IND vs SA ಸಂಜು ಸ್ಯಾಮ್ಸನ್ ದಿಟ್ಟ ಹೋರಾಟ, ಕೊನೆ ಕ್ಷಣದಲ್ಲಿ ಕೈತಪ್ಪಿದ ಗೆಲುವು!
ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಮುಗ್ಗರಿಸಿದೆ. ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟದಿಂದ ಟೀಂ ಇಂಡಿಯಾ ಗೆಲುವಿನ ಸನಿಹಕ್ಕೆ ಬಂದು ಸೋಲೋಪ್ಪಿಕೊಂಡಿತು.
ಲಖನೌ(ಅ.06): ಸೌತ್ ಆಫ್ರಿಕಾ ವಿರುದ್ದದ ಅಂತಿಮ ಟಿ20 ಪಂದ್ಯದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ ಇದೀಗ ಮೊದಲ ಏಕದಿನ ಪಂದ್ಯದಲ್ಲೂ ಸೋಲಿನ ಕಹಿ ಅನುಭವಿಸಿದೆ. ಹಿರಿಯರಿಗೆ ವಿಶ್ರಾಂತಿ, ಹಲವರ ಅಲಭ್ಯತೆ ಟೀಂ ಇಂಡಿಯಾಗೆ ಬಹುವಾಗಿ ಕಾಡಿದೆ. ಸಂಜು ಸ್ಯಾಮ್ಸನ್ ದಿಟ್ಟ ಹೋರಾಟದಿಂದ ಟೀಂ ಇಂಡಿಯಾ ಕೊನೆ ಕ್ಷಣದಲ್ಲಿ ಸೋಲಿಗೆ ಶರಣಾಯಿತು. ಅಂತಿಮ 6 ಎಸೆತದಲ್ಲಿ ಭಾರತದ ಗೆಲುವಿಗೆ 20 ರನ್ ಅವಶ್ಯಕತೆ ಇತ್ತು. 1 ಸಿಕ್ಸರ್ ಹಾಗೂ 4 ಬೌಂಡರಿ ಸಿಡಿಸಿದರು. ಇದರೊಂದಿಗೆ ಟೀಂ ಇಂಡಿಯಾ ಕೇವಲ 9 ರನ್‌ಗಳ ವಿರೋಚಿತ ಸೋಲು ಕಂಡಿತು. ಯುವಕರನ್ನೊಳಗೊಂಡ ಶಿಖರ್ ಧವನ್ ಸೈನ್ಯ, ಸೌತ್ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೋಲಿಗೆ ಗುರಿಯಾಗಿದೆ. ಟಿ20 ಸರಣಿ ಕೈಚೆಲ್ಲಿದ ಸೌತ್ ಆಫ್ರಿಕಾ ಇದೀಗ ಏಕದಿನದಲ್ಲಿ ಭರ್ಜರಿ ಶುಭಾರಂಭದೊಂದಿಗೆ ಟೀಂ ಇಂಡಿಯಾಗೆ ತಿರುಗೇಟು ನೀಡುವ ಸೂಚನೆ ನೀಡಿದೆ.
ಮಳೆಯಿಂದಾಗಿ ಪಂದ್ಯವನ್ನು 40 ಓವರ್‌ಗೆ ಕಡಿತಗೊಳಿಸಲಾಗಿತ್ತು. ಸೀಮಿತ ಓವರ್‌ನಲ್ಲಿ 250 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಾಯಕ ಶಿಖರ್ ಧವನ್ ಹಾಗೂ ಶುಭಮನ್ ಗಿಲ್ ಹೋರಾಟ ಹೆಚ್ಚು ಹೊತ್ತು ಇರಲಿಲ್ಲ. ಶಿಖರ್ ಧವನ್ ಕೇವಲ 4 ರನ್ ಸಿಡಿಸಿ ಔಟಾದರೆ, ಗಿಲ್ 3 ರನ್ ಸಿಡಿಸಿ ನಿರ್ಗಮಿಸಿದರು. 8 ರನ್‌ಗಳಿಸುವಷ್ಟರಲ್ಲೇ ಟೀಂ ಇಂಡಿಯಾ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿತು. ಏಕದಿನಕ್ಕೆ ಪದಾರ್ಪಣೆ ಮಾಡಿದ ರುತುರಾಜ್ ಗಾಯಕ್ವಾಡ್ 19 ರನ್ ಸಿಡಿಸಿ ನಿರ್ಗಮಿಸಿದರು. ಇಶಾನ್ ಕಿಶನ್ ಹೋರಾಟ 20 ರನ್‌ಗೆ ಅಂತ್ಯವಾಯಿತು.
51 ರನ್‌ಗಳಿಸುವಷ್ಟರಲ್ಲೇ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಶ್ರೇಯಸ್ ಅಯ್ಯರ್ ಹೋರಾಟದಿಂದ ಟೀಂ ಇಂಡಿಯಾ ಮತ್ತೆ ಟ್ರ್ಯಾಕ್‌ಗೆ ಮರಳಿತು. ಇತ್ತ ಸಂಜು ಸ್ಯಾಮ್ಸನ್ ಕೂಡ ಉತ್ತಮ ಸಾಥ್ ನೀಡಿದರು. ಅಯ್ಯರ್ ಹೋರಾಟದ ಮೂಲಕ ಅರ್ಧಶತಕ ಸಿಡಿಸಿ ಮಿಂಚಿದರು. 37 ಎಸೆತದಲ್ಲಿ ಅಯ್ಯರ್ 50 ರನ್ ಸಿಡಿಸಿ ಔಟಾದರು.
ಸಂಜು ಸ್ಯಾಮ್ಸನ್ ಹಾಗೂ ಶಾರ್ದೂಲ್ ಠಾಕೂರ್ ಜೊತೆಯಾಟ ಟೀಂ ಇಂಡಿಯಾ ಕೈಹಿಡಿಯಿತು. ಸ್ಯಾಮ್ಸನ್ ಹೋರಾಟ ಮುಂದುವರಿಸಿದರೆ, ಠಾಕೂರ್ 33 ರನ್ ಸಿಡಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಕುಲ್ದೀಪ್ ಯಾದವ್ ಹಾಗೂ ಆವೇಶ್ ಖಾನ್ ವಿಕೆಟ್ ಪತನಗೊಂಡಿತು. ಆದರೆ ಸ್ಯಾಮನ್ಸ್ ಏಕಾಂಗಿ ಹೋರಾಟ ನೀಡಿದರು. ಅರ್ಧಶಥಕ ಸಿಡಿಸಿ ಗೆಲುವಿಗಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದರು. ಭಾರತದ ಗೆಲುವಿಗೆ ಅಂತಿಮ 6 ಎಸೆತದಲ್ಲಿ 30 ರನ್ ಅವಶ್ಯಕತೆ ಇತ್ತು. ಕೇವಲ 2 ವಿಕೆಟ್ ಮಾತ್ರ ಉಳಿದಿತ್ತು.
ಸಂಜು ಸ್ಯಾಮ್ಸನ್ ಮೊದಲ ಎಸೆತ ಸಿಕ್ಸರ್ ಸಿಡಿಸಿದರು. ಬಳಿಕ ಸತತ 2 ಬೌಂಡರಿ ಸಿಡಿಸಿದ ಸ್ಯಾಮ್ಸನ್, 4ನೇ ಎಸೆತದಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ. 5ನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಸಿಡಿಸಿದರೆ, ಅಂತಿಮ ಎಸೆತದಲ್ಲಿ 1 ರನ್ ಸಿಡಿಸಿದರು. ಇದರೊಂದಿಗೆ ಅಂತಿಮ ಓವರ್‌ನಲ್ಲಿ 20 ರನ್ ಸಿಡಿಸಿದರು. ಈ ಮೂಲಕ ಸೌತ್ ಆಫ್ರಿಕಾ 9 ರನ್ ಗೆಲುವು ಕಂಡಿತು. ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.