Asianet Suvarna News Asianet Suvarna News

Ind vs SA ಟೆಸ್ಟ್ ಸರಣಿ ಗೆಲ್ಲುವ ಅವಕಾಶ ಕೈಚೆಲ್ಲಿದ ಭಾರತ; ಟೆಸ್ಟ್ ಸರಣಿ ಸೋತಿದ್ದೆಲ್ಲಿ ಟೀಂ ಇಂಡಿಯಾ..?

* ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಅವಕಾಶ ಕೈಚೆಲ್ಲಿದೆ ಟೀಂ ಇಂಡಿಯಾ

* ಬ್ಯಾಟಿಂಗ್‌ನಲ್ಲಿ ದಯನೀಯ ವೈಫಲ್ಯ ಅನುಭವಿಸಿದ ಭಾರತ ಕ್ರಿಕೆಟ್ ತಂಡ

* ಭಾರತೀಯರನ್ನು ಕಾಡಿದ ಅನನುಭವಿ ದಕ್ಷಿಣ ಆಫ್ರಿಕಾ ತಂಡ

Ind vs SA Team India Test series win on South African soil So near yet so far kvn
Author
Bengaluru, First Published Jan 15, 2022, 4:17 PM IST
  • Facebook
  • Twitter
  • Whatsapp

ಬೆಂಗಳೂರು(ಜ.15): ಭಾರತ ಕ್ರಿಕೆಟ್ ತಂಡವು, ದಕ್ಷಿಣ ಆಫ್ರಿಕಾ ನೆಲದಲ್ಲಿ ಮತ್ತೊಮ್ಮೆ ಫ್ರೀಡಂ ಟ್ರೋಫಿ ಗೆಲ್ಲಲು ವಿಫಲವಾಗಿದೆ. ಭಾರತ ತಂಡವು 29 ವರ್ಷಗಳಿಂದ ದಕ್ಷಿಣ ಆಫ್ರಿಕಾ ಪ್ರವಾಸ ಮಾಡುತ್ತಿದ್ದು, ಇದುವರೆಗೂ ಹರಿಣಗಳ ನಾಡಿನಲ್ಲಿ ಟೆಸ್ಟ್ ಸರಣಿ ಗೆಲ್ಲಲು ಇದುವರೆಗೂ ಸಾಧ್ಯವಾಗಿಲ್ಲ. ಅಷ್ಟಕ್ಕೂ ಟೀಂ ಇಂಡಿಯಾ ಎಡವಿದ್ದೆಲ್ಲಿ..?

ಈ ಬಾರಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಲಿದೆ ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಆದರೂ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾದ ಲೆಕ್ಕಾಚಾರ ತಲೆಕೆಳಗಾಯಿತು. ಈ ಮೂಲಕ 29 ವರ್ಷಗಳಿಂದ ಹರಿಣಗಳ ನಾಡಿನಲ್ಲಿ ಟೆಸ್ಟ್ ಸರಣಿ ಗೆಲ್ಲುವ ಭಾರತದ ಕನಸು ಮತ್ತೆ ಮುಂದೂಡಲ್ಪಟ್ಟಿದೆ. ಈ ಸರಣಿ ಆರಂಭಕ್ಕೂ ಮುನ್ನವೇ ಈ ಬಾರಿಗೆ ಭಾರತಕ್ಕೆ ಹರಿಣಗಳ ನಾಡಿನಲ್ಲಿ ಟೆಸ್ಟ್ ಸರಣಿ ಗೆಲ್ಲಲು ಭಾರತಕ್ಕೆ ಚಿನ್ನದಂತ ಅವಕಾಶವಿದೆ ಎಂದು ಬಿಂಬಿಸಲಾಗಿತ್ತು. ಆಸ್ಟ್ರೇಲಿಯಾದಲ್ಲಿ ಎರಡು ಟೆಸ್ಟ್ ಗೆದ್ದು ಸರಣಿ ಕೈವಶ ಮಾಡಿಕೊಂಡು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಆಘಾತ ಎದುರಾಗಿದೆ.

ಸದ್ಯ ಭಾರತ ತಂಡವು ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಅದರಲ್ಲೂ ಕ್ರಿಕೆಟ್‌ನ ಗುಣಮಟ್ಟ, ಕಳೆದ ವರ್ಷ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್ ಅಪ್‌ ಸ್ಥಾನ ಪಡೆದದ್ದು. ಇದಾದ ಬಳಿಕ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನೆಲದಲ್ಲಿ ಅಮೋಘ ಪ್ರದರ್ಶನ ತೋರಿದ್ದು, ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಆಸೆಗೆ ರೆಕ್ಕೆಪುಕ್ಕ ಮೂಡುವಂತೆ ಮಾಡಿದ್ದವು. ಪ್ರವಾಸಿ ಭಾರತ ತಂಡವು ಈ ಬಾರಿಗೆ ದಕ್ಷಿಣ ಆಫ್ರಿಕಾದ ತಾರಾ ಆಟಗಾರರ ಅನುಪಸ್ಥಿತಿಯನ್ನು ಬಳಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಯಿತು. ಅಷ್ಟಕ್ಕೂ ಟೀಂ ಇಂಡಿಯಾ ಪಾಲಿಗೆ ಹಿನ್ನಡೆಯಾಗಲು ಕಾರಣವಾದ ಅಂಶಗಳೇನು ಎನ್ನುವುದನ್ನು ನಾವಿಂದು ವಿಶ್ಲೇಷಿಸೋಣ ಬನ್ನಿ.
 
ಬ್ಯಾಟಿಂಗ್‌ನಲ್ಲಿ ಸಾಧಾರಣ ಪ್ರದರ್ಶನ ತೋರಿದ ಭಾರತ

ಭಾರತ ಕ್ರಿಕೆಟ್ ತಂಡವು ಟೆಸ್ಟ್ ಸರಣಿ ಸೋಲಲು ಪ್ರಮುಖ ಕಾರಣವೇ ಬ್ಯಾಟಿಂಗ್ ವೈಫಲ್ಯ. ದಕ್ಷಿಣ ಆಫ್ರಿಕಾ ತಂಡದಲ್ಲಿನ ಅನನುಭವಿ ಆಟಗಾರರಿಗೆ ಹೋಲಿಸಿದರೆ ಟೀಂ ಇಂಡಿಯಾದಲ್ಲಿ ತಾರಾ ಆಟಗಾರರ ದಂಡೇ ಇತ್ತು. ಹೀಗಾಗಿ ಸರಣಿಯಲ್ಲಿ ಟೀಂ ಇಂಡಿಯಾ ಪ್ರಾಬಲ್ಯ ಮೆರೆಯಬಹುದು ಎಂದೇ ಊಹಿಸಲಾಗಿತ್ತು. ಕೆ.ಎಲ್ ರಾಹುಲ್, ಮಯಾಂಕ್‌ ಅಗರ್‌ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರಿಷಭ್ ಪಂತ್ ಅವರಂತಹ ಆಟಗಾರರು ರನ್‌ ಮಳೆ ಹರಿಸಲಿದ್ದಾರೆ ಎಂದು ಭಾವಿಸಲಾಗಿತ್ತು. ಮೊದಲ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಹಾಗೂ ರಾಹುಲ್ ಉತ್ತಮ ಜತೆಯಾಟದ ಮೂಲಕ ಗಮನ ಸೆಳೆದರಾದರೂ, ಉಳಿದೆರಡು ಟೆಸ್ಟ್ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದರು.

Ind vs SA Team India Test series win on South African soil So near yet so far kvn

ಇನ್ನು ಇದೇ ರೀತಿ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಅವರ ದಯನೀಯ ಬ್ಯಾಟಿಂಗ್ ವೈಫಲ್ಯ ಟೆಸ್ಟ್ ಸರಣಿ ಫಲಿತಾಂಶದ ಮೇಲೆ ಋಣಾತ್ಮಕ ಪರಿಣಾಮ ಬೀರಿತು. ಇನ್ನು ನಾಯಕ ವಿರಾಟ್ ಕೊಹ್ಲಿ ಹೆಚ್ಚು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಇನ್ನು ರಿಷಭ್ ಪಂತ್ ಕೊನೆಯಲ್ಲಿ ಉತ್ತಮ ಆಟವಾಡಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸುವಂತಹ ಇನಿಂಗ್ಸ್ ಆಡಲಿಲ್ಲ.

ಬೌಲರ್‌ಗಳನ್ನು ದೂರುವಂತದ್ದೇನಿಲ್ಲ

ಟೀಂ ಇಂಡಿಯಾ ಬ್ಯಾಟರ್‌ಗಳಿಗೆ ಹೋಲಿಸಿದರೆ, ತಕ್ಕ ಮಟ್ಟಿಗೆ ಬೌಲರ್‌ಗಳು ಉತ್ತಮ ಪ್ರದರ್ಶನವನ್ನೇ ತೋರಿದ್ದಾರೆ. ಬೌಲರ್‌ಗಳು ತಮ್ಮ ಇತಿಮಿತಿಯೊಳಗೆ ಉತ್ತಮ ಪ್ರದರ್ಶನವನ್ನೇ ತೋರಿದ್ದಾರೆ. ಹೀಗಿದ್ದೂ, ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ಎದುರಾಳಿ ತಂಡವನ್ನು ಕಾಡುವಲ್ಲಿ ವಿಫಲರಾದರು. ವೇಗಿಗಳ ಸ್ನೇಹಿ ಪಿಚ್‌ನಲ್ಲಿ ಅಶ್ವಿನ್ ಪರಿಣಾಮಕಾರಿ ಬೌಲಿಂಗ್ ನಡೆಸಲು ವಿಫಲರಾದರು. 

ಅರ್ಹ ಸರಣಿ ಗೆಲ್ಲುವು ಸಂಪಾದಿಸಿದ ಹರಿಣಗಳ ಪಡೆ

ಕೊನೆಯದಾಗಿ ಹೇಳಬೇಕೆಂದರೆ ಗೆಲುವಿನ ಶ್ರೇಯ ಖಂಡಿತವಾಗಿಯೂ ದಕ್ಷಿಣ ಆಫ್ರಿಕಾ ತಂಡಕ್ಕೆ ಸಲ್ಲಲೇಬೇಕು. ಅನನುಭವಿ ಆಟಗಾರರನ್ನೊಳಗೊಂಡ ತಂಡವು ಬಲಿಷ್ಠ ಭಾರತ ತಂಡಕ್ಕೆ ಸೋಲುಣಿಸಿದ್ದು ಸುಲಭದ ಮಾತಲ್ಲ. ಭಾರತ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡ ಬೆನ್ನಲ್ಲೇ ಕ್ವಿಂಟನ್ ಡಿ ಕಾಕ್ ಕೂಡಾ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ್ದು ತಂಡದ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿತ್ತು. ಇದರ ಜತೆಗೆ ವೇಗದ ಅಸ್ತ್ರ ಏನ್ರಿಚ್ ನೊಕಿಯೆ ಕೂಡಾ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದು, ದಕ್ಷಿಣ ಆಫ್ರಿಕಾ ಪಾಲಿಗೆ ಭಾರತ ಎದುರು ಟೆಸ್ಟ್ ಸರಣಿ ಗೆಲ್ಲುವುದು ಅಸಾಧ್ಯ ಎನಿಸಿತ್ತು. ಸಾಕಷ್ಟು ಬಿಡುವಿನ ಬಳಿಕ ಟೆಸ್ಟ್ ಸರಣಿಯನ್ನಾಡಲು ಆಫ್ರಿಕಾ ತಂಡವು ಕಣಕ್ಕಿಳಿದಿದ್ದರೆ, ಇನ್ನೊಂದೆಡೆ ಭಾರತ ತಂಡವು ತವರಿನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ, ಆತ್ಮವಿಶ್ವಾಸದಿಂದಲೇ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು.

ದಕ್ಷಿಣ ಆಫ್ರಿಕಾದ ಯುವ ಪ್ರತಿಭಾನ್ವಿತ ಆಟಗಾರರು ಭಾರತ ತಂಡದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದರು. ಕೀಗನ್ ಪೀಟರ್‌ಸನ್‌, ನಾಯಕ ಡೀನ್ ಎಲ್ಗರ್ ಹಾಗೂ ತೆಂಬ ಬವುಮಾ ಭಾರತೀಯರ ಮೇಲೆ ಸವಾರಿ ಮಾಡಿದರು. ಇನ್ನು ಬೌಲಿಂಗ್‌ನಲ್ಲಿ ವೇಗಿಗಳಾದ ಕಗಿಸೋ ರಬಾಡ, ಲುಂಗಿ ಎಂಗಿಡಿ, ಭಾರತೀಯ ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡುವಂತೆ ಮಾಡಿದರು. ಈ ಮೂಲಕ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಸುಲಭದ ಮಾತಲ್ಲ ಎನ್ನುವುದು ಭಾರತ ತಂಡಕ್ಕೆ ಮತ್ತೊಮ್ಮೆ ಅರಿವಾಗುವಂತೆ ಮಾಡಿತು.

Follow Us:
Download App:
  • android
  • ios