Asianet Suvarna News Asianet Suvarna News

Ind vs SA: ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗಿಂದು ದಕ್ಷಿಣ ಆಫ್ರಿಕಾ ಸವಾಲು

* ದಕ್ಷಿಣ ಆಫ್ರಿಕಾ ವಿರುದ್ದ ಮೊದಲ ಏಕದಿನ ಪಂದ್ಯಕ್ಕೆ ಸಜ್ಜಾದ ಟೀಂ ಇಂಡಿಯಾ

* ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ.ಎಲ್‌. ರಾಹುಲ್‌ ಟೀಂ ಇಂಡಿಯಾ ನಾಯಕ

* 7 ವರ್ಷಗಳ ಬಳಿಕ ನಾಯಕತ್ವ ಭಾರ ಕಳಚಿಟ್ಟು ಕಣಕ್ಕಿಳಿಯಲು ಸಜ್ಜಾದ ವಿರಾಟ್ ಕೊಹ್ಲಿ

Ind vs SA KL Rahul led Indian Cricket Team take on South Africa in 1st ODI kvn
Author
Bengaluru, First Published Jan 19, 2022, 10:56 AM IST

ಪಾರ್ಲ್‌(ಜ.19)‍: ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ 3 ಪಂದ್ಯಗಳ ಏಕದಿನ ಸರಣಿ ಬುಧವಾರದಿಂದ ಆರಂಭಗೊಳ್ಳಲಿದ್ದು, ಇಲ್ಲಿನ ಬೋಲ್ಯಾಂಡ್‌ ಅಂಗಳದಲ್ಲಿ ಮೊದಲ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಎಲ್ಲಾ ಮಾದರಿಯ ಕ್ರಿಕೆಟ್‌ನ ನಾಯಕತ್ವಕ್ಕೂ ವಿದಾಯ ಹೇಳಿರುವ ವಿರಾಟ್‌ ಕೊಹ್ಲಿ 7 ವರ್ಷಗಳ ಬಳಿಕ ಕೇವಲ ಬ್ಯಾಟರ್‌ ಆಗಿ ಅಂಗಳಕ್ಕೆ ಇಳಿಯುತ್ತಿದ್ದು ಎಲ್ಲರ ಕಣ್ಣು ವಿರಾಟ್‌ ಮೇಲೆ ನೆಟ್ಟಿದೆ. ಮೊದಲ ಪಂದ್ಯದಲ್ಲಿ ಜಯ ಸಾಧಿಸಿದ ಹೊರತಾಗಿಯೂ ಕೊನೆಯ 2 ಪಂದ್ಯಗಳನ್ನು ಸೋಲುವ ಮೂಲಕ ಟೆಸ್ಟ್‌ ಸರಣಿಯನ್ನು ಭಾರತ 1-2 ಅಂತರದಿಂದ ಕೈ ಚೆಲ್ಲಿದ್ದು, ಇದಕ್ಕೆ ತಿರುಗೇಟು ನೀಡುವ ತವಕದಲ್ಲಿದೆ. 4 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಆಫ್ರಿಕಾ ನೆಲದಲ್ಲಿ ಭಾರತ ದ್ವಿಪಕ್ಷೀಯ ಸರಣಿ ಆಡುತ್ತಿದ್ದು, 2018ರಲ್ಲಿ ನಡೆದಿದ್ದ 6 ಪಂದ್ಯಗಳ ಸರಣಿಯನ್ನು 5-1ರಿಂದ ಗೆದ್ದು ಬೀಗಿತ್ತು.

ನಾಯಕ ರೋಹಿತ್‌ ಶರ್ಮಾ (Rohit Sharma) ಗಾಯದ ಸಮಸ್ಯೆಯಿಂದಾಗಿ ಸರಣಿಗೆ ಅಲಭ್ಯರಾಗಿದ್ದು, ಕನ್ನಡಿಗ ಕೆ.ಎಲ್‌.ರಾಹುಲ್‌ (KL Rahul) ಮೊದಲ ಬಾರಿಗೆ ಏಕದಿನ ಮಾದರಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ವೇಗಿ ಜಸ್ಟ್ರೀತ್‌ ಬುಮ್ರಾ (Jasprit Bumrah) ಉಪನಾಯಕನಾಗಿ ಸಾಥ್‌ ನೀಡಲಿದ್ದಾರೆ. ನಾಯಕನಾಗಿ ಮಾತ್ರವಲ್ಲದೇ ಬ್ಯಾಟ್ಸ್‌ಮನ್‌ ಆಗಿಯೂ ರಾಹುಲ್‌ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಅನುಭವಿ ಶಿಖರ್‌ ಧವನ್‌ (Shikhar Dhawan) ಜೊತೆ ರಾಹುಲ್‌ ಇನ್ನಿಂಗ್ಸ್‌ ಆರಂಭಿಸಲಿದ್ದು, ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಖಚಿತವಾಗಿದ್ದಾರೆ. 2023ರ ಏಕದಿನ ವಿಶ್ವಕಪ್‌ ದೃಷ್ಟಿಯಿಂದಲೂ ಹಾಗೂ ರಾಹುಲ್‌ ನಾಯಕತ್ವವನ್ನು ಒರೆಗಚ್ಚಲು ಈ ಸರಣಿ ಮಹತ್ವದಾಗಿದೆ.

ವಿರಾಟ್ ಕೊಹ್ಲಿ (Virat Kohli) ಎಂದಿನಂತೆ 3ನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿಯಲಿದ್ದು, 4ನೇ ಕ್ರಮಾಂಕಕ್ಕಾಗಿ ಸೂರ್ಯಕುಮಾರ್‌ ಯಾದವ್‌ (Suryakumar Yadav) ಮತ್ತು ಶ್ರೇಯಸ್‌ ಅಯ್ಯರ್‌ (Shreyas Iyer) ನಡುವೆ ಪೈಪೋಟಿ ಜೋರಾಗಿದೆ. ಸ್ಥಿರ ಪ್ರದರ್ಶನ ನೀಡುತ್ತಿರುವ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ (Rishabh Pant) 5ನೇ ಕ್ರಮಾಂಕವನ್ನು ಭದ್ರ ಪಡಿಸಿಕೊಂಡಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ಟಿ-20 ಸರಣಿಯಲ್ಲಿ ಭರವಸೆ ಮೂಡಿಸಿರುವ ಆಲ್‌ರೌಂಡರ್‌ ಆಗಿ ವೆಂಕಟೇಶ್‌ ಅಯ್ಯರ್‌ರನ್ನು ಆಡಿಸುವ ಇಚ್ಛೆಯನ್ನು ರಾಹುಲ್‌ ವ್ಯಕ್ತಪಡಿಸಿದ್ದು, ಏಕದಿನ ಮಾದರಿಗೆ ವೆಂಕಟೇಶ್‌ ಪಾದಾರ್ಪಣೆ ಮಾಡುವುದು ಬಹುತೇಕ ಖಚಿತವಾಗಿದೆ.

ಅನುಭವಿ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್‌ (Ravichandran Ashwin) 4 ವರ್ಷದ ಬಳಿಕ ಏಕದಿನ ತಂಡಕ್ಕೆ ಮರಳಿದ್ದು, ಯುಜವೇಂದ್ರ ಚಹಲ್‌ ಜೊತೆ ಚೆಂಡು ಹಂಚಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಬುಮ್ರಾ ಜತೆಗೆ ಭುವನೇಶ್ವರ್‌ ಕುಮಾರ್‌ ವೇಗದ ಬೌಲಿಂಗ್‌ನ ಜವಾಬ್ದಾರಿ ಹೊರಲಿದ್ದಾರೆ. ಒಂದೊಮ್ಮೆ 3ನೇ ವೇಗಿಗೆ ಅವಕಾಶ ಮಾಡಿಕೊಟ್ಟರೆ ದೀಪಕ್‌ ಚಹರ್‌, ಶಾರ್ದೂಲ್‌ ಠಾಕೂರ್‌ ಅಥವಾ ಪ್ರಸಿದ್ಧ ಕೃಷ್ಣ ಈ ಮೂವರಲ್ಲಿ ಒಬ್ಬರಿಗೆ ಅವಕಾಶ ಸಿಗಲಿದೆ. ಟೆಸ್ಟ್‌ ಸರಣಿ ವೇಳೆಗೆ ಗಾಯದ ಸಮಸ್ಯೆಗೆ ತುತ್ತಾಗಿದ್ದ, ವೇಗಿ ಮೊಹಮ್ಮದ್‌ ಸಿರಾಜ್‌ ಸಹ ಚೇತರಿಸಿಕೊಂಡಿದ್ದು ತಂಡದ ಬಲವನ್ನು ಹೆಚ್ಚಿಸಿದೆ.

Ind vs SA: ಇಲ್ಲಿದೆ ನೋಡಿ ಭಾರತ vs ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಕಂಪ್ಲೀಟ್‌ ಡೀಟೈಲ್ಸ್‌..!

ಅತ್ತ ಟೆಸ್ಟ್‌ ಸರಣಿ ಗೆಲುವು ಹರಿಣಗಳ ವಿಶ್ವಾಸವನ್ನು ಇಮ್ಮಡಿಗೊಳಿಸಿದ್ದು, ಅದೇ ವಿಶ್ವಾಸದಲ್ಲಿ ಏಕದಿನ ಸರಣಿ ಆಡಲು ಸಜ್ಜಾಗಿದ್ದಾರೆ. ಡಿಕಾಕ್‌, ಮಾರ್ಕ್ರಮ್‌, ಬವುಮಾ, ಮಿಲ್ಲರ್‌, ಡೆರ್‌ ಡುಸ್ಸೆನ್‌ ಆಫ್ರಿಕನ್ನರ ಬ್ಯಾಟಿಂಗ್‌ ಬಲವಾಗಿದ್ದಾರೆ. ಎನ್‌ಗಿಡಿ ಪ್ರಮುಖ ಬೌಲಿಂಗ್‌ ಅಸ್ತ್ರವಾಗಿದ್ದಾರೆ.

ಸಂಭವನೀಯ ಆಟಗಾರರ ಪಟ್ಟಿ:

ಭಾರತ: ಧವನ್‌, ರಾಹುಲ್‌(ನಾಯಕ), ಪಂತ್‌, ಶ್ರೇಯಸ್‌, ವೆಂಕಟೇಶ್‌/ಸೂರ್ಯಕುಮಾರ್‌, ಆರ್‌.ಅಶ್ವಿನ್‌, ಭುವನೇಶ್ವರ್‌, ದೀಪಕ್‌ ಚಹರ್‌/ಶಾರ್ದೂಲ್‌, ಬೂಮ್ರಾ, ಚಹಲ್‌

ದ.ಆಫ್ರಿಕಾ: ಮಾರ್ಕ್ರಮ್‌, ಡಿ ಕಾಕ್‌, ತೆಂಬಾ ಬವುಮಾ(ನಾಯಕ), ಡುಸ್ಸೆನ್‌, ಕೈಲ್‌ ವರೈನ್‌, ಮಿಲ್ಲರ್‌, ಫೆಹ್ಲಕ್ವೇವೊ, ಮಹಾರಾಜ್‌,ಸಿಸಾಂದ ಮಗಲ, ಲುಂಗಿ ಎನ್‌ಗಿಡಿ, ಶಮ್ಸಿ

ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಹಾಟ್‌ ಸ್ಟಾರ್‌

ಪಿಚ್‌ ರಿಪೋರ್ಟ್‌:

ಬೋಲ್ಯಾಂಡ್‌ ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ನೆರವಾಗಲಿದ್ದು, ದೊಡ್ಡ ರನ್‌ ದಾಖಲಾಗುವ ನಿರೀಕ್ಷೆಯಿದೆ. ಟಾಸ್‌ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್‌ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಚೇಸಿಂಗ್‌ ಮಾಡುವ ತಂಡಕ್ಕಿಂತ, ಮೊದಲು ಬ್ಯಾಟ್‌ ಮಾಡುವ ತಂಡಕ್ಕೆ ಪಿಚ್‌ ಹೆಚ್ಚು ನೆರವಾಗಲಿದೆ. ಅಂಗಳದಲ್ಲಿ ಇದುವರೆಗೂ 13 ಪಂದ್ಯಗಳಾಗಿದ್ದು, ಮೊದಲು ಬ್ಯಾಟ್‌ ಮಾಡಿದ 7 ತಂಡಗಳು ಜಯ ಸಾಧಿಸಿವೆ. ಸ್ಪಿನ್ನರ್‌ಗಳಿಗೂ ಅಂಗಳ ಹೆಚ್ಚು ನೆರವಾಗಲಿದೆ. 3 ಪಂದ್ಯಗಳಿಂದ 7 ವಿಕೆಟ್‌ ಉರುಳಿಸಿರುವ ಅನಿಲ್‌ ಕುಂಬ್ಳೆ ಈ ಅಂಗಳದಲ್ಲಿ ಹೆಚ್ಚು ವಿಕೆಟ್‌ ಪಡೆದ ಗೌರವಕ್ಕೆ ಪಾತ್ರರಾಗಿದ್ದಾರೆ.

ಮೊದಲ ಬಾರಿ ಏಕದಿನ ನಾಯಕತ್ವ

ರೋಹಿತ್‌ ಶರ್ಮಾ ಗಾಯಗೊಂಡಿರುವ ಕಾರಣ, ಟೀಂ ಇಂಡಿಯಾದ ಏಕದಿನ ಮತ್ತು ಟಿ-20 ತಂಡದ ಉಪನಾಯಕ ಕೆ.ಎಲ್‌.ರಾಹುಲ್‌ಗೆ ತಂಡವನ್ನು ಮುನ್ನಡೆಸುವ ಅವಕಾಶ ದೊರೆತಿದೆ. ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಏಕದಿನ ಸರಣಿಯನ್ನು ಮುನ್ನಡೆಸುವ ಅವಕಾಶ ರಾಹುಲ್‌ಗೆ ದೊರೆತಿದ್ದು, ಹೆಚ್ಚಿನ ನಿರೀಕ್ಷೆಯಿದೆ.
 

Follow Us:
Download App:
  • android
  • ios