Asianet Suvarna News Asianet Suvarna News

Ind vs NZ Mumbai Test: ಭಾರತದ ಬಿಗಿ ಹಿಡಿತದಲ್ಲಿ ಕಿವೀಸ್‌..!

* ಮುಂಬೈ ಟೆಸ್ಟ್‌ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ತೋರಿದ ಟೀಂ ಇಂಡಿಯಾ

* ಎರಡನೇ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 332 ರನ್‌ಗಳ ಮುನ್ನಡೆ

  * 10 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ ಸ್ಪಿನ್ನರ್ ಅಜಾಜ್ ಪಟೇಲ್

Ind vs NZ Team India lead by 332 after Ajaz Patel historic 10 wicket haul in Mumbai Test kvn
Author
Bengaluru, First Published Dec 4, 2021, 6:16 PM IST

ಮುಂಬೈ(ಡಿ.04): ಅಜಾಜ್‌ ಪಟೇಲ್ (Ajaz Patel) ಐತಿಹಾಸಿಕ 10 ಟೆಸ್ಟ್‌ ವಿಕೆಟ್‌ ಕಬಳಿಸಿದ ಹೊರತಾಗಿಯೂ ಮುಂಬೈ ಟೆಸ್ಟ್‌ (Mumbai Test) ಪಂದ್ಯದ ಎರಡನೇ ದಿನದಲ್ಲೇ ಟೀಂ ಇಂಡಿಯಾ (Team India) ಪ್ರವಾಸಿ ನ್ಯೂಜಿಲೆಂಡ್ ಎದುರು ಹಿಡಿತ ಸಾಧಿಸಿದೆ. ಮೊದಲ ಇನಿಂಗ್ಸ್‌ನಲ್ಲಿ 325 ರನ್‌ಗಳಿಗೆ ಆಲೌಟ್ ಆದ ಟೀಂ ಇಂಡಿಯಾ ಬಳಿಕ ಕಿವೀಸ್‌ ತಂಡವನ್ನು ಕೇವಲ 62 ರನ್‌ಗಳಿಗೆ ಆಲೌಟ್ ಮಾಡಿತು. ಫಾಲೋ ಆನ್ ಹೇರಲು ಅವಕಾಶವಿದ್ದರೂ ಸಹ ನಾಯಕ ವಿರಾಟ್ ಕೊಹ್ಲಿ (Virat Kohli) ಎರಡನೇ ಇನಿಂಗ್ಸ್‌ ಬ್ಯಾಟಿಂಗ್ ಮಾಡಲು ತೀರ್ಮಾನಿಸಿದರು. ಎರಡನೇ ದಿನದಾಟದಂತ್ಯದ ವೇಳೆಗೆ ಭಾರತ ವಿಕೆಟ್‌ ನಷ್ಟವಿಲ್ಲದೇ 69 ರನ್‌ ಬಾರಿಸಿದ್ದು, ಒಟ್ಟಾರೆ 332 ರನ್‌ಗಳ ಮುನ್ನಡೆ ಸಾಧಿಸಿದೆ. 

ಇಲ್ಲಿನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ದಿನ ಟೀಂ ಇಂಡಿಯಾ ಅಮೋಘ ಪ್ರದರ್ಶನ ತೋರುವ ಮೂಲಕ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ. 221 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಎರಡನೇ ದಿನದಾಟ ಆರಂಭಿಸಿದ ಭಾರತ ತಂಡ ಆರಂಭದಲ್ಲೇ ವೃದ್ದಿಮಾನ್ ಸಾಹ ಹಾಗೂ ರವಿಚಂದ್ರನ್ ಅಶ್ವಿನ್ (Ravichandran Ashwin) ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ 7ನೇ ವಿಕೆಟ್‌ಗೆ ಮಯಾಂಕ್‌ ಅಗರ್‌ವಾಲ್ (Mayank Agarwal) ಹಾಗೂ ಅಕ್ಷರ್ ಪಟೇಲ್ (Axar Patel) ಜೋಡಿ 67 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

ಮೊದಲ ದಿನದಾಟದಲ್ಲೇ ಶತಕ ಬಾರಿಸಿ ಮಿಂಚಿದ್ದ ಮಯಾಂಕ್ ಅಗರ್‌ವಾಲ್ 150 ರನ್‌ ಬಾರಿಸಿ ಅಜಾಜ್ ಪಟೇಲ್‌ಗೆ ವಿಕೆಟ್‌ ಒಪ್ಪಿಸಿದರು. ಈ ಮೂಲಕ ಸುನಿಲ್ ಗವಾಸ್ಕರ್ ಬಳಿಕ ವಾಂಖೆಡೆ ಮೈದಾನದಲ್ಲಿ 150+ ರನ್ ಬಾರಿಸಿದ ಎರಡನೇ ಆರಂಭಿಕ ಬ್ಯಾಟರ್‌ ಎನ್ನುವ ಗೌರವಕ್ಕೆ ಮಯಾಂಕ್ ಅಗರ್‌ವಾಲ್ ಪಾತ್ರರಾದರು. ಇನ್ನು ಅಕ್ಷರ್ ಪಟೇಲ್‌ ಟೆಸ್ಟ್‌ ವೃತ್ತಿಜೀವನದ ಮೊದಲ ಅರ್ಧಶತಕ ಬಾರಿಸಿ ಸಂಭ್ರಮಿಸಿದರು. ಅಜಾಜ್ ಪಟೇಲ್ ಮಾರಕ ದಾಳಿಗೆ ತತ್ತರಿಸಿ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 325 ರನ್‌ಗಳಿಗೆ ಸರ್ವಪತನ ಕಂಡಿತು.

ಅಜಾಜ್ ಪಟೇಲ್‌ಗೆ ಒಲಿದ ಐತಿಹಾಸಿಕ 10 ವಿಕೆಟ್‌ಗಳ ಗೊಂಚಲು: ಎಡಗೈ ಸ್ಪಿನ್ನರ್ ಅಜಾಜ್‌ ಪಟೇಲ್‌ ಭಾರತ ವಿರುದ್ದ ಮೊದಲ ಇನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ ಕಬಳಿಸುವ ಮೂಲಕ ಜಿಮ್‌ ಲೇಕರ್, ಅನಿಲ್ ಕುಂಬ್ಳೆ ಬಳಿಕ ಈ ಸಾಧನೆ ಮಾಡಿದ ಮೂರನೇ ಬೌಲರ್ ಎನ್ನುವ ಕೀರ್ತಿಗೆ ಪಾತ್ರರಾದರು. ಒಟ್ಟು 47.5 ಓವರ್‌ ಬೌಲಿಂಗ್‌ ಮಾಡಿ 12 ಮೇಡನ್ ಓವರ್ ಸಹಿತ 119 ರನ್‌ ನೀಡಿ 10 ವಿಕೆಟ್ ಉರುಳಿಸಿದರು.

Ajaz Patel Create History: 10 ವಿಕೆಟ್‌ ಕ್ಲಬ್‌ಗೆ ಅಜಾಜ್ ಸ್ವಾಗತಿಸಿದ ಅನಿಲ್ ಕುಂಬ್ಳೆ

ಭಾರತದ ಭರ್ಜರಿ ತಿರುಗೇಟು: ಭಾರತವನ್ನು ಆಲೌಟ್‌ ಮಾಡಿ ಮೊದಲ ಇನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್ ತಂಡಕ್ಕೆ ಟೀಂ ಇಂಡಿಯಾ ವೇಗಿ ಮೊಹಮ್ಮದ್‌ ಸಿರಾಜ್ ಮಾರಕ ದಾಳಿಯ ಮೂಲಕ ಶಾಕ್ ನೀಡಿದರು. ಕಳೆದ ಟೆಸ್ಟ್‌ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ್ದ ವಿಲ್ ಯಂಗ್ ಹಾಗೂ ಟಾಮ್ ಲೇಥಮ್ ಅವರನ್ನು ಆರಂಭದಲ್ಲೇ ಪೆಲಿಯನ್ನಿಗಟ್ಟಿದರು. ಇನ್ನು ಅನುಭವಿ ಬ್ಯಾಟರ್‌ ರಾಸ್ ಟೇಲರ್ ಆಟ ಕೇವಲ 1 ರನ್‌ಗಳಿಗೆ ಸೀಮಿತವಾಯಿತು.
ಇನ್ನು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲು ರವಿಚಂದ್ರನ್ ಅಶ್ವಿನ್‌, ಅಕ್ಷರ್ ಪಟೇಲ್ ಹಾಗೂ ಜಯಂತ್ ಯಾದವ್ ಅವಕಾಶ ನೀಡಲಿಲ್ಲ. ಅಶ್ವಿನ್ ಕೇವಲ 8 ರನ್ ನೀಡಿ 4 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 2 ಹಾಗೂ ಜಯಂತ್ ಯಾದವ್ ಒಂದು ವಿಕೆಟ್ ಪಡೆದರು. ಅಂತಿಮವಾಗಿ ನ್ಯೂಜಿಲೆಂಡ್ ತಂಡವು ಕೇವಲ 62 ರನ್‌ಗಳಿಗೆ ಆಲೌಟ್‌ ಆಯಿತು. ಟಾಮ್ ಲೇಥಮ್(10) ಹಾಗೂ ಕೈಲ್ ಜೇಮಿಸನ್(17) ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಲು ಸಫಲರಾಗಲಿಲ್ಲ.

ಇನ್ನು 263 ರನ್‌ಗಳ ಮೊದಲ ಇನಿಂಗ್ಸ್‌ ಬೃಹತ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಟೀಂ ಇಂಡಿಯಾಗೆ ಮಯಾಂಕ್‌ ಅಗರ್‌ವಾಲ್ ಹಾಗೂ ಚೇತೇಶ್ವರ್ ಪೂಜಾರ ಉತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ. ಎರಡನೇ ದಿನದಾಟದಲ್ಲಿ ಕ್ಷೇತ್ರರಕ್ಷಣೆ ಮಾಡುವ ವೇಳೆ ಶುಭ್‌ಮನ್‌ ಗಿಲ್ ಕೈಗೆ ಚೆಂಡು ಬಡಿದಿದ್ದರಿಂದ ಆರಂಭಿಕನಾಗಿ ಕಣಕ್ಕಿಳಿಯಲಿಲ್ಲ. ಹೀಗಾಗಿ ಅಗರ್‌ವಾಲ್ ಜತೆ ಪೂಜಾರ ಇನಿಂಗ್ಸ್‌ ಆರಂಭಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ ಮುರಿಯದ 69 ರನ್‌ಗಳ ಜತೆಯಾಟವಾಡಿದೆ. ಇದರೊಂದಿಗೆ ಭಾರತ ಬೃಹತ್ ಮುನ್ನಡೆಯತ್ತ ದಾಪುಗಾಲು ಇಡಲಾರಂಭಿಸಿದೆ. ಮಯಾಂಕ್ ಅಗರ್‌ವಾಲ್‌ 38 ಹಾಗೂ ಚೇತೇಶ್ವರ್ ಪೂಜಾರ 29 ರನ್ ಬಾರಿಸಿ ಮೂರನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಭಾರತ: 325/10
ಮಯಾಂಕ್ ಅಗರ್‌ವಾಲ್: 150
ಅಜಾಜ್ ಪಟೇಲ್: 119/10

ನ್ಯೂಜಿಲೆಂಡ್: 62/10
ಕೈಲ್ ಜೇಮಿಸನ್: 17
ರವಿಚಂದ್ರನ್ ಅಶ್ವಿನ್: 8/4

ಭಾರತ: 69/0 (ಎರಡನೇ ಇನಿಂಗ್ಸ್‌)
ಮಯಾಂಕ್‌ ಅಗರ್‌ವಾಲ್: 38
ಚೇತೇಶ್ವರ್ ಪೂಜಾರ: 29

(* ಎರಡನೇ ದಿನದಾಟದ ಮುಕ್ತಾಯದ ವೇಳೆಗೆ)
 

Follow Us:
Download App:
  • android
  • ios