ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ರನ್ ಮಳೆ ಹರಿಸಿದ ಟೀಂ ಇಂಡಿಯಾ ಬ್ಯಾಟರ್‌ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಆಕರ್ಷಕ ಫಿಫ್ಟಿಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿ ಗಮನ ಸೆಳೆದ ವಾಷಿಂಗ್ಟನ್ ಸುಂದರ್
ಆಕ್ಲೆಂಡ್(ನ.25): ಆರಂಭಿಕ ಬ್ಯಾಟರ್ ಶಿಖರ್ ಧವನ್(72), ಶುಭ್‌ಮನ್ ಗಿಲ್(50) ಹಾಗೂ ಶ್ರೇಯಸ್ ಅಯ್ಯರ್(80) ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್ ಕಳೆದುಕೊಂಡು 306 ರನ್ ಬಾರಿಸಿದ್ದು, ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು ಕಠಿಣ ಗುರಿ ನೀಡಿದೆ.
ಇಲ್ಲಿನ ಈಡನ್ ಪಾರ್ಕ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಭಾರತ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ನಾಯಕ ಶಿಖರ್ ಧವನ್ ಹಾಗೂ ಶುಭ್‌ಮನ್ ಗಿಲ್ ಶತಕದ ಜತೆಯಾಟವಾಡುವ ಮೂಲಕ ಭರ್ಜರಿ ಅಡಿಪಾಯವನ್ನೇ ಹಾಕಿಕೊಟ್ಟರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಈ ಜೋಡಿ, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಮೊದಲ 23 ಓವರ್‌ಗಳವರೆಗೆ ಭಾರತದ ಈ ಜೋಡಿ ಅನಾಯಾಸವಾಗಿ ಬ್ಯಾಟ್ ಬೀಸುವ ಮೂಲಕ ಕಿವೀಸ್ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ವೇಗಿ ಲಾಕಿ ಫರ್ಗ್ಯೂಸನ್ ಯಶಸ್ವಿಯಾದರು. ಶುಭ್‌ಮನ್ ಗಿಲ್ 65 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 50 ರನ್ ಬಾರಿಸಿ ಫರ್ಗ್ಯೂಸನ್‌ಗೆ ವಿಕೆಟ್ ಒಪ್ಪಿಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಗಿಲ್ ಬಾರಿಸಿದ ನಾಲ್ಕನೇ ಏಕದಿನ ಅರ್ಧಶತಕ ಎನಿಸಿಕೊಂಡಿತು. ಇನ್ನು ಮತ್ತೊಂದು ತುದಿಯಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ 77 ಎಸೆತಗಳನ್ನು ಎದುರಿಸಿ 13 ಬೌಂಡರಿ ಸಹಿತ 72 ರನ್ ಬಾರಿಸಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು. ಇದು ಟಿಮ್ ಸೌಥಿ ಏಕದಿನ ಕ್ರಿಕೆಟ್‌ನಲ್ಲಿ ಕಬಳಿಸಿದ ಇನ್ನೂರನೇ ವಿಕೆಟ್ ಎನಿಸಿಕೊಂಡಿತು.
ಟಿಮ್ ಸೌಥಿ ಅಪರೂಪದ ಸಾಧನೆ: ನ್ಯೂಜಿಲೆಂಡ್ ಅನುಭವಿ ವೇಗಿ ಟಿಮ್ ಸೌಥಿ, ಶಿಖರ್ ಧವನ್ ವಿಕೆಟ್ ಕಬಳಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಹೌದು, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 100+, ಏಕದಿನ ಕ್ರಿಕೆಟ್‌ನಲ್ಲಿ 200+ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ 300+ ವಿಕೆಟ್ ಕಬಳಿಸಿದ ಜಗತ್ತಿನ ಮೊದಲ ವೇಗಿ ಎನ್ನುವ ಹಿರಿಮೆಗೆ ಟಿಮ್ ಸೌಥಿ ಪಾತ್ರರಾಗಿದ್ದಾರೆ.
Ind vs NZ: ಭಾರತ ಎದುರು ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ; ಟೀಂ ಇಂಡಿಯಾ ಪರ ಇಬ್ಬರು ಪಾದಾರ್ಪಣೆ
ಟೀಂ ಇಂಡಿಯಾ ದಿಢೀರ್ ಕುಸಿತ: ಟೀಂ ಇಂಡಿಯಾ ಮೊದಲ ವಿಕೆಟ್‌ಗೆ 124 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಪಡೆಯಿತಾದರೂ, ಗಿಲ್ ವಿಕೆಟ್ ಪತನದ ಬಳಿಕ ಭಾರತ ತಂಡವು ನಾಟಕೀಯ ಕುಸಿತ ಕಂಡಿತು. ಗಿಲ್ ಬೆನ್ನಲ್ಲೇ ಧವನ್ ಕೂಡಾ ಮರು ಓವರ್‌ನಲ್ಲೇ ವಿಕೆಟ್ ಒಪ್ಪಿಸಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಬ್ಯಾಟಿಂಗ್ ವೈಫಲ್ಯ ಮತ್ತೊಮ್ಮೆ ಮುಂದುವರೆಯಿತು. ಪಂತ್ 23 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 15 ರನ್ ಬಾರಿಸಿದರೇ, ಸೂರ್ಯಕುಮಾರ್ ಯಾದವ್ ಕೇವಲ 4 ರನ್ ಬಾರಿಸಿ ಲಾಕಿ ಫರ್ಗ್ಯೂಸನ್‌ಗೆ ಮೂರನೇ ಬಲಿಯಾದರು. ಹೀಗಾಗಿ ಟೀಂ ಇಂಡಿಯಾ ತನ್ನ ಖಾತೆಗೆ 36 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್‌ಗಳನ್ನು ಕಳೆದುಕೊಂಡಿತು.
ಸಿಕ್ಕ ಅವಕಾಶ ಬಳಸಿಕೊಂಡು ಶ್ರೇಯಸ್-ಸ್ಯಾಮ್ಸನ್: ಹೌದು, ಒಂದು ಹಂತದಲ್ಲಿ 160 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಭಾರತ ತಂಡಕ್ಕೆ 5ನೇ ವಿಕೆಟ್‌ಗೆ ಸಂಜು ಸ್ಯಾಮ್ಸನ್ ಹಾಗೂ ಶ್ರೇಯಸ್ ಅಯ್ಯರ್ 94 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ಆಸರೆಯಾದರು. ನ್ಯೂಜಿಲೆಂಡ್ ಎದುರಿನ ಟಿ20 ಸರಣಿಯಲ್ಲಿ ಎರಡು ಪಂದ್ಯಗಳನ್ನಾಡಿ ಕೇವಲ 13 ರನ್ ಗಳಿಸಿ ಟೀಕೆಗೆ ಗುರಿಯಾಗಿದ್ದ ಶ್ರೇಯಸ್ ಅಯ್ಯರ್, ಇದೀಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದರು. ಇವರಿಗೆ ಸಂಜು ಸ್ಯಾಮ್ಸನ್ ಕೂಡಾ ಉತ್ತಮ ಸಾಥ್ ನೀಡಿದರು. ಸಂಜು ಸ್ಯಾಮ್ಸನ್, 38 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 36 ರನ್ ಬಾರಿಸಿ ಆಡಂ ಮಿಲ್ನೆಗೆ ವಿಕೆಟ್ ಒಪ್ಪಿಸಿದರು.
ಇನ್ನು ಶ್ರೇಯಸ್ ಅಯ್ಯರ್ 56 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ನ್ಯೂಜಿಲೆಂಡ್ ನೆಲದಲ್ಲಿ ಸತತ 4 ಪಂದ್ಯಗಳಲ್ಲಿ 50+ ರನ್ ಬಾರಿಸಿದ ಎರಡನೇ ವಿದೇಶಿ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾದರು. ಈ ಮೊದಲು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಜ್ ರಾಜಾ, ಕಿವೀಸ್ ನಾಡಿನಲ್ಲಿ ಸತತ 4 ಏಕದಿನ ಪಂದ್ಯಗಳಲ್ಲಿ 50+ ರನ್ ಬಾರಿಸಿದ ಸಾಧನೆ ಮಾಡಿದ್ದರು. ಇದೀಗ ಶ್ರೇಯಸ್ ಅಯ್ಯರ್ ಆ ದಾಖಲೆ ಸರಿಗಟ್ಟಿದ್ದಾರೆ. ಅಂತಿಮವಾಗಿ ಶ್ರೇಯಸ್ ಅಯ್ಯರ್ 76 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 80 ರನ್ ಬಾರಿಸಿ 50ನೇ ಓವರ್‌ನಲ್ಲಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು.
ಇನ್ನು ಸಂಜು ಸ್ಯಾಮ್ಸನ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಮೈ ಚಳಿಬಿಟ್ಟು ಬ್ಯಾಟ್ ಬೀಸುವ ಮೂಲಕ ಟೀಂ ಇಂಡಿಯಾ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಸುಂದರ್ ಕೇವಲ 16 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 37 ರನ್ ಬಾರಿಸಿ ತಂಡದ ಮೊತ್ತವನ್ನು ಮುನ್ನೂರರ ಗಡಿದಾಟುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.
