Ind vs NZ Mumbai Test: ಕಿವೀಸ್ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ
* ಮುಂಬೈನಲ್ಲಿಂದು ಭಾರತ ಹಾಗೂ ನ್ಯೂಜಿಲೆಂಡ್ ಸೆಣಸಾಟ
* ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ ಟೀಂ ಇಂಡಿಯಾ
* ಎರಡು ತಂಡಗಳಲ್ಲೂ ಮಹತ್ವದ ಬದಲಾವಣೆ
ಮುಂಬೈ(ಡಿ.03): ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯವು ರೋಚಕ ಡ್ರಾನಲ್ಲಿ ಅಂತ್ಯವಾಗಿದ್ದು, ಇದೀಗ ಎರಡನೇ ಪಂದ್ಯವು ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಎರಡೂ ತಂಡಗಳಲ್ಲೂ ಮಹತ್ವದ ಬದಲಾವಣೆಗಳು ಆಗಿವೆ.
ಹೌದು, ಇಲ್ಲಿನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಆರಂಭವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಸೆಷನ್ ನಡೆಯಲಿಲ್ಲ. ಕಳೆದೆರಡು ದಿನಗಳಿಂದ ಮುಂಬೈನಲ್ಲಿ ನಿರಂತರವಾಗಿ ಮಳೆ ಸುರಿದಿದ್ದರಿಂದ ಮೈದಾನ ಒದ್ದೆಯಾಗಿತ್ತು. ಹೀಗಾಗಿ ಮೊದಲ ಸೆಷನ್ ಪಂದ್ಯಾಟ ನಡೆಯಲಿಲ್ಲ. ಇನ್ನು ಎರಡನೇ ಟೆಸ್ಟ್ ಪಂದ್ಯದಿಂದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾದ ರವೀಂದ್ರ ಜಡೇಜಾ(Ravindra Jadeja), ಇಶಾಂತ್ ಶರ್ಮಾ (Ishant Sharma) ಹಾಗೂ ಅಜಿಂಕ್ಯ ರಹಾನೆ (Ajinkya Rahane) ಗಾಯದ ಸಮಸ್ಯೆಯಿಂದಾಗಿ ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದು, ಇವರ ಬದಲಿಗೆ ಜಯಂತ್ ಯಾದವ್, ಮೊಹಮ್ಮದ್ ಸಿರಾಜ್ ಹಾಗೂ ವಿರಾಟ್ ಕೊಹ್ಲಿ ತಂಡ ಕೂಡಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಕಾನ್ಪುರ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದರು. ವಿರಾಟ್ ಕೊಹ್ಲಿ ತಂಡವನ್ನು ಕೂಡಿಕೊಂಡಿರುವುದು ಟೀಂ ಇಂಡಿಯಾ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ.
ಇನ್ನು ನ್ಯೂಜಿಲೆಂಡ್ ತಂಡದಲ್ಲೂ ಮಹತ್ತರ ಬದಲಾವಣೆಯಾಗಿದ್ದು, ಮೊಣಕೈ ಗಾಯದ ಸಮಸ್ಯೆ ಎದುರಿಸುತ್ತಿರುವ ನಾಯಕ ಕೇನ್ ವಿಲಿಯಮ್ಸನ್ ತಂಡದಿಂದ ಹೊರಬಿದ್ದಿದ್ದು, ಟಾಮ್ ಲೇಥಮ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕೇನ್ ವಿಲಿಯಮ್ಸನ್ ಬದಲಿಗೆ ಡೇರಲ್ ಮಿಚೆಲ್ ತಂಡ ಕೂಡಿಕೊಂಡಿದ್ದಾರೆ. ನ್ಯೂಜಿಲೆಂಡ್ ತಂಡವು ಇದುವರೆಗೂ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿಲ್ಲ. ಇದಷ್ಟೇ ಅಲ್ಲದೇ ಕಳೆದ 33 ವರ್ಷಗಳಿಂದೀಚೆಗೆ ಭಾರತದ ನೆಲದಲ್ಲಿ ಟೆಸ್ಟ್ ಪಂದ್ಯ ಗೆಲ್ಲಲು ಸಾಧ್ಯವಾಗಿಲ್ಲ. ಇದೆಲ್ಲದರ ನಡುವೆ ಕೇನ್ ವಿಲಿಯಮ್ಸನ್ ಅವರ ಅನುಪಸ್ಥಿತಿ ತಂಡವನ್ನು ಕಾಡುವ ಸಾಧ್ಯತೆಯಿದೆ.
Ind vs NZ Mumbai Test: ಎರಡನೇ ಟೆಸ್ಟ್ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್. ಮೂವರು ಆಟಗಾರರು ಔಟ್!
ಎರಡು ಟೆಸ್ಟ್ ಪಂದ್ಯಗಳ ಸರಣಿ ನಾಲ್ವರು ನಾಯಕರು: ಹೌದು, ತೀರಾ ವಿರಳ ಎನ್ನುವಂತೆ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಲ್ವರು ನಾಯಕರು ತಂಡವನ್ನು ಮುನ್ನಡೆಸಿದ ಸನ್ನಿವೇಷಕ್ಕೆ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿ ಸಾಕ್ಷಿಯಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಅಜಿಂಕ್ಯ ರಹಾನೆ ನಾಯಕನಾಗಿ ಮುನ್ನಡೆಸಿದರೆ, ಕಿವೀಸ್ ತಂಡವನ್ನು ಕೇನ್ ವಿಲಿಯಮ್ಸನ್ ಮುನ್ನಡೆಸಿದ್ದರು. ಇದೀಗ ಈ ಇಬ್ಬರು ಆಟಗಾರರು ಗಾಯದ ಸಮಸ್ಯೆಯಿಂದ ತಂಡದಿಂದ ಹೊರಬಿದ್ದಿದ್ದು, ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದರೆ, ಟಾಮ್ ಲೇಥಮ್ ಕಿವೀಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ತಂಡಗಳು ಹೀಗಿವೆ ನೋಡಿ
ಭಾರತ: ಶುಭ್‌ಮನ್ ಗಿಲ್, ಮಯಾಂಕ್ ಅಗರ್‌ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಾಹ, ಜಯಂತ್ ಯಾದವ್ ಆರ್.ಅಶ್ವಿನ್, ಅಕ್ಷರ್ ಪಟೇಲ್, ಮೊಹಮದ್ ಸಿರಾಜ್, ಉಮೇಶ್ ಯಾದವ್.
ನ್ಯೂಜಿಲೆಂಡ್: ವಿಲ್ ಯಂಗ್, ಟಾಮ್ ಲೇಥಮ್(ನಾಯಕ), ಡೇರಲ್ ಮಿಚೆಲ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್, ರಚಿನ್ ರವೀಂದ್ರ, ಕೈಲ್ ಜೇಮಿಸನ್, ಟಿಮ್ ಸೌಥಿ, ಸೋಮರ್‌ವಿಲ್, ಅಜಾಜ್ ಪಟೇಲ್.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್