ಎರಡನೇ ಏಕದಿನ ಪಂದ್ಯದಲ್ಲಿ 278 ರನ್ ಬಾರಿಸಿದ ದಕ್ಷಿಣ ಆಫ್ರಿಕಾ ಭಾರತಕ್ಕೆ ಗೆಲ್ಲಲು ಸವಾಲಿನ ಗುರಿ ನೀಡಿದ ಹರಿಣಗಳುಆಕರ್ಷಕ ಅರ್ಧಶತಕ ಬಾರಿಸಿದ ಹೆಂಡ್ರಿಕ್ಸ್, ಮಾರ್ಕ್‌ರಮ್
ರಾಂಚಿ(ಅ.09): ಏಯ್ಡನ್ ಮಾರ್ಕ್‌ರಮ್(79), ರೀಜಾ ಹೆಂಡ್ರಿಕ್ಸ್(74) ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 7 ವಿಕೆಟ್ ಕಳೆದುಕೊಂಡು 278 ರನ್ ಬಾರಿಸಿದ್ದು, ಭಾರತಕ್ಕೆ ಗೆಲ್ಲಲು ಸವಾಲಿನ ಗುರಿ ನೀಡಿದೆ.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಕೇಶವ್ ಮಹರಾಜ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಮೂರನೇ ಓವರ್‌ನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಯಶಸ್ವಿಯಾದರು. ಡಿ ಕಾಕ್ ಕೇವಲ 5 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಇದಾದ ಬಳಿಕ ರೀಜಾ ಹೆಂಡ್ರಿಕ್ಸ್ ಹಾಗೂ ಮಲಾನ್ ಎರಡನೇ ವಿಕೆಟ್‌ಗೆ 33 ರನ್‌ಗಳ ಜತೆಯಾಟ ನಿಭಾಯಿಸಿದರು.
ಹೆಂಡ್ರಿಕ್ಸ್-ಮಾರ್ಕ್‌ರಮ್ ಜುಗಲ್ಬಂದಿ: ಕೇವಲ 40 ರನ್‌ಗಳಿಸುವಷ್ಟರಲ್ಲಿ ದಕ್ಷಿಣ ಆಫ್ರಿಕಾದ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದರು. ಈ ವೇಳೆ ಮೂರನೇ ವಿಕೆಟ್‌ಗೆ ಜತೆಯಾದ ಏಯ್ಡನ್ ಮಾರ್ಕ್‌ರಮ್ ಹಾಗೂ ರೀಜಾ ಹೆಂಡ್ರಿಕ್ಸ್ 129 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ರೀಜಾ ಹೆಂಡ್ರಿಕ್ಸ್ 76 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 74 ರನ್ ಬಾರಿಸಿ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಮಾರ್ಕ್‌ರಮ್ 89 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 79 ರನ್ ಬಾರಿಸಿ ವಾಷಿಂಗ್ಟನ್ ಸುಂದರ್‌ಗೆ ವಿಕೆಟ್ ಒಪ್ಪಿಸಿದರು.
ಇನ್ನು ಕಳೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ್ದ ಹೆನ್ರಿಚ್ ಕ್ಲಾಸೆನ್ 30 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಡೇವಿಡ್ ಮಿಲ್ಲರ್ ಅಜೇಯ 35 ರನ್ ಗಳಿಸಿದರು. ವೇಯ್ನ್ ಪಾರ್ನೆಲ್ 16 ರನ್‌ಗಳ ಕಾಣಿಕೆ ನೀಡಿದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ: 278/7
ಏಯ್ಡನ್ ಮಾರ್ಕ್‌ರಮ್: 79
ರೀಜಾ ಹೆಂಡ್ರಿಕ್ಸ್: 74
ಮೊಹಮ್ಮದ್ ಸಿರಾಜ್: 38/3
(* ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಮುಕ್ತಾಯದ ವೇಳೆಗೆ)
ಭಾರತ ಪರ ಶಿಸ್ತುಬದ್ದ ದಾಳಿ ನಡೆಸಿದ ಮೊಹಮ್ಮದ್ ಸಿರಾಜ್ ಕೇವಲ 38 ರನ್ ನೀಡಿ 3 ವಿಕೆಟ್ ಪಡೆದರೆ, ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಶೆಹಬಾಜ್ ಅಹಮದ್, ವಾಷಿಂಗ್ಟನ್ ಸುಂದರ್ ಹಾಗೂ ಕುಲ್ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.
