Asianet Suvarna News Asianet Suvarna News

Ind vs NZ Mumbai Test: ಅರ್ಧಶತಕ ಚಚ್ಚಿದ ಮಯಾಂಕ್, ಶೂನ್ಯ ಸುತ್ತಿದ ಕೊಹ್ಲಿ, ಪೂಜಾರ..!

* ಮುಂಬೈ ಟೆಸ್ಟ್‌ನಲ್ಲಿ ಆಕರ್ಷಕ ಅರ್ಧಶತಕ ಚಚ್ಚಿದ ಮಯಾಂಕ್‌ ಅಗರ್‌ವಾಲ್

* ಶೂನ್ಯ ಸುತ್ತಿದ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ, ನಾಯಕ ಕೊಹ್ಲಿ

* ಮೊದಲ ದಿನದಾಟದ ಚಹಾ ವಿರಾಮದ ವೇಳೆಗೆ ಟೀಂ ಇಂಡಿಯಾ 111/3

Ind vs NZ Mumbai Test Mayank Agarwal Half Century helps Team India Stable after 3 Quick wickets Fall kvn
Author
Bengaluru, First Published Dec 3, 2021, 2:58 PM IST

ಮುಂಬೈ(ಡಿ.03): ಆರಂಭಿಕ ಬ್ಯಾಟರ್‌ಗಳಾದ ಶುಭ್‌ಮನ್ ಗಿಲ್‌ (Shubman Gill) ಹಾಗೂ ಮಯಾಂಕ್‌ ಅಗರ್‌ವಾಲ್ (Mayank Agarwal) ದಿಟ್ಟ ಆರಂಭದ ಹೊರತಾಗಿಯೂ, ಕೇವಲ 16 ಎಸೆತಗಳ ಅಂತರದಲ್ಲಿ ಟೀಂ ಇಂಡಿಯಾ (Team India) ಅಗ್ರ ಕ್ರಮಾಂಕದ ಮೂವರು ಪ್ರಮುಖ ಬ್ಯಾಟರ್‌ಗಳನ್ನು ಕಳೆದುಕೊಂಡಿದೆ. ಮುಂಬೈ ಟೆಸ್ಟ್‌ ಪಂದ್ಯದ ಮೊದಲ ದಿನದಾಟದ ಚಹಾ ವಿರಾಮದ ವೇಳೆಗೆ ಭಾರತ ತಂಡವು 3 ವಿಕೆಟ್ ಕಳೆದುಕೊಂಡು 111 ರನ್‌ ಬಾರಿಸಿದೆ. ಮಯಾಂಕ್‌ ಅಗರ್‌ವಾಲ್ ಆಕರ್ಷಕ ಅರ್ಧಶತಕ(52) ಬಾರಿಸಿ ಫಾರ್ಮ್‌ಗೆ ಮರಳಿದ್ದಾರೆ

ಮುಂಬೈನಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆ ಸುರಿದಿದ್ದರಿಂದ ಮೈದಾನ ಒದ್ದೆಯಾಗಿತ್ತು. ಹೀಗಾಗಿ ಮೊದಲ ಸೆಷನ್ ಆಟ ನಡೆಯಲಿಲ್ಲ. ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಮೊದಲು ಬ್ಯಾಟಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟ್‌ ಬೀಸಿದ ಆರಂಭಿಕ ಜೋಡಿಯಾದ ಶುಭ್‌ಮನ್‌ ಗಿಲ್ ಹಾಗೂ ಕನ್ನಡಿಗ ಮಯಾಂಕ್‌ ಅಗರ್‌ವಾಲ್ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 80 ರನ್‌ಗಳ ಜತೆಯಾಟ ನಿಭಾಯಿಸಿತು. ಶುಭ್‌ಮನ್‌ ಗಿಲ್‌ 71 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 44 ರನ್‌ ಬಾರಿಸಿ ಅಜಾಜ್ ಪಟೇಲ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು.

ಶೂನ್ಯ ಸುತ್ತಿದ ಪೂಜಾರ-ವಿರಾಟ್ ಕೊಹ್ಲಿ: ಶುಭ್‌ಮನ್‌ ಗಿಲ್‌ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್‌ ಚೇತೇಶ್ವರ್ ಪೂಜಾರ (Cheteshwar Pujara) ಮತ್ತೊಮ್ಮೆ ಅವಕಾಶ  ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಕಳೆದ 40 ಇನಿಂಗ್ಸ್‌ಗಳಿಂದ ಒಮ್ಮೆಯೂ ಮೂರಂಕಿ ಮೊತ್ತ ದಾಖಲಿಸಲು ಸಫಲರಾಗದ ಪೂಜಾರ, ಇದೀಗ ಕೇವಲ 5 ಎಸೆತಗಳನ್ನು ಎದುರಿಸಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದ್ದಾರೆ. ಕಾನ್ಪುರ ಟೆಸ್ಟ್‌ನ (Kanpur Test) ಮೊದಲ ಇನಿಂಗ್ಸ್‌ನಲ್ಲಿ 26 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 22 ರನ್‌ ಬಾರಿಸಿದ್ದ ಪೂಜಾರ, ಇದೀಗ ಮುಂಬೈ ಟೆಸ್ಟ್‌ನಲ್ಲಿ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿದರು.

Ind vs NZ Mumbai Test: ಕಿವೀಸ್‌ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

ಇನ್ನು ಟಿ20 ವಿಶ್ವಕಪ್‌ ಬಳಿಕ ವಿಶ್ರಾಂತಿ ಪಡೆದು, ಇದೀಗ ತಂಡ ಕೂಡಿಕೊಂಡ ನಾಯಕ ವಿರಾಟ್ ಕೊಹ್ಲಿ ಕೂಡಾ ಶೂನ್ಯ ಸುತ್ತಿ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಕೇವಲ 4 ಎಸೆತಗಳನ್ನು ಎದುರಿಸಿದ ವಿರಾಟ್, ಅಜಾಜ್ ಪಟೇಲ್‌ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. 80 ರನ್‌ಗಳವರೆಗೂ ಒಂದೇ ಒಂದು ವಿಕೆಟ್ ಕಳೆದುಕೊಳ್ಳದ ಟೀಂ ಇಂಡಿಯಾ, ಇದಾದ ಬಳಿಕ ತನ್ನ ಖಾತೆಗೆ ಒಂದೂ ರನ್‌ ಸೇರಿಸದೇ 3 ವಿಕೆಟ್‌ ಕಳೆದುಕೊಂಡಿತು.

 

Ind vs NZ Mumbai Test Mayank Agarwal Half Century helps Team India Stable after 3 Quick wickets Fall kvn

ಆಕರ್ಷಕ ಅರ್ಧಶತಕ ಚಚ್ಚಿದ ಮಯಾಂಕ್ ಅಗರ್‌ವಾಲ್‌: ಮೊದಲ ಟೆಸ್ಟ್‌ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದ ಕನ್ನಡಿಗ ಮಯಾಂಕ್ ಅಗರ್‌ವಾಲ್, ಎರಡನೇ ಟೆಸ್ಟ್‌ನಲ್ಲಿ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು 121 ಎಸೆತಗಳನ್ನು ಎದುರಿಸಿದ ಮಯಾಂಕ್ ಅಗರ್‌ವಾಲ್‌ 6 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 52 ರನ್ ಬಾರಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಮಯಾಂಕ್‌ ಅಗರ್‌ವಾಲ್‌ಗೆ ಮುಂಬೈ ಮೂಲದ ಶ್ರೇಯಸ್ ಅಯ್ಯರ್(7*) ಸಾಥ್ ನೀಡಿದ್ದಾರೆ.

ಸಂಕ್ಷಿಪ್ತ ಸ್ಕೋರ್:

ಭಾರತ: 111/3

ಮಯಾಂಕ್‌ ಅಗರ್‌ವಾಲ್: 52

ಅಜಾಜ್‌ ಪಟೇಲ್: 30/3

(*ಮೊದಲ ದಿನದಾಟದ ಚಹಾ ವಿರಾಮದ ವೇಳೆಗೆ)

Follow Us:
Download App:
  • android
  • ios