Asianet Suvarna News Asianet Suvarna News

Ind vs SA ಕ್ಯಾಪ್ಟನ್‌ ಕೂಲ್ ಎಂ ಎಸ್ ಧೋನಿ ದಾಖಲೆ ಮುರಿದ ರೋಹಿತ್ ಶರ್ಮಾ..!

ಟಿ20 ನಾಯಕತ್ವದಲ್ಲಿ ಹೊಸ ದಾಖಲೆ ಬರೆದ ರೋಹಿತ್ ಶರ್ಮಾ
ಕ್ಯಾಪ್ಟನ್ ಕೂಲ್ ಧೋನಿ ಹೆಸರಿನಲ್ಲಿದ್ದ ದಾಖಲೆ ಮುರಿದ ರೋಹಿತ್ ಶರ್ಮಾ
ಕ್ಯಾಲೆಂಡರ್ ವರ್ಷದಲ್ಲಿ ಅತಿಹೆಚ್ಚು ಗೆಲುವು ದಾಖಲಿಸಿದ ಭಾರತ ನಾಯಕ ರೋಹಿತ್

Ind vs SA Rohit Sharma breaks MS Dhoni record for most T20I wins by India captain in a Calender Year kvn
Author
First Published Sep 29, 2022, 4:03 PM IST

ತಿರುವನಂತಪುರ(ಸೆ.29): ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, 8 ವಿಕೆಟ್‌ಗಳ ಅಂತರದ ಸುಲಭ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಇದೀಗ ರೋಹಿತ್ ಶರ್ಮಾ ಪಾಲಾಗಿದೆ.

ಹೌದು, ಕ್ಯಾಲೆಂಡರ್ ವರ್ಷವೊಂದರಲ್ಲಿ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತಿಹೆಚ್ಚು ಗೆಲುವು ದಾಖಲಿಸಿದ ಟೀಂ ಇಂಡಿಯಾ ನಾಯಕ ಎನ್ನುವ ದಾಖಲೆ ಇದೀಗ ರೋಹಿತ್ ಶರ್ಮಾ ಪಾಲಾಗಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, 2022ರ ಕ್ಯಾಲೆಂಡರ್‌ ವರ್ಷದಲ್ಲಿ 16 ಗೆಲುವು ದಾಖಲಿಸಿದೆ. ಈ ಮೊದಲು 2016ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ 15 ಟಿ20 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಇದೀಗ ಆ ದಾಖಲೆಯನ್ನು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆರ್ಶದೀಪ್ ಸಿಂಗ್ ಟೀಂ ಇಂಡಿಯಾ ಗೆಲುವಿನ ರೂವಾರಿ:

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ರೋಹಿತ್ ಶರ್ಮಾ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಟೀಂ ಇಂಡಿಯಾ ಬೌಲರ್‌ಗಳು, ಹರಿಣಗಳ ಬ್ಯಾಟರ್‌ಗಳನ್ನು ಆರಂಭದಲ್ಲೇ ಇನ್ನಿಲ್ಲದಂತೆ ಕಾಡಿದರು. ದೀಪಕ್ ಚಹರ್ ಮೊದಲ ಓವರ್‌ನಲ್ಲೇ ದಕ್ಷಿಣ ಆಫ್ರಿಕಾ ನಾಯಕ ತೆಂಬ ಬವುಮಾ ಅವರನ್ನು ಪೆವಿಲಿಯನ್ನಿಗಟ್ಟಿದರೆ, ಮರು ಓವರ್‌ನಲ್ಲಿ ಆರ್ಶದೀಪ್ ಸಿಂಗ್, ಕ್ವಿಂಟನ್ ಡಿ ಕಾಕ್ ಹಾಗೂ ರೌಸೋ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು ಡೇವಿಡ್ ಮಿಲ್ಲರ್ ಕೂಡಾ ಆರ್ಶದೀಪ್ ಸಿಂಗ್‌ಗೆ ಮೂರನೇ ಬಲಿಯಾದರು. ಒಂದು ಹಂತದಲ್ಲಿ ದಕ್ಷಿಣ ಆಫ್ರಿಕಾ ತಂಡವು 9 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. 

T20 World Cup: ಜಸ್‌ಪ್ರೀತ್‌ ಬುಮ್ರಾ ಟಿ20 ವಿಶ್ವಕಪ್‌ನಿಂದ ಔಟ್‌

ಇನ್ನು ಮಧ್ಯಮ ಕ್ರಮಾಂಕದಲ್ಲಿ ಏಯ್ಡನ್ ಮಾರ್ಕ್‌ರಮ್(25) ಹಾಗೂ ವೇಯ್ನ್ ಪಾರ್ನೆಲ್(24) ಕೆಲಕಾಲ ನೆಲಕಚ್ಚಿ ಆಡುವ ಪ್ರಯತ್ನ ಮಾಡಿದರು. ಇನ್ನು ಕೊನೆಯಲ್ಲಿ ಕೇಶವ್ ಮಹರಾಜ್ ಸಮಯೋಚಿತ 41 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಲು ನೆರವಾದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 106 ರನ್ ಕಲೆಹಾಕಿತ್ತು.

ಇನ್ನು ಹರಿಣಗಳ ಪಡೆ ನೀಡಿದ್ದ ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ(೦) ಹಾಗೂ ವಿರಾಟ್ ಕೊಹ್ಲಿ(2) ವಿಕೆಟ್ ಕಳೆದುಕೊಂಡಿತಾದರೂ, ಮೂರನೇ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್(50*) ಹಾಗೂ ಕೆ ಎಲ್ ರಾಹುಲ್(51*) ಮುರಿಯದ 93 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಭರ್ಜರಿಯಾಗಿಯೇ ಗೆಲುವಿನ ದಡ ಸೇರಿಸಿದರು.

Follow Us:
Download App:
  • android
  • ios