Ind vs SA, Boxing Day Test: ಸೆಂಚೂರಿಯನ್ ಟೆಸ್ಟ್‌ ಗೆಲುವಿಗೆ ಟೀಂ ಇಂಡಿಯಾಗೆ ಬೇಕಿದೆ ಮೂರೇ ವಿಕೆಟ್..!

* ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಗೆಲುವಿನ ಹೊಸ್ತಿಲಲ್ಲಿದೆ ಟೀಂ ಇಂಡಿಯಾ

* 5ನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ 7 ವಿಕೆಟ್‌ ಕಳೆದುಕೊಂಡು 182 ರನ್ ಬಾರಿಸಿದ ದಕ್ಷಿಣ ಆಫ್ರಿಕಾ

* ಮೊದಲ ಟೆಸ್ಟ್ ಗೆಲ್ಲಲು ಭಾರತಕ್ಕೆ ಬೇಕಿದೆ ಕೇವಲ 3 ವಿಕೆಟ್

Ind vs SA Boxing Day Test Team India 3 Wickets away from first Test victory in Centurion kvn

ಸೆಂಚೂರಿಯನ್‌(ಡಿ.30): ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಲ್ಲಿ ಟೀಂ ಇಂಡಿಯಾ (Team India) ಗೆಲುವಿನತ್ತ ದಾಪುಗಾಲಿಡಲಾರಂಭಿಸಿದೆ. ಐದನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ ದಕ್ಷಿಣ ಆಫ್ರಿಕಾ ತಂಡವು (South Africa Cricket Team) 7 ವಿಕೆಟ್ ಕಳೆದುಕೊಂಡು 182 ರನ್‌ ಬಾರಿಸಿದೆ. ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಪಂದ್ಯ ಗೆಲ್ಲಲು ಹರಿಣಗಳ ಪಡೆಗೆ ಇನ್ನೂ 123 ರನ್‌ಗಳ ಅಗತ್ಯವಿದ್ದರೆ, ಭಾರತಕ್ಕೆ ಕೇವಲ 3 ವಿಕೆಟ್‌ಗಳ ಅವಶ್ಯಕತೆಯಿದೆ. ಕೊನೆಯ ದಿನದಾಟದ ಎರಡನೇ ಸೆಷನ್‌ ಒಳಗಾಗಿ ಫಲಿತಾಂಶ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.

ಇಲ್ಲಿನ ಸೂಪರ್ ಸ್ಪೋರ್ಟ್‌ ಮೈದಾನಲ್ಲಿ ಗೆಲ್ಲಲು 305 ರನ್‌ಗಳ ಕಠಿಣ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡವು ನಾಲ್ಕನೇ ದಿನದಾಟದಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 94 ರನ್‌ ಬಾರಿಸಿತ್ತು. ಐದನೇ ದಿನದಾಟವನ್ನು ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ಅತ್ಯಂತ ಎಚ್ಚರಿಕೆಯಿಂದ ಆರಂಭಿಸಿತು. ಐದನೇ ವಿಕೆಟ್‌ಗೆ ನಾಯಕ ಡೀನ್ ಎಲ್ಗಾರ್ (Dean Elgar) ಹಾಗೂ ತೆಂಬ ಬವುಮಾ (Temba Bavuma) ಜೋಡಿ 36 ರನ್‌ಗಳ ಜತೆಯಾಟವಾಡುವ ಮೂಲಕ ಕೆಲಕಾಲ ಭಾರತೀಯ ಬೌಲರ್‌ಗಳನ್ನು ಕಾಡಿದರು. ಆಕರ್ಷಕ ಅರ್ಧಶತಕ ಬಾರಿಸಿ, ಶತಕದತ್ತ ಮುನ್ನುಗ್ಗುತ್ತಿದ ಎಲ್ಗಾರ್ ಅವರನ್ನು ಬಲಿ ಪಡೆಯುವಲ್ಲಿ ವೇಗಿ ಜಸ್‌ಪ್ರೀತ್ ಬುಮ್ರಾ ಯಶಸ್ವಿಯಾದರು. ಡೀನ್‌ ಎಲ್ಗಾರ್ 156 ಎಸೆತಗಳನ್ನು ಎದುರಿಸಿ 12 ಬೌಂಡರಿ ಸಹಿತ 77 ರನ್‌ ಬಾರಿಸಿ ಎಲ್‌ಬಿ ಬಲೆಗೆ ಬಿದ್ದರು. 

ಇನ್ನು ಆರನೇ ವಿಕೆಟ್‌ಗೆ ತೆಂಬ ಬಹುಮಾ ಹಾಗೂ ವಿಕೆಟ್‌ ಕೀಪರ್‌ ಬ್ಯಾಟರ್‌ ಕ್ವಿಂಟನ್‌ ಡಿ ಕಾಕ್ (Quinton de Kock) ಕೆಲಕಾಲ ಚುರುಕಿನ ರನ್‌ ಗಳಿಸುವ ಮೂಲಕ ಗಮನ ಸೆಳೆದರು. 6ನೇ ವಿಕೆಟ್‌ಗೆ ಈ ಜೋಡಿ 31 ರನ್‌ಗಳ ಜತೆಯಾಟ ನಿಭಾಯಿಸಿತು. ಡಿ ಕಾಕ್‌ 28 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 21 ರನ್‌ ಬಾರಿಸಿ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಹೊರಹೋಗುತ್ತಿದ್ದ ಚೆಂಡನ್ನು ಮೈಮೇಲೆ ಎಳೆದುಕೊಂಡು ಬೌಲ್ಡ್‌ ಆಗಿ ಪೆವಿಲಿಯನ್‌ ಸೇರಿದರು. ಈ ವಿಕೆಟ್ ಪತನದ ಬೆನ್ನಲ್ಲೇ ವೇಗಿ ಶಮಿ, ದಕ್ಷಿಣ ಆಫ್ರಿಕಾದ ಮುಲ್ಡರ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು.

SA vs India Boxing Day Test : ಸೆಂಚುರಿಯನ್ ಟೆಸ್ಟ್ ನಲ್ಲಿ ಜಯದ ಸನಿಹ ಟೀಂ ಇಂಡಿಯಾ!

ನೆಲಕಚ್ಚಿ ಆಡುತ್ತಿರುವ ತೆಂಬ ಬವುಮಾ: ದಕ್ಷಿಣ ಆಫ್ರಿಕಾ ತಂಡದ ಅನುಭವಿ ಬ್ಯಾಟರ್ ತೆಂಬ ಬವುಮಾ, ಭಾರತೀಯ ಬೌಲರ್‌ಗಳೆದುರು ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಲು ಸೆಣಸುತ್ತಿದ್ದಾರೆ. ಒಟ್ಟು 78 ಎಸೆತಗಳನ್ನು ಎದುರಿಸಿರುವ ಬವುಮಾ 4 ಬೌಂಡರಿ ಸಹಿತ 34 ರನ್‌ ಬಾರಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಸದ್ಯ ಭಾರತ ಪರ ಜಸ್‌ಪ್ರೀತ್ ಬುಮ್ರಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಪಡೆದು ಮಿಂಚಿದ್ದಾರೆ. ಇನ್ನುಳಿದ ಮೂರು ವಿಕೆಟ್ ಯಾರ ಪಾಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಸಂಕ್ಷಿಪ್ತ ಸ್ಕೋರ್
ಭಾರತ: 327/10 & 174/10

ದಕ್ಷಿಣ ಆಫ್ರಿಕಾ: 197/10(ಮೊದಲ ಇನಿಂಗ್ಸ್‌) ಹಾಗೂ 187/7 (ಎರಡನೇ ಇನಿಂಗ್ಸ್‌)

(* 5ನೇ ದಿನದಾಟದ ಲಂಚ್ ಬ್ರೇಕ್‌ ವೇಳೆಗೆ)

 

 

Latest Videos
Follow Us:
Download App:
  • android
  • ios