Mayank Agarwal Hits Century: ಶತಕ ಸಿಡಿಸಿ ಘರ್ಜಿಸಿದ ಕನ್ನಡಿಗ ಮಯಾಂಕ್ ಅಗರ್‌ವಾಲ್..!
* ಮುಂಬೈ ಟೆಸ್ಟ್‌ನಲ್ಲಿ ಶತಕ ಚಚ್ಚಿದ ಮಯಾಂಕ್ ಅಗರ್‌ವಾಲ್
* ಉಪಯುಕ್ತ ಸಂದರ್ಭದಲ್ಲಿ ಬ್ಯಾಟಿಂಗ್‌ನಲ್ಲಿ ನೆರವಾದ ಮಯಾಂಕ್
* ಬರೋಬ್ಬರಿ 2 ವರ್ಷಗಳ ಬಳಿಕ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಕನ್ನಡಿಗ
ಮುಂಬೈ(ಡಿ.03): ಟೀಂ ಇಂಡಿಯಾ (Team India) ಆರಂಭಿಕ ಬ್ಯಾಟರ್, ಕನ್ನಡಿಗ ಮಯಾಂಕ್ ಅಗರ್‌ವಾಲ್ (Mayank Agarwal), ನ್ಯೂಜಿಲೆಂಡ್ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಸಿಡಿಸಿ ಅಬ್ಬರಿಸಿದ್ದಾರೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಮಯಾಂಕ್ ಅಗರ್‌ವಾಲ್ ತಮ್ಮ ಟೆಸ್ಟ್ ವೃತ್ತಿ ಜೀವನದ 4ನೇ ಟೆಸ್ಟ್ ಶತಕ ಬಾರಿಸಿ ಘರ್ಜಿಸಿದ್ದಾರೆ. ಬರೋಬ್ಬರಿ ಎರಡು ವರ್ಷಗಳ ಬಳಿಕ ಮಯಾಂಕ್ ಅಗರ್‌ವಾಲ್ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, ಇತ್ತೀಚಿನ ಕೆಲ ಪಂದ್ಯಗಳಲ್ಲಿ ನಿರೀಕ್ಷಿತ ರನ್ ಗಳಿಸಲು ವಿಫಲವಾಗಿದ್ದ ಮಯಾಂಕ್ ಅಗರ್‌ವಾಲ್, ಮಹತ್ವದ ಪಂದ್ಯದಲ್ಲೇ ಆಕರ್ಷಕ ಶತಕ ಬಾರಿಸಿ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು 196 ಎಸೆತಗಳನ್ನು ಎದುರಿಸಿದ ಮಯಾಂಕ್ ಅಗರ್‌ವಾಲ್, 13 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾಗಿದ್ದಾರೆ. ಈ ಮೊದಲು ಮಯಾಂಕ್ ಅಗರ್‌ವಾಲ್ 2019ರ ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ದ ಶತಕ ಚಚ್ಚಿದ್ದರು. ಇದಾದ ಬಳಿಕ ಮಯಾಂಕ್ ಶತಕದ ಬರ ಅನುಭವಿಸಿದ್ದರು.
ಕಾನ್ಪುರ ಟೆಸ್ಟ್ (Kanpur Test) ಪಂದ್ಯದ ಎರಡೂ ಇನಿಂಗ್ಸ್‌ಗಳಿಂದ ಮಯಾಂಕ್ ಅಗರ್‌ವಾಲ್(13+17) ಕೇವಲ 30 ರನ್ ಬಾರಿಸಿದ್ದರು. ಎರಡನೇ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ (Virat Kohli) ವಾಪಾಸ್ಸಾಗಿದ್ದರಿಂದ, ಮಯಾಂಕ್ ಅಗರ್‌ವಾಲ್ ಅವರನ್ನು ತಂಡದಿಂದ ಕೈಬಿಡಲಾಗುತ್ತದೆ ಎಂದೆಲ್ಲಾ ವರದಿಯಾಗಿತ್ತು. ಇದೆಲ್ಲದರ ನಡುವೆ ರಹಾನೆ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರಿಂದ ನಾಯಕ ವಿರಾಟ್ ಕೊಹ್ಲಿ, ಆರಂಭಿಕ ಜೋಡಿಯನ್ನು ಬದಲಿಸುವ ಆಲೋಚನೆ ಮಾಡಲಿಲ್ಲ. ಹೀಗಾಗಿ ಸಿಕ್ಕ ಎರಡನೇ ಅವಕಾಶವನ್ನು ಭರಪೂರವಾಗಿ ಬಳಸಿಕೊಂಡ 30 ವರ್ಷದ ಮಯಾಂಕ್ ಅಗರ್‌ವಾಲ್ ಆಕರ್ಷಕ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
Ind vs NZ Mumbai Test: ಅರ್ಧಶತಕ ಚಚ್ಚಿದ ಮಯಾಂಕ್, ಶೂನ್ಯ ಸುತ್ತಿದ ಕೊಹ್ಲಿ, ಪೂಜಾರ..!
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾಗೆ ಆರಂಭಿಕ ಬ್ಯಾಟರ್‌ಗಳಾದ ಶುಭ್‌ಮನ್ ಗಿಲ್ ಹಾಗೂ ಮಯಾಂಕ್ ಅಗರ್‌ವಾಲ್ ಜೋಡಿ 80 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಶುಭ್‌ಮನ್ ಗಿಲ್ 42 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ ಶೂನ್ಯ ಸುತ್ತಿ ಅಜಾಜ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು. ಟೀಂ ಇಂಡಿಯಾ 80 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದಾದ ಬಳಿಕ ನಾಲ್ಕನೇ ವಿಕೆಟ್‌ಗೆ ಶ್ರೇಯಸ್ ಅಯ್ಯರ್ ಹಾಗೂ ಮಯಾಂಕ್ ಅಗರ್‌ವಾಲ್ ಜೋಡಿ 80 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಶ್ರೇಯಸ್ ಅಯ್ಯರ್ 18 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಇದುವರೆಗೂ ಮಯಾಂಕ್ ಅಗರ್‌ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 4 ಶತಕ ಹಾಗೂ 4 ಅರ್ಧಶತಕ ಬಾರಿಸಿದ್ದಾರೆ. ಈ ಪೈಕಿ ನಾಲ್ಕು ಶತಕಗಳು ತವರಿನಲ್ಲಿ ಬಾರಿಸಿದ್ದರೇ, ನಾಲ್ಕು ಅರ್ಧಶತಕಗಳು ವಿದೇಶದಲ್ಲಿ ಬಾರಿಸಿರುವುದು ವಿಶೇಷ. ಮೊದಲ ಮೂರು ಶತಕಗಳನ್ನು ಮಯಾಂಕ್ 2019ರಲ್ಲಿ ಬಾರಿಸಿದ್ದರು. ನವೆಂಬರ್ 30ರಂದು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು 12 ಕೋಟಿ ರುಪಾಯಿ ನೀಡಿ ಮಯಾಂಕ್ ಅಗರ್‌ವಾಲ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಇದಾಗಿ ಕೇವಲ ಮೂರು ದಿನ ತುಂಬುವುದರೊಳಗಾಗಿ ಮಯಾಂಕ್ ಅಗರ್‌ವಾಲ್ ಶತಕ ಬಾರಿಸುವ ಮೂಲಕ ಮುಂಬರುವ ದಿನಗಳಲ್ಲಿ ಮತ್ತೆ ಅಬ್ಬರಿಸುವ ಮುನ್ಸೂಚನೆ ನೀಡಿದ್ದಾರೆ.