* ಕಾನ್ಪುರ ಟೆಸ್ಟ್‌ನಲ್ಲಿಂದು ಭಾರತ-ನ್ಯೂಜಿಲೆಂಡ್ ಮುಖಾಮುಖಿ* ಭಾರತ ತಂಡವನ್ನು ಮುನ್ನಡೆಸಲಿರುವ ಅಜಿಂಕ್ಯ ರಹಾನೆ* ರಾಹುಲ್ ದ್ರಾವಿಡ್ ಕೋಚ್ ಆದ ಬಳಿಕ ಭಾರತ ಆಡುತ್ತಿರುವ ಮೊದಲ ಟೆಸ್ಟ್ ಸರಣಿ

ಕಾನ್ಪುರ(ನ.25): ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ (Team India) ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ ಪಂದ್ಯಕ್ಕೆ ಇಲ್ಲಿನ ಗ್ರೀನ್ ಪಾರ್ಕ್ ಸ್ಟೇಡಿಯಂ (Green Park Stadium) ಆತಿಥ್ಯವನ್ನು ವಹಿಸಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಯಾವ ರೀತಿಯ ಪ್ರದರ್ಶನ ತೋರಲಿದೆ ಎನ್ನುವ ಕುತೂಹಲ ಜೋರಾಗಿದೆ. 

ರಾಹುಲ್ ದ್ರಾವಿಡ್ (Rahul Dravid) ಟೀಂ ಇಂಡಿಯಾ ಕೋಚ್ ಆದ ಬಳಿಕ ಭಾರತ ತಂಡವು ಆಡುತ್ತಿರುವ ಮೊದಲ ಟೆಸ್ಟ್ ಸರಣಿ ಇದಾಗಿದೆ. ಇನ್ನು ಮೊದಲ ಟೆಸ್ಟ್‌ಗೆ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದು, ಹಂಗಾಮಿ ನಾಯಕ ಅಜಿಂಕ್ಯ ರಹಾನೆ (Ajinkya Rahane) ತಂಡವನ್ನು ಮುನ್ನಡೆಸಲಿದ್ದಾರೆ. ತಾರಾ ಆಟಗಾರರ ಅನುಪಸ್ಥಿತಿಯ ನಡುವೆ ಅಜಿಂಕ್ಯ ರಹಾನೆ, ಟೆಸ್ಟ್ ಸ್ಪೆಷಲಿಸ್ಟ್‌ ಚೇತೇಶ್ವರ್ ಪೂಜಾರ, ರವೀಂದ್ರ ಜಡೇಜಾ (Ravindra Jadeja), ರವಿಚಂದ್ರನ್‌ ಅಶ್ವಿನ್‌ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ. ಭಾರತ ತಂಡವು ಮೂವರು ಸ್ಪಿನ್ನರ್ ಹಾಗೂ ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿದಿದೆ.

Ind Vs NZ Test Series: ಭಾರತಕ್ಕೆ ವಿಶ್ವ ಚಾಂಪಿಯನ್‌ ಕಿವೀಸ್‌ ಸವಾಲು!

Scroll to load tweet…

ಟೆಸ್ಟ್ ಕ್ರಿಕೆಟ್‌ಗೆ ಶ್ರೇಯಸ್ ಅಯ್ಯರ್ ಪಾದಾರ್ಪಣೆ: ಮುಂಬೈ ಮೂಲದ ಪ್ರತಿಭಾನ್ವಿತ ಬ್ಯಾಟರ್‌ ಶ್ರೇಯಸ್ ಅಯ್ಯರ್ (Shreyas Iyer) ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಮೂಲಕ ಭಾರತ ಪರ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ 303ನೇ ಆಟಗಾರ ಎನಿಸಿಕೊಂಡಿದ್ದಾರೆ. ಟೀಂ ಇಂಡಿಯಾ ಕ್ರಿಕೆಟ್‌ ದಿಗ್ಗಜ ಸುನಿಲ್ ಗವಾಸ್ಕರ್, ಶ್ರೇಯಸ್‌ ಅಯ್ಯರ್‌ಗೆ ಟೆಸ್ಟ್‌ ಕ್ಯಾಪ್ ವಿತರಿಸಿದರು. ಈಗಾಗಲೇ ಟಿ20 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಮಿಂಚಿನ ಪ್ರದರ್ಶನ ತೋರಿರುವ ಶ್ರೇಯಸ್ ಅಯ್ಯರ್ ಇದೀಗ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. 

Scroll to load tweet…

ತವರಿನಲ್ಲಿ ಟೀಂ ಇಂಡಿಯಾ ಬಲಿಷ್ಠ: ಭಾರತದಲ್ಲಿ ಟೀಂ ಇಂಡಿಯಾ ಎದುರು ಸರಣಿ ಗೆಲ್ಲುವುದು ಸುಲಭದ ಮಾತಲ್ಲ. 2012ರ ಬಳಿಕ ಇಲ್ಲಿಯವರೆಗೂ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು ಸೋತಿಲ್ಲ. ಇನ್ನು ನ್ಯೂಜಿಲೆಂಡ್ ತಂಡವು 33 ವರ್ಷಗಳ ಹಿಂದೆ ಭಾರತದ ನೆಲದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿತ್ತು. ಇದೀಗ ಬಲಿಷ್ಠ ಭಾರತ ತಂಡಕ್ಕೆ ಶಾಕ್ ನೀಡಲು ಕೇನ್ ವಿಲಿಯಮ್ಸನ್ ನೇತೃತ್ವದ ಹಾಲಿ ವಿಶ್ವಚಾಂಪಿಯನ್‌ ನ್ಯೂಜಿಲೆಂಡ್ ಸಜ್ಜಾಗಿದೆ.

ಕೆಲ ತಿಂಗಳುಗಳ ಹಿಂದಷ್ಟೇ ಸೌಥಾಂಪ್ಟನ್‌ನಲ್ಲಿ ನಡೆದ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (World Test Championship) ಫೈನಲ್‌ನಲ್ಲಿ ಭಾರತ ವಿರುದ್ದ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವು ಚಾಂಪಿಯನ್‌ ಆಗಿ ಮೆರೆದಾಡಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ತವರಿನಲ್ಲಿ ಟೀಂ ಇಂಡಿಯಾ ಸಜ್ಜಾಗಿದೆ. ಇನ್ನೊಂದೆಡೆ ಹಾಲಿ ಟಿ20 ವಿಶ್ವಕಪ್ ರನ್ನರ್‌ ಅಪ್ ನ್ಯೂಜಿಲೆಂಡ್ ತಂಡವು ಭಾರತ ವಿರುದ್ದ 3 ಪಂದ್ಯಗಳ ಟಿ20 ಸರಣಿಯಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿತ್ತು. ಇದೀಗ ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿರುವ ಭಾರತ ವಿರುದ್ದ ಪ್ರಾಬಲ್ಯ ಮೆರೆಯಲು ಕೇನ್ ವಿಲಿಯಮ್ಸನ್ ಪಡೆ ಎದುರು ನೋಡುತ್ತಿದೆ.

ತಂಡಗಳು ಹೀಗಿವೆ ನೋಡಿ:

ಭಾರತ ಕ್ರಿಕೆಟ್ ತಂಡ: ಶುಭ್‌ಮನ್ ಗಿಲ್‌, ಮಯಾಂಕ್ ಅಗರ್‌ವಾಲ್‌, ಚೇತೇಶ್ವರ್ ಪೂಜಾರ, ಶ್ರೇಯಸ್ ಅಯ್ಯರ್‌, ಅಜಿಂಕ್ಯ ರಹಾನೆ(ನಾಯಕ), ವೃದ್ದಿಮಾನ್ ಸಹಾ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್‌, ಇಶಾಂತ್ ಶರ್ಮಾ‌, ಅಕ್ಷರ್‌ ಪಟೇಲ್, ಉಮೇಶ್ ಯಾದವ್.

ನ್ಯೂಜಿಲೆಂಡ್ ಕ್ರಿಕೆಟ್ ತಂಡ: ಟಾಮ್ ಬ್ಲಂಡೆಲ್‌, ವಿಲ್ ಯಂಗ್, ಕೇನ್ ವಿಲಿಯಮ್ಸನ್‌(ನಾಯಕ), ರಾಸ್ ಟೇಲರ್‌, ಟಾಮ್ ಲ್ಯಾಥಮ್‌, ರಚಿನ್‌ ರವೀಂದ್ರ, ಏಜಾಜ್‌ ಪಟೇಲ್, ಟಿಮ್ ಸೌಥಿ, ಕೈಲ್ ಜೇಮಿಸನ್‌, ವಿಲಿಯಮ್ ಸೋಮರ್‌ವಿಲ್ಲೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಹಾಟ್ ಸ್ಟಾರ್