ಲಿ ಉಮ್ರಾನ್ ಮಲಿಕ್, ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಚಹಲ್, ಗುವಾಹಟಿಯಲ್ಲಿ ಮಹತ್ತರ ಪಾತ್ರವನ್ನು ನಿಭಾಯಿಸಬೇಕಿದೆ.
ಮಿಷನ್ 2023: ಇಂದಿನಿಂದ ಭಾರತ ತಯಾರಿ, ಇಂಡೋ-ಲಂಕಾ ಮೊದಲ ಒನ್‌ಡೇ ಕದನ
ಲಂಕಾಕ್ಕೆ ಗೆಲ್ಲುವ ವಿಶ್ವಾಸ: ಟಿ20 ಸರಣಿಯಲ್ಲಿ ಹೋರಾಟ ಪ್ರದರ್ಶಿಸಿ ಭಾರತೀಯರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಶ್ರೀಲಂಕಾ ಏಕದಿನ ಸರಣಿಯಲ್ಲೂ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ಆದರೆ 50 ಓವರ್ ಕ್ರಿಕೆಟಲ್ಲಿ ತಂಡದ ಇತ್ತೀಚಿನ ದಾಖಲೆ ಹೇಳಿಕೊಳ್ಳುವಂತಿಲ್ಲ. ದಸುನ್ ಶಾನಕ ಪಡೆ ಅಸಾಧಾರಣ ಪ್ರದರ್ಶನ ತೋರಿದರಷ್ಟೇ ಗೆಲುವು ಒಲಿಯಲಿದೆ.
ವಿಶ್ವಕಪ್‌ಗೆ ಸರ್ವ ಸನ್ನದ್ಧಗೊಳ್ಳಲು ಭಾರತ ಮುಂದಿನ 10 ತಿಂಗಳಲ್ಲಿ 15 ಏಕದಿನ (ಏಷ್ಯಾಕಪ್ ಪಂದ್ಯಗಳನ್ನು ಹೊರತುಪಡಿಸಿ) ಪಂದ್ಯಗಳನ್ನಾಡಲಿದೆ. ಗೆಲುವಿನೊಂದಿಗೆ 2023ರ ಏಕದಿನ ಅಭಿಯಾನ ಆರಂಭಿಸಲು ಟೀಂ ಇಂಡಿಯಾ ಕಾತರಿಸುತ್ತಿದೆ.
ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಯುಜುವೇಂದ್ರ ಚಹಲ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್.
ಲಂಕಾ: ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಪಥುಮ್ ನಿಸ್ಸಾಂಕ, ಆವಿಷ್ಕಾ ಫರ್ನಾಂಡೋ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕ, ದಸುನ್ ಶಾನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣರತ್ನೆ, ದುನೀತ್ ವೆಲಲಗೆ, ಕುಸಾಲ್ ರಜಿತ, ದಿಲ್ಯಾನ್ ಮಧುಶಂಕ .
ಪಂದ್ಯ: ಮಧ್ಯಾಹ್ನ 1.30ರಿಂದ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1
ಪಂದ್ಯ: ಮಧ್ಯಾಹ್ನ 1.30ರಿಂದ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1
