Asianet Suvarna News Asianet Suvarna News

Ind vs NZ Series: ಚೊಚ್ಚಲ ಸರಣಿ ಗೆಲುವಿನ ನಿರೀಕ್ಷೆಯಲ್ಲಿ ದ್ರಾವಿಡ್-ರೋಹಿತ್ ಜೋಡಿ

* ರಾಂಚಿಯಲ್ಲಿಂದು ಇಂಡೋ-ಕಿವೀಸ್ ಎರಡನೇ ಟಿ20 ಕದನ

* ಸರಣಿ ಗೆಲ್ಲುವ ಕನವರಿಕೆಯಲ್ಲಿದೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ

* ಮಾಡು ಇಲ್ಲವೇ ಮಡಿ ಎನ್ನುವ ಪರಿಸ್ಥಿತಿಯಲ್ಲಿದೆ ನ್ಯೂಜಿಲೆಂಡ್ ತಂಡ

 

Ind vs NZ Rohit Sharma Led Team India eyes on Series Victory over New Zealand in Ranchi kvn
Author
Bengaluru, First Published Nov 19, 2021, 12:10 PM IST

ರಾಂಚಿ(ನ.19): ನ್ಯೂಜಿಲೆಂಡ್‌ ವಿರುದ್ಧ ವಿವಿಧ ಮಾದರಿಯಲ್ಲಿ ಸತತ 7 ಸೋಲು ಕಂಡ ಬಳಿಕ ಬುಧವಾರ ಜೈಪುರದಲ್ಲಿ ಮೊದಲ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಸೋಲಿನ ಸರಪಳಿ ಕಳಚಿದ ಟೀಂ ಇಂಡಿಯಾ (Team India), ಶುಕ್ರವಾರ ಇಲ್ಲಿನ ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿರುವ 2ನೇ ಟಿ20 ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ಉತ್ಸಾಹದಲ್ಲಿದೆ. ಈ ಪಂದ್ಯ ಗೆದ್ದರೆ ತವರಿನಲ್ಲಿ ಭಾರತ ಸತತ 5ನೇ ಟಿ20 ಸರಣಿ ಗೆದ್ದಂತಾಗುತ್ತದೆ.

ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid) ಹಾಗೂ ನಾಯಕ ರೋಹಿತ್‌ ಶರ್ಮಾ (Rohit Sharma) ತಮ್ಮ ಮುಂದಾಳತ್ವದಲ್ಲಿ ಮೊದಲ ಸರಣಿ ಗೆಲ್ಲಲು ಎದುರು ನೋಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಭಾರತ ಆಲ್ರೌಂಡ್‌ ಪ್ರದರ್ಶನ ತೋರಿತಾದರೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಇನ್ನೂ ಸುಧಾರಿಸಬೇಕಿದೆ.

Ind vs NZ Series: ನನ್ನ ವೀಕ್ನೆಸ್ ಗೊತ್ತು, ಬೌಲ್ಟ್ ಕುರಿತು ಅಚ್ಚರಿಯ ಹೇಳಿಕೆ ನೀಡಿದ ರೋಹಿತ್ ಶರ್ಮಾ..!

ರಾಂಚಿಯಲ್ಲಿ (Ranchi) ಭಾರತ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಮೇಲೆ ಹೆಚ್ಚು ಗಮನ ನೀಡಬೇಕಿದೆ. ಆರಂಭಿಕರು ಉತ್ತಮ ಲಯದಲ್ಲಿದ್ದು, ವಿರಾಟ್‌ ಕೊಹ್ಲಿ (Virat Kohli) ಅನುಪಸ್ಥಿತಿಯಲ್ಲಿ 3ನೇ ಕ್ರಮಾಂಕದಲ್ಲಿ ಆಡಿದ ಸೂರ್ಯಕುಮಾರ್‌ ಯಾದವ್‌ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರು. ಆದರೆ ಬಹು ದಿನಗಳ ಬಳಿಕ ತಂಡಕ್ಕೆ ಮರಳಿರುವ ಶ್ರೇಯಸ್‌ ಅಯ್ಯರ್‌ (Shreyas Iyer) ರನ್‌ ಗಳಿಸಲು ತಿಣುಕಾಡಿದರು. ಅವರಿಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಇದ್ದು, ದೊಡ್ಡ ಇನ್ನಿಂಗ್ಸ್‌ ನಿರೀಕ್ಷೆ ಮಾಡಲಾಗುತ್ತಿದೆ.

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎದುರಿಸಿದ ಚೊಚ್ಚಲ ಎಸೆತವನ್ನೇ ಬೌಂಡರಿಗಟ್ಟಿಗಮನ ಸೆಳೆದ ವೆಂಕಟೇಶ್‌ ಅಯ್ಯರ್‌, 2ನೇ ಎಸೆತದಲ್ಲಿ ದುಬಾರಿ ಹೊಡೆತಕ್ಕೆ ಯತ್ನಿಸಿ ಕೈಸುಟ್ಟುಕೊಂಡರು. ನಿರ್ಭೀತ ಆಟಕ್ಕೆ ಹೆಸರುವಾಸಿಯಾಗಿರುವ ವೆಂಕಿ, 2022ರ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಗಳಿಸಬೇಕಿದ್ದರೆ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವ, ಪರಿಸ್ಥಿತಿಗೆ ತಕ್ಕಂತೆ ಆಡುವ ಕಲೆಯನ್ನು ಆದಷ್ಟು ಬೇಗ ಕಲಿಯಬೇಕಿದೆ. ಬೌಲರ್‌ಗಳಿಂದ ನಾಯಕ ರೋಹಿತ್‌ ಮತ್ತಷ್ಟು ಶಿಸ್ತುಬದ್ಧ ಪ್ರದರ್ಶನ ನಿರೀಕ್ಷೆ ಮಾಡಲಿದ್ದಾರೆ. ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌ಗೆ ಅವಕಾಶ ಸಿಗಬಹುದು.

Ind vs NZ: ಸೂರ್ಯನ ಆಟಕ್ಕೆ ಕರಗಿಹೋದ ಕೀವಿಸ್, ಗೆದ್ದು ಬೀಗಿದ ಭಾರತ

ಇನ್ನು ನ್ಯೂಜಿಲೆಂಡ್‌ ತನ್ನ ತಾರಾ ಆರಂಭಿಕ ಬ್ಯಾಟ್ಸ್‌ಮನ್‌ ಮಾರ್ಟಿನ್‌ ಗಪ್ಟಿಲ್‌ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ಬೌಲಿಂಗ್‌ನಲ್ಲೂ ಟಿಮ್‌ ಸೌಥಿ ಹಾಗೂ ಟ್ರೆಂಟ್‌ ಬೌಲ್ಟ್‌ (Trent Boult) ಯಶಸ್ಸು ಸಾಧಿಸಿದರಷ್ಟೇ ತಂಡಕ್ಕೆ ಗೆಲುವು ಎನ್ನುವ ಪರಿಸ್ಥಿತಿ ಇದೆ. ಆದರೂ ಕಿವೀಸ್‌ ತಂಡವನ್ನು ಎಂದಿಗೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ತಂಡ ಪುಟಿದೆದ್ದು ಸರಣಿಯಲ್ಲಿ ಸಮಬಲ ಸಾಧಿಸಲು ಕಾತರಿಸುತ್ತಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌(ನಾಯಕ), ಕೆ.ಎಲ್‌.ರಾಹುಲ್‌, ಸೂರ್ಯಕುಮಾರ್‌, ಶ್ರೇಯಸ್‌, ಪಂತ್‌, ವೆಂಕಟೇಶ್‌, ಅಶ್ವಿನ್‌, ಅಕ್ಷರ್‌/ಚಹಲ್‌, ಭುವನೇಶ್ವರ್‌, ದೀಪಕ್‌, ಸಿರಾಜ್‌.

ನ್ಯೂಜಿಲೆಂಡ್‌: ಗಪ್ಟಿಲ್‌, ಮಿಚೆಲ್‌, ಚ್ಯಾಪ್ಮನ್‌, ಫಿಲಿಫ್ಸ್‌, ಸೀಫರ್ಟ್‌, ರಚಿನ್‌ ರವೀಂದ್ರ, ಟಾಡ್‌ ಆ್ಯಸ್ಟಲ್‌, ಸ್ಯಾಂಟ್ನರ್‌, ಸೌಥಿ(ನಾಯಕ), ಫಗ್ರ್ಯೂಸನ್‌, ಟ್ರೆಂಟ್‌ ಬೌಲ್ಟ್‌.

ಪಂದ್ಯ ಆರಂಭ: ಸಂಜೆ 7.30ಕ್ಕೆ
ಸ್ಥಳ: ರಾಂಚಿ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಇಂದು ಪಾಕಿಸ್ತಾನ-ಬಾಂಗ್ಲಾದೇಶ ಮೊದಲ ಟಿ20 ಕಾದಾಟ

ಮೀರ್‌ಪುರ: ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿ ಉತ್ತಮ ಪ್ರದರ್ಶನ ತೋರಿದ್ದ ಪಾಕಿಸ್ತಾನ ತಂಡ (Pakistan Cricket Team), ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದು ಉಭಯ ತಂಡಗಳ ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಶುಕ್ರವಾರ ನಡೆಯಲಿದೆ.  ಬಾಬರ್‌ ಆಜಂ (Babar Azam) ತಂಡವನ್ನು ಮುನ್ನಡೆಸಲಿದ್ದು, ವಿಶ್ವಕಪ್‌ನಲ್ಲಿ ಗಮನ ಸೆಳೆದ ಶಾಹೀನ್‌ ಅಫ್ರಿದಿ, ಹ್ಯಾರಿಸ್‌ ರೌಫ್‌, ಮೊಹಮದ್‌ ರಿಜ್ವಾನ್‌ ಸಹ ತಂಡದಲ್ಲಿದ್ದಾರೆ. ಹಿರಿಯ ಆಟಗಾರ ಶೋಯಿಬ್‌ ಮಲಿಕ್‌ ತಂಡದಲ್ಲಿ ಮುಂದುವರಿಯಲಿದ್ದಾರೆ. 

ಬಾಂಗ್ಲಾದೇಶ (Bangladesh Cricket Team) ಟಿ20 ವಿಶ್ವಕಪ್‌ನಲ್ಲಿ (ICC T20 World Cup) ಕಳಪೆ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಹಿರಿಯ ಆಟಗಾರರಾದ ಮುಷ್ಫಿಕುರ್‌ ರಹೀಂ, ಲಿಟನ್‌ ದಾಸ್‌, ರುಬೆಲ್‌ ಹೊಸೆನ್‌ ಹಾಗೂ ಸೌಮ್ಯ ಸರ್ಕಾರ್‌ರನ್ನು ತಂಡದಿಂದ ಕೈಬಿಟ್ಟಿದೆ. ಅನುಭವಿ ಆಟಗಾರರಾದ ಶಕೀಬ್‌ ಅಲ್‌ ಹಸನ್‌ (Shakib Al Hasan), ತಮೀಮ್‌ ಇಕ್ಬಾಲ್‌ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಸರಣಿಯಿಂದ ಹೊರಬಿದ್ದಿದ್ದಾರೆ. ಟಿ20 ಸರಣಿ ಬಳಿಕ ಉಭಯ ತಂಡಗಳು 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಸೆಣಸಲಿವೆ.

 

Follow Us:
Download App:
  • android
  • ios