Asianet Suvarna News Asianet Suvarna News

Ind vs SA T20I: ಬೆಂಗಳೂರು ಪಂದ್ಯದ ಟಿಕೆಟ್ ಹಣ 50% ವಾಪಾಸ್..!

* ಭಾರತ-ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯ ಮಳೆಯಿಂದ ರದ್ದು
* ನಿರ್ಣಾಯಕ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ
* ಪಂದ್ಯದ ಟಿಕೆಟ್‌ನ 50% ಹಣ ವಾಪಾಸು ನೀಡಲು ಕೆಎಸ್‌ಸಿಎ ನಿರ್ಧಾರ

IND vs SA 5th T20I KSCA announces 50 percent refund for ticket holders after rain washes out match kvn
Author
Bengaluru, First Published Jun 20, 2022, 8:46 AM IST

ಬೆಂಗಳೂರು(ಜೂ.20): ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ 5ನೇ ಹಾಗೂ ನಿರ್ಣಾಯಕ ಟಿ20 ಪಂದ್ಯ ಮಳೆಯಿಂದ ರದ್ದಾಗಿದ್ದರಿಂದಾಗಿ ಪ್ರೇಕ್ಷಕರಿಗೆ ಟಿಕೆಟ್ ಹಣದ ಶೇ.50ರಷ್ಟು ವಾಪಾಸ್ ನೀಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತೀರ್ಮಾನಿಸಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಕೊನೆಯ ಟಿ20 ಪಂದ್ಯದಲ್ಲಿ ಕೇವಲ 3.3 ಓವರ್‌ಗಳು ಮಾತ್ರ ನಡೆದಿತ್ತು. ಇದಾದ ಬಳಿಕ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದಾಗಿ ರದ್ದುಗೊಂಡಿತ್ತು. ಇದರ ಬೆನ್ನಲ್ಲೇ ಕೆಎಸ್‌ಸಿಎ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

ಪಂದ್ಯದ ಬಳಿಕ ಈ ಕುರಿತಂತೆ ಮಾಹಿತಿ ನೀಡಿದ ಕೆಎಸ್‌ಸಿಎ (KSCA) ಅಧಿಕಾರಿಗಳು 'ಸಾಮಾನ್ಯವಾಗಿ ಯಾವುದೇ ಪಂದ್ಯದಲ್ಲಿ ಒಂದು ಬಾಲ್ ಎಸೆದಿದ್ದರೂ ಟಿಕೆಟ್ ಹಣ ಪ್ರೇಕ್ಷಕರಿಗೆ ಹಿಂದಕ್ಕೆ ಕೊಡುವುದಿಲ್ಲ. ಆದರೆ ಬೆಂಗಳೂರಿನ ಕ್ರೀಡಾಭಿಮಾನಿಗಳಿಗೆ ಮಳೆಯಿಂದಾಗಿ ಈ ಪಂದ್ಯ ನಡೆಯದೇ ನಿರಾಸೆಯಾಗಿದೆ. ಹೀಗಾಗಿ ಪಂದ್ಯದ ಟಿಕೆಟ್ ಹಣದ ಅರ್ಧವನ್ನು ಹಿಂದಕ್ಕೆ ನೀಡುತ್ತೇವೆ. ಇದರ ಬಗ್ಗೆ ನಾವು ಶೀಘ್ರದಲ್ಲೇ ವೆಬ್‌ಸೈಟ್‌ನಲ್ಲಿ ಮಾಹಿತಿ ಒದಗಿಸುತ್ತೇವೆ ಎಂದು ತಿಳಿಸಿದ್ದಾರೆ.

ಕ್ರಿಕೆಟ್ ಪ್ರೇಮಿಗಳ ಸಂಭ್ರಮಕ್ಕೆ ಮಳೆ ತಣ್ಣೀರು..!

ನಾಸಿರ್ ಸಜಿಪ, ಕನ್ನಡಪ್ರಭ

ಕ್ರಿಕೆಟ್ ಎಂದರೇ ಹುಚ್ಚೆದ್ದು ಕುಣಿಯುವ ಬೆಂಗಳೂರಿನ ಕ್ರೀಡಾಭಿಮಾನಿಗಳು ದೀರ್ಘ ಸಮಯದ ಬಳಿಕ ಕ್ರಿಕೆಟ್ ಹಬ್ಬಕ್ಕೆ ಸಾಕ್ಷಿಯಾದರೂ ಅವರ ಆಸೆಗೆ ಮಳೆರಾಯ ತಣ್ಣೀರೆರಚಿತು. ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೂರು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಟಿ20 ಪಂದ್ಯ ನಿಗದಿಯಾಗಿತ್ತು. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 5ನೇ ಟಿ20 ಪಂದ್ಯ ಇಲ್ಲಿ ನಡೆಯಬೇಕಿತ್ತು. ಆದರೆ ಪದೇ ಪದೇ ಮಳೆ ಅಡ್ಡಿಪಡಿಸಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು.

ಮೊದಲಿಗೆ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಮಾಡಲು ತೀರ್ಮಾನಿಸಿತು. ಭಾರತ ಬ್ಯಾಟಿಂಗ್‌ಗೆ ಆಗಮಿಸಿದಾಗ ಮಳೆ ಅಡ್ಡಿಪಡಿಸಿತು. 15 ನಿಮಿಷಗಳ ಕಾಲ ಸುರಿದ ಮಳೆಯಿಂದಾಗಿ 7 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ 7.50ಕ್ಕೆ ಆರಂಭವಾಯಿತು. ಪಂದ್ಯವನ್ನು ತಲಾ 19 ಓವರ್‌ಗೆ ಇಳಿಸಲಾಯಿತು. ಆದರೆ 3.3 ಓವರ್‌ನಲ್ಲಿ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡು 28 ರನ್ ಗಳಿಸಿದ್ದಾಗ ಮತ್ತೆ ಮಳೆ ಅಡ್ಡಿ ಪಡಿಸಿತು. ಇದಾದ ಬಳಿಕ 9.35ಕ್ಕೆ ಪಂದ್ಯವನ್ನು ರದ್ದುಗೊಳಿಸಲಾಯಿತು.

IND vs SA ಭಾರತ-ಸೌತ್ ಆಫ್ರಿಕಾ ಬೆಂಗಳೂರು ಪಂದ್ಯ ಮಳೆಯಿಂದ ರದ್ದು, ಸರಣಿ ಹಂಚಿಕೆ!

5 ಪಂದ್ಯಗಳ ಸರಣಿಯಲ್ಲಿ 2-2ರ ಸಮಬಲ

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಯ ಪೈಕಿ ನವದೆಹಲಿ ಹಾಗೂ ಕಟಕ್‌ನಲ್ಲಿ ನಡೆದಿದ್ದ ಸರಣಿಯ ಆರಂಭಿಕ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವು ಗೆಲುವು ಸಾಧಿಸಿತ್ತು. ಇದಾದ ಬಳಿಕ ವಿಶಾಖಪಟ್ಟಣಂ, ರಾಜ್‌ಕೋಟ್‌ನಲ್ಲಿ ನಡೆದಿದ್ದ ಪಂದ್ಯಗಳನ್ನು ಗೆದ್ದ ರಿಷಭ್ ಪಂತ್ ಪಡೆ 2-2 ಅಂತರದಲ್ಲಿ ಸರಣಿ ಸಮಬಲ ಸಾಧಿಸಿತ್ತು. ಹೀಗಾಗಿ ಬೆಂಗಳೂರಿನ ಪಂದ್ಯ ಫೈನಲ್ ಎನಿಸಿಕೊಂಡಿತ್ತು. ಪಂದ್ಯ ರದ್ದಾಗಿದ್ದರಿಂದ 2-2ರಿಂದಲೇ ಸರಣಿ ಮುಕ್ತಾಯಗೊಂಡಿತ್ತು

Follow Us:
Download App:
  • android
  • ios