ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇಂದಿನಿಂದ ಆರಂಭವಾಗಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಪಲ್ಲೆಕೆಲೆ: ಭಾರತದ ಟಿ20ಗೆ ಖಾಯಂ ನಾಯಕನಾಗಿ ಆಯ್ಕೆಯಾಗಿರುವ ಸೂರ್ಯಕುಮಾರ್‌ ಯಾದವ್‌ ಹಾಗೂ ಮೊದಲ ಬಾರಿ ಮುಖ್ಯ ಕೋಚ್‌ ಆಗಿ ಕಾರ್ಯನಿರ್ವಹಿಸಲಿರುವ ಗೌತಮ್‌ ಗಂಭೀರ್‌ಗೆ ಶನಿವಾರದಿಂದ ಅಗ್ನಿಪರೀಕ್ಷೆ ಎದುರಾಗಲಿದೆ. ಭಾರತ ತಂಡದ ಶ್ರೀಲಂಕಾ ಪ್ರವಾಸ ಶನಿವಾರ ಆರಂಭಗೊಳ್ಳಲಿದ್ದು, ಉಭಯ ತಂಡಗಳ ನಡುವಿನ ಮೊದಲ ಟಿ20 ಪಂದ್ಯ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತದ ಮಾಜಿ ಆಟಗಾರ ಗಂಭೀರ್‌ ಐಪಿಎಲ್‌ನ ಕೋಲ್ಕತಾ ತಂಡಕ್ಕೆ ನಾಯಕನಾಗಿ 2 ಬಾರಿ, ಮೆಂಟರ್ ಆಗಿ 1 ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಅವರು ರಾಹುಲ್‌ ದ್ರಾವಿಡ್‌ರಿಂದ ತೆರವಾಗಿರುವ ಭಾರತದ ಮುಖ್ಯ ಕೋಚ್‌ ಸ್ಥಾನವನ್ನು ತುಂಬಲಿದ್ದಾರೆ. 2026ರ ಟಿ20 ವಿಶ್ವಕಪ್‌ಗೆ ಸಮರ್ಥ ತಂಡ ಕಟ್ಟುವ ಜವಾಬ್ದಾರಿ ಗಂಭೀರ್‌ ಮೇಲಿದ್ದು, ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎಂಬ ಕುತೂಹಲವಿದೆ.

ಮೆಗಾ ಹರಾಜಿಗೂ ಮುನ್ನ 6 ಆಟಗಾರರ ರೀಟೈನ್‌ಗೆ ಫ್ರಾಂಚೈಸಿಗಳ ಮನವಿ: ಆರ್‌ಸಿಬಿಯಲ್ಲೇ ಉಳಿತಾರಾ ಮ್ಯಾಕ್ಸಿ, ಫಾಫ್..?

ಇನ್ನು, ನಾಯಕತ್ವ ರೇಸ್‌ನಲ್ಲಿ ಹಾರ್ದಿಕ್‌ರನ್ನು ಹಿಂದಿಕ್ಕಿರುವ ಸೂರ್ಯಕುಮಾರ್‌ಗೂ ಪ್ರಮುಖ ಸವಾಲು ಎದುರಾಗಲಿದೆ. ಕಳೆದ ವರ್ಷ 7 ಟಿ20 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದರೂ ಮೊದಲ ಬಾರಿ ಪೂರ್ಣ ಪ್ರಮಾಣದ ನಾಯಕನಾಗಿ ಸೂರ್ಯ ಕಾರ್ಯನಿರ್ವಹಿಸಲಿದ್ದಾರೆ. ಉಪನಾಯಕನಾಗಿ ಆಯ್ಕೆಯಾಗಿರುವ ಶುಭ್‌ಮನ್‌ ಗಿಲ್‌ ತಮ್ಮ ಮೇಲೆ ಆಯ್ಕೆಸಮಿತಿ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕಿದೆ. ಯಶಸ್ವಿ ಜೈಸ್ವಾಲ್‌, ರಿಂಕು ಸಿಂಗ್‌, ರಿಯಾನ್‌ ಪರಾಗ್‌ ಕೂಡಾ ಸ್ಫೋಟಕ ಆಟದ ಮೂಲಕ ತಂಡದಲ್ಲಿ ಸ್ಥಾನ ಗಟ್ಟಿಗೊಳಿಸುವ ಕಾತರದಲ್ಲಿದ್ದಾರೆ.

ಮಹಿಳಾ ಏಷ್ಯಾಕಪ್: ಬಾಂಗ್ಲಾವನ್ನು ಅನಾಯಾಸವಾಗಿ ಮಣಿಸಿ ಫೈನಲ್‌ ಪ್ರವೇಶಿಸಿದ ಭಾರತ

ಮತ್ತೊಂದೆಡೆ ಲಂಕಾ ಚರಿತ್‌ ಅಸಲಂಕ ನಾಯಕತ್ವದಲ್ಲಿ ಕಣಕ್ಕಿಳಿಯಲಿದ್ದು, ಹಾಲಿ ಚಾಂಪಿಯನ್ನರನ್ನು ತನ್ನ ತವರಿನಲ್ಲೇ ಸೋಲಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸುವ ನಿರೀಕ್ಷೆಯಲ್ಲಿದೆ.

ಪಂದ್ಯ ಆರಂಭ: ಸಂಜೆ 7 ಗಂಟೆಗೆ

ನೇರಪ್ರಸಾರ: ಸೋನಿ ಸ್ಪೋರ್ಟ್ಸ್‌ ಟೆನ್‌(ಟಿವಿ), ಸೋನಿ ಲೈವ್‌