Asianet Suvarna News Asianet Suvarna News

Ajaz Patel Create History: 10 ವಿಕೆಟ್‌ ಕ್ಲಬ್‌ಗೆ ಅಜಾಜ್ ಸ್ವಾಗತಿಸಿದ ಅನಿಲ್ ಕುಂಬ್ಳೆ

* ಭಾರತ ವಿರುದ್ದ 10 ವಿಕೆಟ್‌ ಕಬಳಿಸಿ ಇತಿಹಾಸ ನಿರ್ಮಿಸಿದ ಅಜಾಜ್ ಪಟೇಲ್‌

* ಜಿಮ್ ಲೇಕರ್, ಅನಿಲ್ ಕುಂಬ್ಳೆ ಕ್ಲಬ್ ಸೇರಿದ ಕಿವೀಸ್ ಸ್ಪಿನ್ನರ್

* ಅಜಾಜ್ ಪಟೇಲ್ ಸಾಧನೆಗೆ ಹರಿದು ಬಂತು ಅಭಿನಂದನೆಗಳ ಮಹಾಪೂರ

Ind vs NZ Cricket Legend Anil Kumble hails Ajaz Patel 10-wicket haul and Welcome to the club kvn
Author
Bengaluru, First Published Dec 4, 2021, 5:19 PM IST

ಬೆಂಗಳೂರು(ಡಿ.04): ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಮುಂಬೈ ಟೆಸ್ಟ್‌ (Mumbai Test) ಪಂದ್ಯದಲ್ಲಿ ಕಿವೀಸ್‌ ಸ್ಪಿನ್ನರ್‌ ಅಜಾಜ್‌ ಪಟೇಲ್‌ (Ajaz Patel) ಮೊದಲ ಇನಿಂಗ್ಸ್‌ನಲ್ಲಿ ಭಾರತದ ಎಲ್ಲಾ 10 ವಿಕೆಟ್ ಕಬಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅಜಾಜ್ ಪಟೇಲ್ ಅವರ ಪ್ರದರ್ಶನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಟೀಂ ಇಂಡಿಯಾ (Team India) ದಿಗ್ಗಜ ಕ್ರಿಕೆಟಿಗ ಹಾಗೂ ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್‌ ಗಳಿಸಿದ ಎರಡನೇ ಬೌಲರ್ ಎನ್ನುವ ದಾಖಲೆ ಬರೆದಿರುವ ಅನಿಲ್‌ ಕುಂಬ್ಳೆ (Anil Kumble), ಪ್ರತಿಷ್ಠಿತ 10 ವಿಕೆಟ್ ಕ್ಲಬ್‌ಗೆ ಅಜಾಜ್ ಪಟೇಲ್‌ರನ್ನು ಸ್ವಾಗತಿಸಿದ್ದಾರೆ.

ಈ ಮೊದಲು ಟೆಸ್ಟ್‌ ಕ್ರಿಕೆಟ್‌ನಲ್ಲಿ (Test Cricket) ಇಂಗ್ಲೆಂಡ್‌ನ ಜಿಮ್‌ ಲೇಕರ್ (Jim Laker) ಹಾಗೂ ಅನಿಲ್‌ ಕುಂಬ್ಳೆ ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್‌ ಕಬಳಿಸಿದ ಅಪರೂಪದ ದಾಖಲೆ ಬರೆದಿದ್ದರು. ಇದೀಗ ಈ ಪ್ರತಿಷ್ಠಿತ ಕ್ಲಬ್‌ಗೆ ಅಜಾಜ್ ಪಟೇಲ್‌ ಸೇರ್ಪಡೆಯಾಗಿದ್ದಾರೆ. ಮುಂಬೈ ಮೂಲದ ನ್ಯೂಜಿಲೆಂಡ್ ಎಡಗೈ ಸ್ಪಿನ್ನರ್‌, ಭಾರತದ ಬ್ಯಾಟರ್‌ಗಳ ಮೇಲೆ ಸವಾರಿ ನಡೆಸಿದರು. ಮೊದಲ ದಿನದಾಟದಲ್ಲೇ 4 ವಿಕೆಟ್‌ ಕಬಳಿಸಿದ್ದ ಅಜಾಜ್ ಪಟೇಲ್‌, ಎರಡನೇ ದಿನದಾಟದಲ್ಲಿ ಇನ್ನುಳಿದ 6 ವಿಕೆಟ್ ಕಬಳಿಸುವ ಮೂಲಕ ಅಪರೂಪದ ದಾಖಲೆ ಬರೆದಿದ್ದಾರೆ. ಒಟ್ಟು 119 ರನ್‌ ನೀಡಿ ಭಾರತದ 10 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಅಜಾಜ್‌ ಪಟೇಲ್‌ 10 ವಿಕೆಟ್ ಕಬಳಿಸುತ್ತಿದ್ದಂತೆಯೇ ಟ್ವೀಟ್‌ ಮಾಡಿದ ಅನಿಲ್ ಕುಂಬ್ಳೆ, 10 ವಿಕೆಟ್‌ಗಳ ಕ್ಲಬ್‌ಗೆ ಸ್ವಾಗತ. ಮೊದಲ ದಿನ ಹಾಗೂ ಎರಡನೇ ದಿನದಲ್ಲಿ ಅದ್ಭುತ ಪ್ರದರ್ಶನ ತೋರಿದ್ದರಿಂದ ಈ ಸಾಧನೆ ನಿರ್ಮಾಣವಾಗಿದೆ ಎಂದು ದಿಗ್ಗಜ ಲೆಗ್‌ ಸ್ಪಿನ್ನರ್‌ ಟ್ವೀಟ್‌ ಮಾಡಿದ್ದಾರೆ.

ಟೀಂ ಇಂಡಿಯಾ ಲೆಗ್ ಸ್ಪಿನ್ನರ್ ಅನಿಲ್‌ ಕುಂಬ್ಳೆ, 1999ರಲ್ಲಿ ದೆಹಲಿಯ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ಪಾಕಿಸ್ತಾನ ವಿರುದ್ದ ನಡೆದ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 10 ವಿಕೆಟ್‌ ಕಬಳಿಸುವ ಮೂಲಕ ಜಿಮ್ ಲೇಕರ್ ದಾಖಲೆ ಸರಿಗಟ್ಟಿದ್ದರು. ಇದಕ್ಕೂ ಮೊದಲು 1956ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಆಷಸ್ ಸರಣಿಯ 4ನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಇಂಗ್ಲೆಂಡ್‌ನ ಆಫ್‌ ಸ್ಪಿನ್ನರ್ ಜಿಮ್‌ ಲೇಕರ್ 10 ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ್ದರು. ಇದೇ ಪಂದ್ಯದಲ್ಲಿ ಜಿಮ್‌ ಲೇಕರ್ 19 ವಿಕೆಟ್ ಕಬಳಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್ ಕಬಳಿಸಿದ್ದ ಜಿಮ್‌, ಎರಡನೇ ಇನಿಂಗ್ಸ್‌ನಲ್ಲಿ 10 ವಿಕೆಟ್‌ಗಳ ಗೊಂಚಲು ಪಡೆದಿದ್ದರು.

Ajaz Patel Pics 10 Wickets: ಇತಿಹಾಸ ಬರೆದ ಭಾರತ ಮೂಲದ ಕಿವೀಸ್‌ ಸ್ಪಿನ್ನರ್

ಜಿಮ್‌ ಲೇಕರ್ ಹಾಗೂ ಅನಿಲ್‌ ಕುಂಬ್ಳೆ ತವರಿನಲ್ಲಿ(ತಾವಾಡುವ ದೇಶದಲ್ಲಿ) 10 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು. ಆದರೆ ಅಜಾಜ್ ಪಟೇಲ್‌ ತವರಿನಾಚೆ(ಮುಂಬೈನಲ್ಲಿ ಜನಿಸಿದ್ದರೂ ಕಿವೀಸ್ ತಂಡವನ್ನು ಪ್ರತಿನಿಧಿಸುತ್ತಿರುವುದರಿಂದ) 10 ವಿಕೆಟ್ ಕಬಳಿಸಿದ ಅಪರೂಪದ ಸಾಧನೆ ಮಾಡಿದ್ದಾರೆ. ಅಜಾಜ್ ಪಟೇಲ್ ಸಾಧನೆಗೆ ಕೇವಲ ಅನಿಲ್‌ ಕುಂಬ್ಳೆ ಮಾತ್ರವಲ್ಲದೇ, ಹಲವು ಹಿರಿ-ಕಿರಿಯ ಕ್ರಿಕೆಟಿಗರು ಟ್ವೀಟ್‌ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ, ವಿರೇಂದ್ರ ಸೆಹ್ವಾಗ್, ವಾಸೀಂ ಜಾಫರ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಶಾರ್ದೂಲ್ ಠಾಕೂರ್ ಸೇರಿದಂತೆ ಹಲವು ಕ್ರಿಕೆಟಿಗರು ಟ್ವೀಟ್‌ ಮೂಲಕ ಅಜಾಜ್‌ ಪಟೇಲ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.  

Follow Us:
Download App:
  • android
  • ios