Asianet Suvarna News Asianet Suvarna News

ಇಂದು ಭಾರತ-ಲಂಕಾ ಮೊದಲ ಟಿ20; ಈ ಇಬ್ಬರ ಮೇಲೆ ಎಲ್ಲರ ಚಿತ್ತ

ಭಾರತ-ಶ್ರೀಲಂಕಾ ನಡುವೆ ಮೊದಲ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಗಾಯದಿಂದ ಕಮ್‌ಬ್ಯಾಕ್‌ ಮಾಡಿರುವ ಧವನ್, ಬುಮ್ರಾ ಸೇರಿದಂತೆ ಹಲವರ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

Ind vs SL 1st T20I Bumrah Dhawan returns from injury as India take on Sri Lanka in Guwahati
Author
Guwahati, First Published Jan 5, 2020, 11:46 AM IST

ಗುವಾಹಟಿ(ಜ.05): 2020ರಲ್ಲಿ ಹಲವು ಮಹತ್ವದ ಸವಾಲುಗಳನ್ನು ಎದುರಿಸಲಿರುವ ಭಾರತ ಕ್ರಿಕೆಟ್‌ ತಂಡ, ಹೊಸ ವರ್ಷವನ್ನು ಭರ್ಜರಿಯಾಗಿ ಸ್ವಾಗತಿಸಲು ಸಿದ್ಧಗೊಂಡಿದೆ. 

ಶ್ರೀಲಂಕಾವನ್ನು ಟಿ20 ಸರಣಿ ಆಡುವಂತೆ ಆಹ್ವಾನಿಸಿರುವ ಭಾರತ, ಭಾನುವಾರ ಇಲ್ಲಿನ ಬರ್ಸಾಪರಾ ಕ್ರೀಡಾಂಗಣದಲ್ಲಿ 3 ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಆಡಲಿದೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿರುವ ವೇಗದ ಅಸ್ತ್ರ ಜಸ್‌ಪ್ರೀತ್‌ ಬುಮ್ರಾ ಹಾಗೂ ರೋಹಿತ್‌ ಶರ್ಮಾ ವಿಶ್ರಾಂತಿ ಬಯಸಿದ್ದಕ್ಕೆ ತಂಡದಲ್ಲಿ ಸ್ಥಾನ ಪಡೆದಿರುವ ಶಿಖರ್‌ ಧವನ್‌ ಮೇಲೆ ಎಲ್ಲರ ಕಣ್ಣಿದೆ.

ಲಂಕಾ ವಿರುದ್ಧದ ಟಿ20 ಪಂದ್ಯಕ್ಕೆ 2 ಬದಲಾವಣೆ ಖಚಿತ; ಇಲ್ಲಿದೆ ಸಂಭವನೀಯ ತಂಡ!

2020ರ ಐಸಿಸಿ ಟಿ20 ವಿಶ್ವಕಪ್‌ಗಾಗಿ ಕಳೆದ ವರ್ಷದಿಂದಲೇ ಸಿದ್ಧತೆ ಆರಂಭಿಸಿರುವ ಭಾರತ, ತಂಡದ ಸಂಯೋಜನೆಗೆ ಸಂಬಂಧಿಸಿದಂತೆ ಮತ್ತಷ್ಟು ಲೆಕ್ಕಾಚಾರ ನಡೆಸಲಿದೆ. ವಿಶ್ವಕಪ್‌ ತಯಾರಿ ಮತ್ತಷ್ಟು ತೀವ್ರಗೊಳ್ಳಲಿದ್ದು, ಕೆಲ ಪ್ರಯೋಗಗಳನ್ನು ನಾಯಕ ವಿರಾಟ್‌ ಕೊಹ್ಲಿ ಹಾಗೂ ಕೋಚ್‌ ರವಿಶಾಸ್ತ್ರಿ ನಡೆಸಲಿದ್ದಾರೆ.

ಪಂದ್ಯಕ್ಕೂ ಮುನ್ನ ಲಂಕಾ ಬ್ಯಾಟ್ಸ್‌ಮನ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿದ ಬುಮ್ರಾ..!

ರೋಹಿತ್‌ ಅನುಪಸ್ಥಿತಿಯಲ್ಲಿ ಶಿಖರ್‌ ಧವನ್‌ಗೆ ಮತ್ತೊಂದು ಅವಕಾಶ ಸಿಕ್ಕಿದೆ. ವಿಶ್ವಕಪ್‌ನಲ್ಲಿ ರೋಹಿತ್‌ ಜತೆ ಇನ್ನಿಂಗ್ಸ್‌ ಆರಂಭಿಸಲು ಕೆ.ಎಲ್‌.ರಾಹುಲ್‌ ಹಾಗೂ ಶಿಖರ್‌ ಧವನ್‌ ನಡುವೆ ಪೈಪೋಟಿ ಇದೆ. ರಾಹುಲ್‌ ಅತ್ಯುತ್ತಮ ಲಯದಲ್ಲಿದ್ದು, ಕಳೆದ ವರ್ಷ ಸಿಕ್ಕ ಪ್ರತಿ ಅವಕಾಶವನ್ನು ಬಳಸಿಕೊಂಡಿದ್ದಾರೆ. ಲಯ ಕಾಯ್ದುಕೊಂಡು ತಂಡದಲ್ಲಿ ಉಳಿದುಕೊಳ್ಳುವುದು ಅವರಿಗಿರುವ ಸವಾಲು. ಶ್ರೇಯಸ್‌ ಅಯ್ಯರ್‌ ಭರವಸೆ ಮೂಡಿಸಿದ್ದು, ಅವರ ಮೇಲೆ ನಿರೀಕ್ಷೆ ಇದೆ. ರಿಷಭ್‌ ಪಂತ್‌ಗೆ ಮತ್ತೊಂದು ಅವಕಾಶ ದೊರೆತಿದ್ದು, ಹೇಗೆ ಉಪಯೋಗಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲವಿದೆ.

ವಾಷಿಂಗ್ಟನ್‌ ಸುಂದರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇನ್ನೂ ಒಗ್ಗಿಕೊಂಡಂತೆ ಕಾಣುತ್ತಿಲ್ಲ. ಆದರೆ ತಂಡ ಅವರ ಮೇಲೆ ನಂಬಿಕೆ ಕಳೆದುಕೊಂಡಿಲ್ಲ. ಸುಂದರ್‌ ತಮ್ಮ ಪ್ರದರ್ಶನ ಗುಣಮಟ್ಟ ಹೆಚ್ಚಿಸಿಕೊಂಡರೆ ಕುಲ್ದೀಪ್‌ ಯಾದವ್‌ ಹಾಗೂ ಯಜುವೇಂದ್ರ ಚಹಲ್‌ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಆಡುವ ಹನ್ನೊಂದರಲ್ಲಿ ಸ್ಥಾನ ಸಿಗಲಿದೆ. ನ್ಯೂಜಿಲೆಂಡ್‌ ಪ್ರವಾಸಕ್ಕೆ ಹಾರ್ದಿಕ್‌ ಪಾಂಡ್ಯ ಆಯ್ಕೆಯಾಗುವ ನಿರೀಕ್ಷೆ ಇದ್ದು, ಆಲ್ರೌಂಡರ್‌ ಶಿವಂ ದುಬೆಗೆ ಇದು ಕೊನೆಯ ಅವಕಾಶವೆನಿಸಿದೆ.

ಮೊಹಮದ್‌ ಶಮಿ, ದೀಪಕ್‌ ಚಹರ್‌ ಹಾಗೂ ಭುವನೇಶ್ವರ್‌ ಕುಮಾರ್‌ ಮೂವರು ಈ ಸರಣಿಯಲ್ಲಿ ಆಡುತ್ತಿಲ್ಲ. ಹೀಗಾಗಿ ಶಾರ್ದೂಲ್‌ ಠಾಕೂರ್‌ ಹಾಗೂ ನವ್‌ದೀಪ್‌ ಸೈನಿಗೆ ಮತ್ತೊಂದು ಅವಕಾಶ ಸಿಕ್ಕಿದೆ. ಬುಮ್ರಾ ಜತೆ ಈ ಇಬ್ಬರು ಯುವ ವೇಗಿಗಳು ಸಂಘಟಿತ ದಾಳಿ ನಡೆಸಬೇಕಿದೆ. ರೋಹಿತ್‌ ಶರ್ಮಾ ಇಲ್ಲದಿರುವ ಕಾರಣ, ವಿರಾಟ್‌ ಕೊಹ್ಲಿ ಮೇಲೆ ಒತ್ತಡ ಹೆಚ್ಚಾಗಲಿದೆ. ಇಬ್ಬರಲ್ಲಿ ಒಬ್ಬರು ದೊಡ್ಡ ಇನ್ನಿಂಗ್ಸ್‌ ಆಡಿದರಷ್ಟೇ ಭಾರತಕ್ಕೆ ಗೆಲುವು ಎನ್ನುವಂತಿದೆ ಪರಿಸ್ಥಿತಿ. ಹೀಗಾಗಿ, ಕೊಹ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕಿದೆ.

ಲಂಕಾಕ್ಕೆ ಯುವಕರ ಬಲ: ಟಿ20 ವಿಶ್ವಕಪ್‌ಗೆ ಸದೃಢ ತಂಡವನ್ನು ಕಟ್ಟಲು ಹೊರಟಿರುವ ಶ್ರೀಲಂಕಾ, ಹೊಸ ಪ್ರತಿಭೆಗಳನ್ನು ಬೆಳೆಸಲು ಯೋಜನೆ ರೂಪಿಸಿದೆ. ಪಾಕಿಸ್ತಾನ ವಿರುದ್ಧ ಸರಣಿಯಲ್ಲಿ ಗೆಲುವು ಸಾಧಿಸಲು ಭನುಕ ರಾಜಪಕ್ಸಾ, ಒಶಾಡ ಫರ್ನಾಂಡೋ, ಧನುಷ್ಕ ಗುಣತಿಲಕ, ವನಿಂಡು ಹಸರಂಗರಂತಹ ಯುವ ಆಟಗಾರರು ಕಾರಣರಾಗಿದ್ದರು. ಭಾರತಕ್ಕೂ ಈ ಆಟಗಾರರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹೀಗಾಗಿ ಅಚ್ಚರಿಯ ಪ್ರದರ್ಶನ ಮೂಡಿಬಂದರೆ ಅಚ್ಚರಿಯಿಲ್ಲ.

ನಿವೃತ್ತಿ ಮುಂದೂಡುತ್ತಾ ಸಾಗಿರುವ ಲಸಿತ್‌ ಮಾಲಿಂಗ ತಂಡ ಮುನ್ನಡೆಸಲಿದ್ದು, ಬಹಳ ದಿನಗಳ ಬಳಿಕ ಏಂಜೆಲೋ ಮ್ಯಾಥ್ಯೂಸ್‌ ತಂಡಕ್ಕೆ ಮರಳಿದ್ದಾರೆ. ಲಂಕಾದಿಂದ ಈ ಬಾರಿ ಪ್ರಬಲ ಪೈಪೋಟಿ ನಿರೀಕ್ಷೆ ಮಾಡಲಾಗಿದೆ.

ಒಟ್ಟು ಮುಖಾಮುಖಿ: 16

ಭಾರತ: 11

ಶ್ರೀಲಂಕಾ: 05

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಕೆ.ಎಲ್‌.ರಾಹುಲ್‌, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ(ನಾಯಕ), ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಶಿವಂ ದುಬೆ, ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್‌, ಯಜುವೇಂದ್ರ ಚಹಲ್‌, ಜಸ್‌ಪ್ರೀತ್‌ ಬುಮ್ರಾ, ನವ್‌ದೀಪ್‌ ಸೈನಿ.

ಶ್ರೀಲಂಕಾ: ಧನುಷ್ಕಾ ಗುಣತಿಲಕ, ನಿರೋಶನ್‌ ಡಿಕ್‌ವೆಲ್ಲಾ, ಕುಸಾಲ್‌ ಪೆರೇರಾ, ಮ್ಯಾಥ್ಯೂಸ್‌, ಭನುಕ ರಾಜಪಕ್ಸಾ, ದಸುನ್‌ ಶನಕ, ಇಸುರು ಉಡನ, ವನಿಂಡು ಹಸರಂಗ, ಲಹಿರು ಕುಮಾರ, ಲಕ್ಷನ್‌ ಸಂಡಕನ್‌, ಲಸಿತ್‌ ಮಾಲಿಂಗ (ನಾಯಕ).

ಪಂದ್ಯ ಆರಂಭ: ಸಂಜೆ 7ಕ್ಕೆ,

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Follow Us:
Download App:
  • android
  • ios