"

ಮುಂಬೈ(ಫೆ.04): ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಸರಣಿಯ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ 16 ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಮುಂಬೈ ಯುವ ಕ್ರಿಕೆಟಿಗ ಪೃಥ್ವಿ ಶಾ ರೆಡ್ ಬಾಲ್ ಟೂರ್ನಿಗೆ ಕಮ್‌ಬ್ಯಾಕ್ ಮಾಡಿದ್ದಾರೆ.

ಆಘಾತ : ಕಿವೀಸ್ ಸರಣಿಯಿಂದ ಹೊರಬಿದ್ದ ಹಿಟ್‌ಮ್ಯಾನ್ ರೋಹಿತ್ ಶರ್ಮಾ..!

ಶಿಖರ್ ಧವನ್ ಗಾಯಗೊಂಡಿದ್ದರಿಂದ ಈಗಾಗಲೇ ಏಕದಿನ ತಂಡದಲ್ಲಿ ಸ್ಥಾನ ಪಡೆದಿರುವ ಪೃಥ್ವಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪದಾರ್ಪಣೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇನ್ನು ಕಿವೀಸ್ ಎದುರಿನ ಕೊನೆಯ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಗಾಯಗೊಂಡಿದ್ದರಿಂದ, ರೋಹಿತ್ ಬದಲಿಗೆ ಪೃಥ್ವಿ ಶಾಗೆ ಅವಕಾಶ ನೀಡಲಾಗಿದೆ. 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಪೃಥ್ವಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿ ಗಮನ ಸೆಳೆದಿದ್ದರು. ಇದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರು. ಬಳಿಕ ನಾನಾ ಕಾರಣಗಳಿಂದ 2019ರಲ್ಲಿ ಪೃಥ್ವಿ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದರು. 

ಇನ್ನು ಏಕದಿನ ತಂಡದಲ್ಲಿ ರೋಹಿತ್ ಬದಲಿಗೆ ಮಯಾಂಕ್ ಅಗರ್‌ವಾಲ್‌ಗೆ ಬುಲಾವ್ ಬಂದಿದೆ. ರಾಹುಲ್ ಜತೆಗೆ ಮಯಾಂಕ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಮಯಾಂಕ್ ಅಗರ್‌ವಾಲ್ ಜತೆ ಪೃಥ್ವಿ ಶಾ ಇಲ್ಲವೇ ಶುಭ್‌ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಇನ್ನು ಭಾರತ 'ಎ' ಪರ ಗಿಲ್ ಅಜೇಯ ದ್ವಿಶತಕದ ಮೂಲಕ ಗಮನ ಸೆಳೆದಿದ್ದರು.ಹೀಗಾಗಿ ಗಿಲ್‌ಗೂ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕರೂ ಅಚ್ಚರಿಪಡಬೇಕಿಲ್ಲ. ಇನ್ನು ವೇಗಿ ನವದೀಪ್ ಸೈನಿ ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಡೆಲ್ಲಿ ವೇಗಿ ಇಶಾಂತ್ ಶರ್ಮಾ ಫಿಟ್ನೆಸ್ ಸಾಬೀತುಪಡಿಸಿದರೆ ಕಿವೀಸ್ ಪ್ರವಾಸಕ್ಕೆ ವಿಮಾನ ಹತ್ತಲಿದ್ದಾರೆ.

ಪೂಜೆ ಮಾಡಿದ ಮೊಹಮ್ಮದ್ ಶಮಿ ಪುತ್ರಿ, ಮುಸ್ಲಿಂ ಸಂಪ್ರದಾಯವಾದಿಗಳು ಗರಂ!

ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಜೇಯ ಗೆಲುವಿನ ನಾಗಾಲೋಟ ಮುಂದುವರೆಸಿರುವ ಟೀಂ ಇಂಡಿಯಾಗೆ ಕಿವೀಸ್‌ ವಿರುದ್ಧದ ಟೆಸ್ಟ್ ಸರಣಿ ಅಗ್ನಿ ಪರೀಕ್ಷೆ ಆಗುವ ಸಾಧ್ಯತೆಯಿದೆ. ಫೆಬ್ರವರಿ 21ರಂದು ಮೊದಲ ಪಂದ್ಯ ವೆಲ್ಲಿಂಗ್ಟನ್‌ನಲ್ಲಿ ನಡೆದರೆ, ಫೆಬ್ರವರಿ 29ರಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ ಜರುಗಲಿದೆ.

ಭಾರತ ತಂಡ ಹೀಗಿದೆ: 
ವಿರಾಟ್ ಕೊಹ್ಲಿ(ನಾಯಕ), ಮಯಾಂಕ್ ಅಗರ್‌ವಾಲ್, ಪೃಥ್ವಿ ಶಾ, ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ(ಉಪನಾಯಕ), ಹನುಮಾ ವಿಹಾರಿ, ವೃದ್ದಿಮಾನ್ ಸಾಹ, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ನವದೀಪ್ ಸೈನಿ, ಇಶಾಂತ್ ಶರ್ಮಾ.