ಕಾಮನ್‍ವೆಲ್ತ್ ಗೇಮ್ಸ್ ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ಮೊದಲ ಗೆಲುವಿನ ಸಿಹಿ ಕಂಡಿದೆ. ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದೆ. 

ಬರ್ಮಿಂಗ್‌ಹ್ಯಾಮ್(ಜು.31): ಕಾಮನ್‌ವೆಲ್ತ್ ಗೇಮ್ಸ್ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಗೆಲುವಿನ ಹಳಿಗೆ ಮರಳಿದೆ. ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಭಾರತ ಇದೀಗ ಬದ್ಧವೈರಿ ಪಾಕಿಸ್ತಾನ ವಿರುದ್ಧ 8 ವಿಕೆಟ್ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಭಾರತ ಮಹಿಳಾ ತಂಡ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಜೀವಂತವಾಗಿದೆ. ಆದರೆ ಸತತ ಎರಡು ಸೋಲು ಕಂಡಿರುವ ಪಾಕಿಸ್ತಾನ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಈ ಮೂಲಕ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದೆ. ಮಳೆಯಿಂದಾಗಿ ಪಂದ್ಯ ವಿಳಂಬವಾಗಿ ಆರಂಭಗೊಂಡಿತ್ತು. ಹೀಗಾಗಿ 18 ಓವರ್‌ಗಳಿಗೆ ಪಂದ್ಯ ಸೀಮಿತಗೊಳಿಸಲಾಗಿತ್ತು. 18 ಓವರ್‌ನಲ್ಲಿ ಪಾಕಿಸ್ತಾನ 99 ರನ್ ಸಿಡಿಸಿ ಆಲೌಟ್ ಆಗಿತ್ತು. 100 ರನ್ ಟಾರ್ಗೆಟ್ ಪಡೆದ ಭಾರತ ಮಹಿಳಾ ತಂಡ ಉತ್ತಮ ಆರಂಭ ಪಡೆಯಿತು. ಶೆಫಾಲಿ ವರ್ಮಾ ಹಾಗೂ ಸ್ಮೃತಿ ಮಂದನಾ ಮೊದಲ ವಿಕೆಟ್‌ಗೆ 61 ರನ್ ಜೊತೆಯಾಟ ನೀಡಿದರು. ಶೆಫಾಲಿ 16 ರನ್ ಸಿಡಿಸಿ ಔಟಾದರು. ಆದರೆ ಸ್ಮೃತಿ ಮಂದಾನ ಹೋರಾಟ ಮುಂದುವರಿಸಿದರು. ಆಕರ್ಷಕ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.

ಮಂದನಾ ಜೊತೆ ಮೇಘಾನ ಕೂಡ ಉತ್ತಮ ಹೋರಾಟ ನೀಡಿದರು. ಈ ಮೂಲಕ ಭಾರತದ ಗೆಲುವು ಸುಗಮಗೊಂಡಿತು. ಆದರೆ ಅಂತಿಮ ಹಂತದಲ್ಲಿ ಮೆಘನಾ 14 ರನ್ ಸಿಡಿಸಿ ಔಟಾದರು. ರೋಡ್ರಿಗಸ್ ಜೊತೆ ಸೇರಿದ ಮಂದನಾ ಭಾರತದ ಗೆಲುವು ಖಚಿತಪಡಿಸಿದರು. 11.4 ಓವರ್‌ಗಳಲ್ಲಿ ಭಾರತ ಮಹಿಳಾ ತಂಡ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಸ್ಮೃತಿ ಮಂದನಾ ಅಜೇಯ63 ರನ್ ಸಿಡಿಸಿದರು. 8 ವಿಕೆಟ್ ಗೆಲುವು ದಾಖಲಿಸಿದೆ ಭಾರತ ಮಹಿಳಾ ತಂಡ ಕಾಮನ್‌ವೆಲ್ತ್ ಗೇಮ್ಸ್ ಟೂರ್ನಿಯಲ್ಲಿ ಸ್ಥಾನ ಉಳಿಸಿಕೊಂಡಿದೆ. 

Commonwealth Games: ಭಾರತ ಮಹಿಳಾ ತಂಡಕ್ಕೆ ಸೋಲು

ಪಾಕಿಸ್ತಾನ ಇನ್ನಿಂಗ್ಸ್
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಜಾವೇದ್ ಡಕೌಟ್ ಆದರೆ, ನಾಯಕಿ ಮಾರೂಫ್ 17 ರನ್ ಸಿಡಿಸಿದರು. ಮುನೀಬಾ ಆಲಿ 32 ರನ್ ಸಿಡಿಸಿ ಔಟಾದರು. ಓಮೈಮಾ ಸೊಹೈಲ್ 10 ರನ್ ಸಿಡಿಸಿ ಔಟಾದರು. ಆಯೇಶಾ ನಸೀಮ್ 10 ರನ್ ಸಿಡಿಸಿ ಔಟಾದರು. ಅಲಿಯಾ ರಿಯಾಜ್ 18 ರನ್ ಕಾಣಿಕೆ ನೀಡಿದರು. ಫಾತಿಮಾ ಸನಾ 8 ರನ್ ಕಾಣಿಕೆ ನೀಡಿದರು. ಇಮ್ತಿಯಾಜ್ 2 ರನ್, ದಿಯಾನ ಬಾಗ್ ಡಕೌಟ್ ಆದರು. ತುಬಾ ಹಸನ್ ಕೇವಲ 1 ರನ್ ಸಿಡಿಸಿ ಔಟಾದರು. ಈ ಮೂಲಕ ಪಾಕಿಸ್ತಾನ ಮಹಿಳಾ ತಂಡ 18 ಓವರ್‌ಗಳಲ್ಲಿ 99 ರನ್‌ಗೆ ಆಲೌಟ್ ಆಯಿತು. ಭಾರತದ ರೇಣುಕಾ ಸಿಂಗ್ 1 ವಿಕೆಟ್ ಕಬಳಿಸಿದರೆ. ಮೇಘನಾ ಸಿಂಗ್ 1, ಸ್ನೇಹಾ ರಾಣಾ 2, ರಾಧಾ ಯಾದವ್ 2 ಹಾಗೂ ಶೆಫಾಲಿ ವರ್ಮಾ 1 ವಿಕೆಟ್ ಕಬಳಿಸಿ ಮಿಂಚಿದರು.