Asianet Suvarna News Asianet Suvarna News

Ind vs NZ Mumbai Test: ಮುಂಬೈನಲ್ಲಿ ಭಾರತಕ್ಕೆ ಒಲಿಯುತ್ತಾ ಟೆಸ್ಟ್ ಸರಣಿ..?

* ಮುಂಬೈನಲ್ಲಿಂದು ಭಾರತ-ನ್ಯೂಜಿಲೆಂಡ್ ನಡುವೆ ಎರಡನೇ ಟೆಸ್ಟ್ ಆರಂಭ

* ಟೆಸ್ಟ್ ಸರಣಿಯ ಕನವರಿಕೆಯಲ್ಲಿದೆ ಟೀಂ ಇಂಡಿಯಾ

* ಭಾರತ ತಂಡದ ಬಲ ಹೆಚ್ಚಿಸಿದ ವಿರಾಟ್ ಕೊಹ್ಲಿ ಆಗಮನ

Ind vs NZ Mumbai Test Team India Eyes on Test Series Victory against New Zealand in Mumbai Wankhede Stadium kvn
Author
Bengaluru, First Published Dec 3, 2021, 8:31 AM IST
  • Facebook
  • Twitter
  • Whatsapp

ಮುಂಬೈ(ಡಿ.03): ವಿಶ್ರಾಂತಿ ಮುಗಿಸಿ ತಂಡಕ್ಕೆ ವಾಪಸಾಗಿರುವ ನಾಯಕ ವಿರಾಟ್‌ ಕೊಹ್ಲಿ (Virat Kohli), ನ್ಯೂಜಿಲೆಂಡ್‌ ವಿರುದ್ಧ ಶುಕ್ರವಾರ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ 2ನೇ ಟೆಸ್ಟ್‌ನಲ್ಲಿ ಕೆಲ ಪ್ರಮುಖ ಸವಾಲುಗಳನ್ನು ಎದುರಿಸಲಿದ್ದಾರೆ. ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid) ಜೊತೆಗೂಡಿ ಕೊಹ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ.

ಒಂದೆಡೆ ಮುಂಬೈನಲ್ಲಿ ಬಿಡದೆ ಮಳೆ ಸುರಿಯುತ್ತಿದ್ದು, ಶುಕ್ರವಾರವೂ ಮಳೆ ಮುನ್ಸೂಚನೆ ಇದೆ. ಮೊದಲ ದಿನದಾಟ ಮಳೆಗೆ ಬಲಿಯಾದರೆ ಆಶ್ಚರ್ಯವಿಲ್ಲ. ಹೀಗಾಗಿ ವಾತಾವರಣಕ್ಕೆ ಸರಿಹೊಂದುವ ತಂಡವನ್ನು ಕೊಹ್ಲಿ ಹಾಗೂ ದ್ರಾವಿಡ್‌ ಆಯ್ಕೆ ಮಾಡಬೇಕಿದೆ. ಕಾನ್ಪುರದಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಗೆಲುವು ಸ್ವಲ್ಪದರಲ್ಲೇ ಕೈತಪ್ಪಿತ್ತು. ವಾಂಖೇಡೆಯ ಪಿಚ್‌ನಲ್ಲಿ ಉತ್ತಮ ಬೌನ್ಸ್‌ ಇರುವ ನಿರೀಕ್ಷೆ ಇದ್ದು, ಸ್ಪಿನ್ನರ್‌ಗಳಿಗೆ ಲಾಭವಾಗಬಹುದು. ಆರ್‌.ಅಶ್ವಿನ್‌ರನ್ನು (Ravichandran Ashwin) ತಂಡ ಪ್ರಮುಖ ಅಸ್ತ್ರವಾಗಿ ಬಳಸುವ ನಿರೀಕ್ಷೆ ಇದೆ.

ರಹಾನೆಗೆ ಮತ್ತೊಂದು ಚಾನ್ಸ್‌?: 2021ರಲ್ಲಿ ಸತತ 12 ವೈಫಲ್ಯ ಕಂಡಿರುವ ಅಜಿಂಕ್ಯ ರಹಾನೆಗೆ (Ajinkya Rahane) ಮತ್ತೊಂದು ಅವಕಾಶ ಸಿಗಲಿದೆಯೇ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ರಹಾನೆ ತಮ್ಮ ತವರು ಮೈದಾನದಲ್ಲಿ ಮೊದಲ ಟೆಸ್ಟ್‌ ಆಡಲು ಕಾಯುತ್ತಿದ್ದಾರೆ. ಚೇತೇಶ್ವರ್‌ ಪೂಜಾರ (Cheteshwar Pujara) ಸಹ ಲಯ ಕಳೆದುಕೊಂಡಿದ್ದು, ಅವರ ನೆತ್ತಿ ಮೇಲೂ ತೂಗುಗತ್ತಿ ನೇತಾಡುತ್ತಿದೆ. ಪಾದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿದ ಶ್ರೇಯಸ್‌ ಅಯ್ಯರ್‌ (Shreyas Iyer) ತಂಡದಲ್ಲಿ ಉಳಿದುಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಶುಭ್‌ಮನ್‌ ಗಿಲ್‌ (Shubman Gill) ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಆಡಬೇಕಿದೆ.

ಮೂವರು ವೇಗಿಗಳು ಕಣಕ್ಕೆ?: ಮುಂಬೈ ಪಿಚ್‌ ವೇಗಿಗಳು ಹಾಗೂ ಸ್ಪಿನ್ನ​ರ್ಸ್‌ ಇಬ್ಬರಿಗೂ ನೆರವು ನೀಡುವ ನಿರೀಕ್ಷೆ ಇದೆ. ಹೀಗಾಗಿ ಭಾರತ ಹೆಚ್ಚುವರಿ ವೇಗಿಯನ್ನು ಕಣಕ್ಕಿಳಿಸಲು ನಿರ್ಧರಿಸಿದರೆ ಅಚ್ಚರಿಯಿಲ್ಲ. ಮೊಹಮದ್‌ ಸಿರಾಜ್‌ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಒಂದೊಮ್ಮೆ ಮೂರು ವೇಗಿಗಳನ್ನು ಆಡಿಸಲು ನಿರ್ಧರಿಸಿದರೆ ಅಕ್ಷರ್‌ ಪಟೇಲ್‌ (Axar Patel) ಹೊರಗುಳಿಯಬಹುದು.

India Tour of South Africa: ನಿಗದಿಯಂತೆ ದಕ್ಷಿಣ ಆಫ್ರಿಕಾ ಪ್ರವಾಸ: BCCI ಸ್ಪಷ್ಟನೆ!

ನೀಲ್‌ ವ್ಯಾಗ್ನರ್‌ಗೆ ಸ್ಥಾನ?: ವಾತಾವರಣ ಸ್ವಿಂಗ್‌ ಬೌಲಿಂಗ್‌ಗೆ ಅನುಕೂಲಕಾರಿಯಾಗಿರಲಿದೆ ಎನ್ನುವುದು ಕಿವೀಸ್‌ಗೆ ಮನದಟ್ಟಾದರೆ ಎಡಗೈ ವೇಗಿ ನೀಲ್‌ ವ್ಯಾಗ್ನರ್‌ರನ್ನು ಕಣಕ್ಕಿಳಿಸಲು ತಂಡ ಎರಡನೇ ಆಲೋಚನೆ ಮಾಡುವುದಿಲ್ಲ. ವ್ಯಾಗ್ನರ್‌, ಭಾರತೀಯ ಬ್ಯಾಟರ್‌ಗಳನ್ನು ಈ ಹಿಂದೆ ಹಲವು ಬಾರಿ ಕಾಡಿದ್ದಾರೆ. ಅವರು ಸೇರ್ಪಡೆಗೊಂಡರೆ ಭಾರತೀಯರು ಹೆಚ್ಚುವರಿ ಎಚ್ಚರಿಕೆ ವಹಿಸಿ ಆಡಬೇಕಾಗಬಹುದು. ವಿಲಿಯಮ್‌ ಸೋಮರ್‌ವಿಲ್‌ ಸ್ಥಾನ ಕಳೆದುಕೊಳ್ಳಬಹುದು. ಉಳಿದಂತೆ ಕಿವೀಸ್‌ ತಂಡದಲ್ಲಿ ಯಾವುದೇ ಬದಲಾವಣೆ ಆಗುವ ನಿರೀಕ್ಷೆ ಇಲ್ಲ.

ವಿರಾಟ್‌ ಕೊಹ್ಲಿಗಾಗಿ ತಂಡದಲ್ಲಿ ಸ್ಥಾನ ಕಳೆದುಕೊಳ್ಳೋರು ಯಾರು?

ನಾಯಕ ಕೊಹ್ಲಿ ಆಡುವ ಹನ್ನೊಂದರ ಬಳಗಕ್ಕೆ ಪ್ರವೇಶಿಸುವ ಕಾರಣ ಕಾನ್ಪುರ ಟೆಸ್ಟ್‌ನಲ್ಲಿ ಆಡಿದ ತಂಡದಲ್ಲಿದ್ದ ಒಬ್ಬ ಆಟಗಾರ ಹೊರಗುಳಿಯಬೇಕಾಗುತ್ತದೆ. ಮಯಾಂಕ್‌ ಅಗರ್‌ವಾಲ್‌ರನ್ನು (Mayank Agarwal) ಹೊರಗಿಟ್ಟರೆ ಆರಂಭಿಕನ ಸ್ಥಾನಕ್ಕೆ ಕೊರತೆಯಾಗಲಿದೆ. ಆಗ ಚೇತೇಶ್ವರ್‌ ಪೂಜಾರ ಇನ್ನಿಂಗ್ಸ್‌ ಆರಂಭಿಸಬೇಕು. ವಿಕೆಟ್‌ ಕೀಪರ್‌ ಸ್ಥಾನಕ್ಕಾಗಿ ವೃದ್ಧಿಮಾನ್‌ ಸಾಹ ಹಾಗೂ ಕೆ.ಎಸ್‌.ಭರತ್‌ ನಡುವೆ ಪೈಪೋಟಿ ಇದೆ. ಈ ಇಬ್ಬರೂ ತಮ್ಮ ರಾಜ್ಯ ತಂಡಗಳಿಗೆ ಆರಂಭಿಕರಾಗಿ ಆಡಿದ ಅನುಭವ ಹೊಂದಿದ್ದಾರೆ. ಈ ಇಬ್ಬರಲ್ಲಿ ಒಬ್ಬರನ್ನು ಟೀಂ ಇಂಡಿಯಾ ಗಿಲ್‌ ಜೊತೆ ಆರಂಭಿಕನನ್ನಾಗಿ ಕಣಕ್ಕಿಳಿಸಬಹುದು. ಒಂದು ವೇಳೆ ಪೂಜಾರರನ್ನು ಹೊರಗಿಟ್ಟರೆ ಕೊಹ್ಲಿ 4ನೇ ಕ್ರಮಾಂಕದ ಬದಲು 3ನೇ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ. ರಹಾನೆ ಹೊರಗುಳಿದರೆ 5ನೇ ಕ್ರಮಾಂಕ ಶ್ರೇಯಸ್‌ ಅಯ್ಯರ್‌ ಪಾಲಾಗಲಿದೆ.

ನ್ಯೂಜಿಲೆಂಡ್‌ಗೆ ಭಾರತದಲ್ಲಿ ಚೊಚ್ಚಲ ಸರಣಿ ಗೆಲ್ಲುವ ಗುರಿ

1956ರಿಂದ ಭಾರತ ಪ್ರವಾಸ ಕೈಗೊಳ್ಳುತ್ತಿರುವ ನ್ಯೂಜಿಲೆಂಡ್‌ ಇದುವರೆಗೂ ಭಾರತೀಯ ನೆಲದಲ್ಲಿ ಟೆಸ್ಟ್‌ ಸರಣಿ ಗೆದ್ದಿಲ್ಲ. ಅಲ್ಲದೇ ಭಾರತದಲ್ಲಿ ಟೆಸ್ಟ್‌ ಪಂದ್ಯ ಗೆದ್ದು 33 ವರ್ಷವೇ ಕಳೆದಿದೆ. ಮೊದಲ ಟೆಸ್ಟ್‌ನಲ್ಲಿ ಹೋರಾಡಿ ಡ್ರಾ ಸಾಧಿಸಿದ್ದ ಕಿವೀಸ್‌ ವಾಂಖೇಡೆಯಲ್ಲಿ ಇತಿಹಾಸ ಬರೆಯಲು ಹಾತೊರೆಯುತ್ತಿದೆ.

5 ವರ್ಷಗಳ ಬಳಿಕ ಮುಂಬೈನಲ್ಲಿ ಟೆಸ್ಟ್‌

ವಾಂಖೇಡೆ ಸ್ಟೇಡಿಯಂನಲ್ಲಿ 5 ವರ್ಷಗಳ ಬಳಿಕ ಟೆಸ್ಟ್‌ ಪಂದ್ಯ ನಡೆಯಲಿದೆ. ಕೊನೆ ಬಾರಿಗೆ ಕ್ರೀಡಾಂಗಣ ಟೆಸ್ಟ್‌ ಪಂದ್ಯಕ್ಕೆ ಆತಿಥ್ಯ ವಹಿಸಿದ್ದು 2016ರಲ್ಲಿ. ಇಂಗ್ಲೆಂಡ್‌ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್‌ ಹಾಗೂ 36 ರನ್‌ಗಳಿಂದ ಗೆದ್ದಿತ್ತು. ಇಲ್ಲಿ ಒಟ್ಟು 25 ಟೆಸ್ಟ್‌ ಪಂದ್ಯಗಳು ನಡೆದಿದ್ದು 11ರಲ್ಲಿ ಭಾರತ ಗೆದ್ದಿದೆ. ಭಾರತ 7ರಲ್ಲಿ ಸೋತಿದ್ದು, ಉಳಿದ 7 ಪಂದ್ಯ ಡ್ರಾಗೊಂಡಿವೆ.

ಪಿಚ್‌ ರಿಪೋರ್ಟ್‌

ಮೊದಲ ಒಂದು ಇಲ್ಲವೇ 2 ದಿನ ಪಿಚ್‌ನಲ್ಲಿ ತೇವಾಂಶವಿರಲಿದೆ. ಹೀಗಾಗಿ ಟಾಸ್‌ ಗೆಲ್ಲುವ ತಂಡ ಮೊದಲು ಬೌಲ್‌ ಮಾಡಬಹುದು. ಕೊನೆ 3 ದಿನ ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ತಂಡಗಳು ದೊಡ್ಡ ಮೊತ್ತ ಕಲೆಹಾಕಬೇಕಾದ ಒತ್ತಡಕ್ಕೆ ಸಿಲುಕಬಹುದು.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಶುಭ್‌ಮನ್‌ ಗಿಲ್‌, ಮಯಾಂಕ್‌ ಅಗರ್‌ವಾಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ(ನಾಯಕ), ಶ್ರೇಯಸ್‌ ಅಯ್ಯರ್‌, ರವೀಂದ್ರ ಜಡೇಜಾ, ವೃದ್ಧಿಮಾನ್‌ ಸಾಹ, ಆರ್‌.ಅಶ್ವಿನ್‌, ಅಕ್ಷರ್‌ ಪಟೇಲ್‌, ಮೊಹಮದ್‌ ಸಿರಾಜ್‌, ಉಮೇಶ್‌ ಯಾದವ್‌.

ನ್ಯೂಜಿಲೆಂಡ್‌: ವಿಲ್‌ ಯಂಗ್‌, ಟಾಮ್‌ ಲೇಥಮ್‌, ಕೇನ್‌ ವಿಲಿಯಮ್ಸನ್‌(ನಾಯಕ), ರಾಸ್‌ ಟೇಲರ್‌, ಹೆನ್ರಿ ನಿಕೋಲ್ಸ್‌, ಟಾಮ್‌ ಬ್ಲಂಡೆಲ್‌, ರಚಿನ್‌ ರವೀಂದ್ರ, ಕೈಲ್‌ ಜೇಮಿಸನ್‌, ಟಿಮ್‌ ಸೌಥಿ, ನೀಲ್‌ ವ್ಯಾಗ್ನರ್‌, ಅಜಾಜ್‌ ಪಟೇಲ್‌.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Follow Us:
Download App:
  • android
  • ios