* ಭಾರತ ಹಾಗೂ ಶ್ರೀಲಂಕಾ ಎರಡನೇ ಟಿ20 ಪಂದ್ಯಕ್ಕೆ ಕ್ಷಣಗಣನೆ* ಎರಡನೇ ಪಂದ್ಯಕ್ಕೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಮೈದಾನ ಆತಿಥ್ಯ* 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ

ಪುಣೆ(ಜ.05): 2023ರಲ್ಲಿ ಮೊದಲ ಟಿ20 ಸರಣಿ ಗೆಲುವಿನ ನಿರೀಕ್ಷೆಯಲ್ಲಿರುವ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಟೀಂ ಇಂಡಿಯಾ ಗುರುವಾರ ಶ್ರೀಲಂಕಾ ವಿರುದ್ಧ 2ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಪಂದ್ಯಕ್ಕೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಹಾಲಿ ನಾಯಕ ರೋಹಿತ್‌ ಶರ್ಮಾ, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್‌ ಸೇರಿದಂತೆ ಪ್ರಮುಖ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಸರಣಿಗೆ ಕಾಲಿಟ್ಟಿರುವ ಭಾರತ ಆರಂಭಿಕ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿತ್ತು. ಒತ್ತಡದ ಕ್ಷಣಗಳನ್ನು ಮೆಟ್ಟಿನಿಂತು ಪಂದ್ಯವನ್ನು ತನ್ನದಾಗಿಸಿಕೊಳ್ಳುವಲ್ಲಿ ಯುವ ಕ್ರಿಕೆಟಿಗರು ಯಶಸ್ವಿಯಾಗಿದ್ದರು. ಭಾರತದ ಮುಂದಿನ ಟಿ20 ನಾಯಕ ಎಂದು ಗುರುತಿಸಿಕೊಂಡಿರುವ ಹಾರ್ದಿಕ್‌ ಪಾಂಡ್ಯ ಆಲ್ರೌಂಡರ್‌ ಪ್ರದರ್ಶನದ ಜೊತೆಗೆ ನಾಯಕತ್ವದ ಒತ್ತಡ ನಿಭಾಯಿಸುವಲ್ಲಿ ಯಶ ಕಂಡಿದ್ದರು. ಆದರೆ ತಂಡದ ಆರಂಭಿಕ ಬ್ಯಾಟರ್‌ಗಳು ಕೈಕೊಟ್ಟಿದ್ದು, ಈ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ನೀಡಬೇಕಾದ ಅಗತ್ಯವಿದೆ.

ಇಶಾನ್‌ ಕಿಶನ್‌ಗೆ ಶುಭ್‌ಮನ್‌ ಗಿಲ್‌ ಉತ್ತಮ ಬೆಂಬಲ ನೀಡಿ ದೊಡ್ಡ ಮೊತ್ತ ಗಳಿಸುವ ನಿರೀಕ್ಷೆಯಲ್ಲಿದ್ದಾರೆ ಆರಂಭಿಕ ಪಂದ್ಯದಲ್ಲಿ ವಿಫಲರಾದರೂ ವಿಶ್ವ ನಂ.1 ಬ್ಯಾಟರ್‌ ಸೂರ‍್ಯಕುಮಾರ್‌ ಮೇಲೆ ತಂಡಕ್ಕೆ ಹೆಚ್ಚಿನ ಭರವಸೆ ಇದೆ. ದೀಪಕ್‌ ಹೂಡಾ, ಅಕ್ಷರ್‌ ಪಟೇಲ್‌ ಮತ್ತೊಮ್ಮೆ ಅಬ್ಬರಿಸಲು ಕಾಯುತ್ತಿದ್ದಾರೆ.

ಟಿ20 ಸರಣಿಯಿಂದ ಹೊರಬಿದ್ದ ಸಂಜು ಸ್ಯಾಮ್ಸನ್‌: ಮೊದಲ ಟಿ20 ಪಂದ್ಯದ ವೇಳೆ ಮಂಡಿಯ ಗಾಯಕ್ಕೆ ತುತ್ತಾಗಿರುವ ವಿಕೆಟ್‌ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್‌, ಇನ್ನುಳಿದ ಎರಡು ಟಿ20 ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಇದೀಗ ಸಂಜು ಸ್ಯಾಮ್ಸನ್ ಬದಲಿಗೆ, ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಮ್ಯಾಚ್‌ ಫಿನಿಶಿಂಗ್‌ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದ ಜಿತೇಶ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

IND vs SL ಎರಡನೇ ಟಿ20 ಪಂದ್ಯಕ್ಕೂ ಮುನ್ನ ಭಾರತಕ್ಕೆ ಶಾಕ್, ಸಂಜು ಸ್ಯಾಮ್ಸನ್ ಔಟ್!

ಬೌಲಿಂಗ್‌ ವಿಭಾಗ ಅನುಭವಿಗಳ ಕೊರತೆ ಎದುರಿಸುತ್ತಿದ್ದರೂ ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಪಾದಾರ್ಪಣಾ ಪಂದ್ಯದಲ್ಲೇ ಮಿಂಚಿದ್ದ ಶಿವಂ ಮಾವಿ, ಪ್ರಚಂಡ ವೇಗಿ ಉಮ್ರಾನ್‌ ಮಲಿಕ್‌ ಮತ್ತೊಮ್ಮೆ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಎದುರು ನೋಡುತ್ತಿದ್ದಾರೆ. ಅಶ್‌ರ್‍ದೀಪ್‌ ಸಿಂಗ್‌ ತಂಡಕ್ಕೆ ಮರಳಿದರೆ ಹರ್ಷಲ್‌ ಪಟೇಲ್‌ ಸ್ಥಾನ ಕಳೆದುಕೊಳ್ಳಬಹುದು. ಮುಖೇಶ್‌ ಕುಮಾರ್‌ ಕೂಡಾ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ ಹಾಲಿ ಏಷ್ಯಾಕಪ್ ಚಾಂಪಿಯನ್‌ ಶ್ರೀಲಂಕಾ ಈ ಪಂದ್ಯದ ಗೆಲುವಿನ ಮೂಲಕ ಸರಣಿ ಸಮಬಲಗೊಳಿಸುವ ತವಕದಲ್ಲಿದೆ.

ಸಂಭವನೀಯರ ಪಟ್ಟಿ

ಭಾರತ: ಇಶಾನ್‌ ಕಿಶನ್‌, ಶುಭ್‌ಮನ್‌ ಗಿಲ್‌, ಸೂರ್ಯಕುಮಾರ್‌ ಯಾದವ್, ಸಂಜು ಸ್ಯಾಮ್ಸನ್‌, ಹಾರ್ದಿಕ್‌ ಪಾಂಡ್ಯ (ನಾಯಕ), ದೀಪಕ್ ಹೂಡಾ, ಅಕ್ಷರ್‌ ಪಟೇಲ್, ಹರ್ಷಲ್‌ ಪಟೇಲ್/ಅಶ್‌ರ್‍ದೀಪ್‌ ಸಿಂಗ್, ಉಮ್ರಾನ್‌ ಮಲಿಕ್, ಯುಜುವೇಂದ್ರ ಚಹಲ್‌, ಶಿವಂ ಮಾವಿ.

ಲಂಕಾ: ಪಥುಮ್ ನಿಸ್ಸಾಂಕ, ಕುಸಾಲ್‌ ಮೆಂಡಿಸ್‌, ಧನಂಜಯ ಡಿ ಸಿಲ್ವಾ, ಚರಿತ್‌ ಅಸಲಂಕ, ಭನುಕ ರಾಜಪಕ್ಸೆ, ದಶುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣರತ್ನೆ, ಮಹೀಶ್ ತೀಕ್ಷಣ, ಕಶುನ್ ರಜಿತಾ, ದಿಲ್ಯ್ಷಾನ್‌ ಮಧುಶಂಕ,

ಪಂದ್ಯ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌