ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಈ ಪಂದ್ಯದ ಬಳಿಕ ಮಾಜಿ ಸ್ಪಿನ್ನರ್ ಆರ್. ಅಶ್ವಿನ್ ಭಾರತೀಯ ಆಟಗಾರರ ಪ್ರದರ್ಶನವನ್ನು ವಿಮರ್ಶಿಸಿ ರೇಟಿಂಗ್ ನೀಡಿದ್ದಾರೆ. ಇದರಲ್ಲಿ ಕೆಲವರಿಗೆ ಪೂರ್ಣ ಅಂಕ ನೀಡಿದರೆ, ಇನ್ನು ಕೆಲವರಿಗೆ ಅತಿ ಕಡಿಮೆ ಅಂಕ ನೀಡಿ ಅಚ್ಚರಿ ಮೂಡಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ-20ಪಂದ್ಯವನ್ನೂ ಟೀಂ ಇಂಡಿಯಾ ರೋಚಕವಾಗಿ ಗೆದ್ದುಕೊಂಡಿತು. ಬೆನ್ನಲ್ಲೇ ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಂಡದ ಆಟಗಾರರ ಆಟವನ್ನು ವಿಮರ್ಶೆ ಮಾಡಿದ್ದಾರೆ.
ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ವಿಮರ್ಶೆ ಮಾಡಿರುವ ಅಶ್ವಿನ್, ಯಾವುದೇ ಮುಲಾಜಿಲ್ಲದೆ ಆಟಗಾರರಿಗೆ 10ಕ್ಕೆ ರೇಟಿಂಗ್ ನೀಡಿದ್ದಾರೆ. ಇಲ್ಲಿ ಅಶ್ವಿನ್ ಅವರು ಇಬ್ಬರು ಆಟಗಾರರಿಗೆ 10ಕ್ಕೆ 10 ಪೂರ್ಣ ಅಂಕ ನೀಡಿದ್ದಾರೆ. ಇಬ್ಬರು ಯುವ ಆಟಗಾರರಿಗೆ ಒಂದು ಅಂಕಗಳನ್ನ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಅಶ್ವಿನ್ ಯಾರಿಗೆ ಎಷ್ಟು ಅಂಕ ನೀಡಿದರು?
ತಿಲಕ್ ಅವರ ಅದ್ಭುತ ಆಟವನ್ನು ಕೊಂಡಾಡಿದ ಅಶ್ವಿನ್.. ಇದು ನಿಜಕ್ಕೂ ಅದ್ಭುತವಾದ ಇನ್ನಿಂಗ್ಸ್. ನಾನು ಅವರಿಗೆ 10ಕ್ಕೆ 10 ಅಂಕಗಳನ್ನ ನೀಡುತ್ತೇನೆ ಎಂದಿದ್ದಾರೆ. ಅದೇ ರೀತಿ ನಿತೀಶ್ ಕುಮಾರ್ ಅವರಿಗೂ 10 ಅಂಕ ನೀಡಿದ್ದಾರೆ. ಅದರಲ್ಲೂ 19ನೇ ಓವರ್ನಲ್ಲಿ ಉತ್ತಮ ಬೌಲಿಂಗ್ ಮಾಡಿರೋದನ್ನು ಅಶ್ವಿನ್ ಮೆಚ್ಚಿಕೊಂಡಿದ್ದಾರೆ.
ಮೂವರಿಗೆ 9 ಅಂಕ
ಅಭಿಷೇಕ್ ಶರ್ಮಾ ಅವರು 21 ಎಸೆತಗಳಲ್ಲಿ 27 ರನ್ ಗಳಿಸಿದ್ದರು. ಪಾಸಿಟಿವ್ ಆಟ ಪ್ರದರ್ಶಿಸಿದ್ದಕ್ಕೆ 9 ಅಂಕಗಳನ್ನ ನೀಡುತ್ತೇನೆ ಎಂದಿದ್ದಾರೆ. ಅರ್ಷ್ದೀಪ್ ಸಿಂಗ್ ಬೌಲಿಂಗ್ಗೆ ಮನಸೋತು 9 ಅಂಕ ನೀಡಿದ್ದಾರೆ. ಇನ್ನೂ ಪ್ರಿನ್ಸ್ ಯಾದವ್ ಅವರಿಗೂ ಉತ್ತಮ ಬೌಲಿಂಗ್ ಮಾಡಿರೋದಕ್ಕೆ 9 ಅಂಕಗಳನ್ನ ನೀಡಿದ್ದಾರೆ.
ಇನ್ನು, ನಮನ್ ಧೀರ್ಗೆ 8 ಅಂಕಗಳನ್ನ ಕೊಟ್ಟಿದ್ದಾರೆ. ಉತ್ತಮವಾಗಿ ಬೌಲಿಂಗ್ ಮಾಡಿದರೂ, ಫೀಲ್ಡಿಂಗ್ನಲ್ಲಿ ಕ್ಯಾಚ್ ಕೈಚೆಲ್ಲಿದ್ದರಿಂದ 8 ಅಂಕ ನೀಡುತ್ತೇನೆ ಎಂದು ಖಡಕ್ ಆಗಿ ಹೇಳಿದ್ದಾರೆ. ಇನ್ನು ವೈಭವ್ ಸೂರ್ಯವಂಶಿ ಆಟಕ್ಕೆ ಅಶ್ವಿನ್ ಬೇಸರ ವ್ಯಕ್ತಪಡಿಸಿದ್ದಾರೆ. ಕೇವಲ, ಒಂದು ಅಂಕವನ್ನು ನೀಡಿದ್ದಾರೆ. ಹಾಗೆಯೇ ಯಾವುದೇ ಆಟಗಾರರಿಗೆ ಸೊನ್ನೆ ನೀಡಿಲ್ಲ. ನನಗೆ ಯಾರಿಗೂ ಸೊನ್ನೆ ನೀಡಲು ಇಷ್ಟ ಇಲ್ಲ. ಹಾಗಾಗಿ 1 ನೀಡುತ್ತಿದ್ದೇನೆ ಎಂದಿದ್ದಾರೆ.
ನಾಯಕ ಶ್ರೇಯಸ್ ಅಯ್ಯರ್ ಅವರಿಗೆ 2 ಅಂಕ ನೀಡಿದ್ದಾರೆ. ನಾಯಕನಾಗಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದಾರೆ. ಹಾಗಾಗಿ 2 ಅಂಕ ಕೊಡುತ್ತಿದ್ದೇನೆ ಎಂದಿದ್ದಾರೆ. ಇನ್ನು, ತೀರಾ ಸಾಧಾರಣ ಪ್ರದರ್ಶನ ನೀಡಿದ ಅಕ್ಷರ್ ಪಟೇಲ್ ಅವರಿಗೂ 2 ಅಂಕ ಕೊಟ್ಟಿದ್ದಾರೆ. ಭುವಿಗೆ ಎರಡು ಅಂಕ ನೀಡಿದ್ರೆ, ಸಂಜು ಸ್ಯಾಮ್ಸನ್ಗೆ ಮೂರು ಅಂಕಗಳನ್ನ ನೀಡುತ್ತೇನೆ ಎಂದಿದ್ದಾರೆ.
ಕ್ರೈಸ್ಟ್ಚರ್ಚ್ ಅಂಗಳದಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ ಐದು ವಿಕೆಟ್ ಕಳೆದುಕೊಂಡು 180 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಭಾರತ ತಂಡವು 19.5 ಓವರ್ನಲ್ಲಿ ನಿಗದಿತ ಗುರಿ ಮುಟ್ಟಿತು. ಟೀಂ ಇಂಡಿಯಾ ಪರ ತಿಲಕ್ ವರ್ಮಾ ಅಜೇಯರಾಗಿ 51 ರನ್ಗಳಿಸಿ ತಂಡವನ್ನು ಗೆಲ್ಲಿಸಿಕೊಟ್ಟರು. ಜೊತೆಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು. ನಮನ್ ಧೀರ್ 17 ಬಾಲ್ನಲ್ಲಿ 31 ರನ್ಗಳಿಸಿದ್ರೆ, ನಿತೀಶ್ ಕುಮಾರ್ ರೆಡ್ಡಿ 13 ಬಾಲ್ನಲ್ಲಿ 26 ರನ್ ಬಾರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು.







